Wednesday, June 12, 2024

ಪ್ರಾಯೋಗಿಕ ಆವೃತ್ತಿ

ಎಲೆಮರೆಯ ಕಾಯಿ ನಾಟಿ ವೈದ್ಯೆ: ನಾಗಮ್ಮಜ್ಜಿ

ಎಸ್.ಮಂಜು. ಮಳವಳ್ಳಿ

ಕೆಲವರಿರ್ತಾರೆ …. ಯಾವುದೇ ಪ್ರಚಾರ ಬಯಸದೆ ಶಿಸ್ತಿನಿಂದ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡ್ತಿರ್ತಾರೆ.ಇನ್ನು ಕೆಲವರು ದೊಡ್ಡ ಪ್ರಚಾರವನ್ನ ಬಯಸಿ ಅಗಾಗ್ಗೆ ಸುದ್ದಿಯಾಗ್ತಾ ಇರ್ತಾರೆ. ಇಂತಹವರ ಮಧ್ಯೆ ಯಾವುದೇ ಪ್ರಚಾರವಿಲ್ಲದೆ ತಮ್ಮ ಬಳಿಗೆ ಬರುವ ಜನರ ಕಾಯಿಲೆಗಳಗೆ ನಾಟಿ ಮದ್ದು ನೀಡುವ ಮಳವಳ್ಳಿ ನಾಗಮ್ಮಜ್ಜಿಯ ಬಗ್ಗೆ ತಿಳಿಯಲೇಬೇಕಾದ ಇಂಟರೆಸ್ಟಿಂಗ್ ಕಥೆಗಳು ಹಲವಾರಿದೆ.

ಎಲೆಮರೆ ಕಾಯಿಯಂತೆ ನಾಟಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ 90 ರ ವಯೋಮಾನದ  ನಾಗಮ್ಮಜ್ಜಿ ಯಾವುದೇ ಸ್ವಾರ್ಥ ಇಲ್ಲದೆ ತಮ್ಮ ಬಳಿಗೆ ಬರುವ ರೋಗಿಗಳಿಗೆ ಉಚಿತವಾಗಿ ಗಿಡ ಮೂಲಿಕೆಗಳಿಂದ ತಯಾರಿಸಿದ ಔಷಧಿ ನೀಡುತ್ತಾ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ .

ಮಂಡ್ಯ ಜಿಲ್ಲೆ  ಮಳವಳ್ಳಿ ಪಟ್ಟಣದ ಮಡಿವಾಳರ ಬೀದಿಯಲ್ಲಿ ವಾಸವಾಗಿರುವ ನಾಗಮ್ಮ ಎಂಬ 90 ವರ್ಷದ ಅಜ್ಜಿ ಕಳೆದ ನಲವತ್ತು ವರ್ಷಗಳಿಂದ ಹರಸ್ಥಿ(ಕುರ), ಕೀಲುಬಾವು, ಕಾಮಾಲೆ ರೋಗಕ್ಕೆ ಗಿಡಮೂಲಿಕೆಯಿಂದ ತಯಾರಿಸಿದ ಔಷಧಿ ನೀಡುತ್ತಾ ಸಾವಿರಾರು ರೋಗಿಗಳನ್ನು ಗುಣಪಡಿಸಿದ್ದಾರೆ.

ಜನರಿಗೆ ಮತ್ತು ಗೋವುಗಳಿಗೆ ಹೊಟ್ಟೆ ಉಬ್ಬರ ಆದರೆ ನಾಗಮ್ಮಜ್ಜಿ  ವಿಭೂತಿ ಉಂಡೆಯಿಂದ ಮಂತ್ರಿಸಿ  ಕೊಟ್ಟರೆ ಹೊಟ್ಟೆ ಉಬ್ಬರ ಗುಣವಾಗುತ್ತದೆ. ವಿಭೂತಿ ಉಂಡೆಗೆ ಮೂರು ಸಲ ಉಗಿದು ಸ್ವಲ್ಪ ತಿಂದರೆ ಹೊಟ್ಟೆ ಉಬ್ಬರ,ಹೊಟ್ಟೆನೋವು ವಾಸಿಯಾಗುತ್ತದೆ.ಗೋವುಗಳಿಗೆ ಹೊಟ್ಟೆ ಉಬ್ಬರಿಸಿಕೊಂಡಾಗ ಒಣಹುಲ್ಲಿನ ಒಳಗೆ ವಿಭೂತಿ ಉಂಡೆಯನ್ನ ಹಾಕಿ ಕೊಟ್ಟರೆ ಹೊಟ್ಟೆ ಉಬ್ಬರ ಇಳಿಯುತ್ತದೆ. ಹಲವರು ತಮ್ಮ ಗೋವುಗಳನ್ನು ಇವರ ಬಳಿ ಕರೆತಂದು ಚಿಕಿತ್ಸೆ ಕೊಡಿಸಿ ಗುಣಮುಖ ಮಾಡಿಕೊಂಡಿದ್ದಾರೆ.

