Thursday, September 19, 2024

ಪ್ರಾಯೋಗಿಕ ಆವೃತ್ತಿ

ಮತದಾರರು – ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದು ಶೋಭೆ ತರುವಂತದ್ದಲ್ಲ : ಮಲ್ಲಾಜಮ್ಮ

ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ, ಮುಖಂಡರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕೇ ಹೊರತು ಅನಗತ್ಯ ಹೇಳಿಕೆ ನೀಡಿ ಮತದಾರರು, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದು ಯಾರಿಗೂ ಶೋಭೆ ತರುವಂತದ್ದಲ್ಲ ಎಂದು ಮಾಜಿ ಶಾಸಕ ಮಲ್ಲಾಜಮ್ಮ ಹೇಳಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ಚಿಕ್ಕಲಿಂಗಯ್ಯ, ಚಿನ್ನಪಿಳ್ಳೆ ಕೊಪ್ಪಲು ಸಿದ್ದೇಗೌಡ ಎಲ್ಲರೂ ಒಂದೇ ಪಕ್ಷದ ನಾಯಕರು. ಸಿದ್ದರಾಮಯ್ಯನವರು ಒಂದು ಸಮಾಜಕ್ಕೆ ನಾಯಕರಲ್ಲ, ಅವರು ಈ ರಾಜ್ಯದ ಎಲ್ಲಾ ಸಮುದಾಯಗಳಿಗೂ ನಾಯಕರು. ಕಾಂಗ್ರೆಸ್ ಟಿಕೆಟ್ ಪಡೆಯಲು ಇವರು ಅರ್ಹರಲ್ಲ,ಇವರು ಅರ್ಹರು ಎಂದು ಯಾರ ವಿರುದ್ಧವು ಮಾತನಾಡುವುದು ಸರಿಯಲ್ಲ. ಇದು ಮತದಾರರನ್ನು, ಪಕ್ಷದ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡುತ್ತದೆ. ಇದರಿಂದ ಜನರಿಗೆ, ಅಭಿವೃದ್ದಿಗೆ ತೊಂದರೆ ಆಗುತ್ತದೆ. ಕಾರ್ಯಕರ್ತರು, ಮತದಾರರಲ್ಲಿ ಗೊಂದಲ ಮಾಡಿಸುತ್ತದೆ.ಇದು ನಮಗ್ಯಾರಿಗೂ ಶೋಭೆ ತರುವುದಿಲ್ಲ ಎಂದರು.

ನಾವೆಲ್ಲ ಒಂದೇ ಪಕ್ಷದವರಾಗಿದ್ದು, ಒಗ್ಗಟ್ಟನ್ನು ಪ್ರದರ್ಶನ ಮಾಡಿ ಯಾರು ಟಿಕೆಟ್ ತರುತ್ತಾರೋ ಅವರ ಪರ ಕೆಲಸ ಮಾಡಿ ಈ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತರುವುದೇ ನಮ್ಮ ಮುಖ್ಯ ಉದ್ದೇಶವಾಗಬೇಕು. ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿತರಾಗಿ ಮೂರು ಮಂದಿ ಅರ್ಜಿ ಸಲ್ಲಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ತೀರ್ಮಾನಿಸುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಮಾಡಿರುವ ಸೇವೆ, ಹಿರಿತನ, ಪಕ್ಷನಿಷ್ಠೆ, ಜನಾಭಿಪ್ರಾಯ, ಸಾರ್ವಜನಿಕರಿಗೆ ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದನ್ನೆಲ್ಲ ಪರಿಗಣಿಸಿ ಟಿಕೆಟ್ ನೀಡುತ್ತಾರೆ. ಅವರ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರಬೇಕೆ ಹೊರತು ಈ ರೀತಿ ಪದೇ ಪದೇ ಮಾಧ್ಯಮಗಳ ಮುಂದೆ ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಒಂದುಗೂಡಿ ಶ್ರಮಿಸಬೇಕು. ಏನೇ ಭಿನಾಭಿಪ್ರಾಯವಿದ್ದರೂ ಮರೆತು ಮಳವಳ್ಳಿ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ತರಲು ಶ್ರಮಿಸಬೇಕು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!