ಮಕ್ಕಳು ಬಿದ್ದು ಗಾಬರಿಗೊಂಡು ಭೇದಿ ಆಗುತ್ತಿದ್ದರೆ ಆ ಮಕ್ಕಳಿಗೆ ಬಿದ್ದಗೂಳು ಎಂಬ  ವಿಶೇಷ ಪೂಜೆ ಮಾಡುತ್ತಾರೆ. ಅಂತಹ ಮಕ್ಕಳಿಗೆ ಗಿಡಮೂಲಿಕೆಯ ಔಷಧಿಯನ್ನು ಸೊಂಟಕ್ಕೆ ಕಟ್ಟಿ ಕೊಡುತ್ತಾರೆ ಆಗ ಒಂದೆರಡು ದಿನದಲ್ಲಿಯೇ ಮಕ್ಕಳು ಭಯದಿಂದ ವಿಮುಖರಾಗಿ,ಬೇಧಿ ಕೂಡ ನಿಲ್ಲುತ್ತದೆ.ಹಿಂದೂ,ಮುಸ್ಲಿಂ, ಕ್ರೈಸ್ತರೆನ್ನದೆ ಎಲ್ಲ ಸಮುದಾಯದ ಜನರು ಇವರ ಬಳಿ ಬಂದು ನಾಟಿ ಮದ್ದು ಪಡೆದು ಗುಣಮುಖರಾಗಿದ್ದಾರೆ.

ಬಹಳಷ್ಟು ಹಿಂದೆ ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರೆದಿರಲಿಲ್ಲ.ಆಗ ತಮ್ಮ ಸಮುದಾಯದ ನೂರಾರು ಹೆಣ್ಣು ಮಕ್ಕಳಿಗೆ ಹೆರಿಗೆ ಮಾಡಿಸಿದ ಖ್ಯಾತಿಯೂ ನಾಗಮ್ಮಜ್ಜಿಗಿದೆ.ತಮ್ಮ ತಾಯಿಯಿಂದ ನಾಟಿ ವೈದ್ಯ ಚಿಕಿತ್ಸೆ ಕಲಿತಿರುವ ನಾಗಮ್ಮಜ್ಜಿ ತಮ್ಮ ಮಗಳು ನಾಗರತ್ನ ಅವರಿಗೆ ಈ ನಾಟಿ ವೈದ್ಯವನ್ನು ಕಲಿಸಿದ್ದಾರೆ.

ಅವರು ಮನೆ ಬಳಿ ಬಂದವರಿಗೆ ನಾಟಿ ಮದ್ದು ಕೊಡುತ್ತಾರೆ.ವೈದ್ಯರು,ಪಶುವೈದ್ಯರು ಇರುವ ಕಾಲದಲ್ಲಿ ನಾಗಮ್ಮಜ್ಜಿ ಬಳಿ ಬರುವವರ ಸಂಖ್ಯೆ ಕಡಿಮೆಯಾಗಿದ್ದರೂ ಬಂದವರಿಗೆ ನಾಟಿ ಮದ್ದು ಕೊಡುತ್ತಿದ್ದಾರೆ.
ಮಡಿವಾಳ ಸಮುದಾಯದ ಜನರು ಹಿರಿಯರಾದ ನಾಗಮ್ಮಜ್ಜಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.ಇವರನ್ನು ಮದುವೆಯಂತಹ ಶುಭ ಸಮಾರಂಭಗಳಿಗೆ, ಸಿದ್ಧಪ್ಪಾಜಿ ದೇವರ ಗುಡ್ಡನ ಬಿಡಿಸುವುದಂತಹ  ಹಲವಾರು ಪೂಜಾ ಕಾರ್ಯಕ್ರಮಗಳಲ್ಲಿ ಇವರು ಮುಂದೆ ನಿಂತು ಶಾಸ್ತ್ರಗಳನ್ನು ಮಾಡಿಕೊಡುತ್ತಾರೆ.

ನಾಗಮ್ಮಜ್ಜಿ ಮುಂದೆ ನಿಂತು ಶಾಸ್ತ್ರಗಳನ್ನು ಮಾಡಿಕೊಟ್ಟರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಮಡಿವಾಳ ಸಮುದಾಯದ್ದು. ಈಗ ವಯಸ್ಸಾದ ಕಾರಣ ಅಷ್ಟಾಗಿ ಕಾರ್ಯಕ್ರಮಗಳಿಗೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ.ಮೂವರು ಹೆಣ್ಣು ಮಕ್ಕಳು, ಹತ್ತು ಮೊಮ್ಮಕ್ಕಳ ಜೊತೆ 90ರ ಇಳಿವಯಸ್ಸಿನಲ್ಲಿ ತುಂಬು ಜೀವನ ನಡೆಸುತ್ತಿರುವ ನಾಗಮ್ಮಜ್ಜಿ ನೂರಾರು ವರ್ಷಗಳ ಕಾಲ ಬಾಳಲಿ ಎಂಬುದು ನುಡಿ ಕರ್ನಾಟಕದ ಆಶಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!