Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾಡುಹಂದಿ ದಾಳಿಗೆ ವ್ಯಕ್ತಿ ಬಲಿ: ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ನಾಗಮಂಗಲ ತಾಲ್ಲೂಕಿನ ಚಿಕ್ಕಯಗಟಿ ಗ್ರಾಮದ ಬಳಿ ಕಾಡುಹಂದಿ ದಾಳಿಗೆ ಸಿಲುಕಿ ಮಂಡ್ಯ ತಾಲ್ಲೂಕಿನ ಚಿಂದಗಿರಿದೊಡ್ಡಿ ಗ್ರಾಮದ ಶಿವ (48) ಎಂಬ ವ್ಯಕ್ತಿ ಬಲಿಯಾಗಿರುವ ಘಟನೆ ಕಳೆದ ರಾತ್ರಿ ಜರುಗಿದೆ.

ಗುರುವಾರ ಸಂಜೆ ವೇಳೆ ಚಿಕ್ಕಯಗಟಿ ಬಳಿ ಮಂಡ್ಯ- ನಾಗಮಂಗಲ ರಸ್ತೆಯಲ್ಲಿ ಬೈಕಿನಲ್ಲಿ ಬರುತ್ತಿದ್ದಾಗ ಏಕಾಏಕಿ ಕಾಡುಹಂದಿ ದಾಳಿ ಮಾಡಿ, ಶಿವುವಿನ ಎಡತೊಡೆ ಮತ್ತು ಮರ್ಮಾಂಗಕ್ಕೆ ಗುದ್ದಿದ ಪರಿಣಾಮ ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಘಟನಾ ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿ ಮೃತದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು.

ಮಿಮ್ಸ್ ಶವಗಾರದ ಬಳಿ ಮರಣೋತ್ತರ ಪರೀಕ್ಷೆ ನಡೆಯುವ ವೇಳೆ ಶುಕ್ರವಾರ ಬೆಳಿಗ್ಗೆ ಆಗಮಿಸಿದ ಮೃತನ ಸಂಬಂಧಿಕರು ಹಾಗೂ ಚಿಂದಗಿರಿದೊಡ್ಡಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿ ಪ್ರತಿಭಟಿಸಿ, ಮರಣೋತ್ತರ ಪರೀಕ್ಷೆಗೆ ಅಡ್ಡಿಪಡಿಸಿದರು.

ಮೃತ ಶಿವು ಪತ್ನಿ ಪವಿತ್ರ, ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಶಾಸಕ ರವಿಕುಮಾರ್ ಭೇಟಿ

ಮಿಮ್ಸ್ ಶವಾಗಾರಕ್ಕೆ ಆಗಮಿಸಿದ ಶಾಸಕ ರವಿಕುಮಾರ್ ಗೌಡ ಪ್ರತಿಭಟನಾಕಾರರ ಅಹವಾಲು ಆಲಿಸಿ, ಮೃತನ ಕುಟುಂಬಕ್ಕೆ ವೈಯಕ್ತಿಕವಾಗಿ ₹ 50 ಸಾವಿರ ರೂ. ಪರಿಹಾರ ನೀಡಿ, ಪೋಷಕರನ್ನು ಸಮಾಧಾನಿಸಿದರು. ಅರಣ್ಯ ಇಲಾಖೆಯಿಂದ 15 ಲಕ್ಷ ರೂ. ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಶಾಸಕರ ಭರವಸೆ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟ ಪ್ರತಿಭಟನಾಕಾರರು, ಕಾಡು ಪ್ರಾಣಿ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಆಗ್ರಹಿಸಿದರು.

ಅಲೆಮಾರಿ ಸಮುದಾಯಕ್ಕೆ ಸೇರಿದ ಮೃತ ವ್ಯಕ್ತಿಯ ಕುಟುಂಬಕ್ಕೆ ಆಸ್ತಿ ಇಲ್ಲ, ಕೂಲಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು, ಆದರೆ ದುರಂತದಲ್ಲಿ ಮನೆ ನಿರ್ವಹಣೆ ಮಾಡುತ್ತಿದ್ದ ಶಿವು ಸಾವನಪ್ಪಿರುವುದರಿಂದ ಕುಟುಂಬ ಬೀದಿಗೆ ಬಿದ್ದಂತಾಗಿದೆ, ಅವರ ಬದುಕು ಮೂರಾಬಟ್ಟೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು, ಕುಟುಂಬದ ಜೀವನ ಭದ್ರತೆಗಾಗಿ ಮೃತರ ಪುತ್ರ ಶ್ರೀನಿವಾಸ್ ಗೆ ಖಾಯಂ ಸರ್ಕಾರಿ ಉದ್ಯೋಗ ನೀಡಬೇಕು, ಮೃತನ ಪತ್ನಿ ಅನಾರೋಗ್ಯ ಪೀಡಿತರಾಗಿದ್ದು ಇವರಿಗೆ ಮಾಸಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು. ಸಹಾಯಕ ಅರಣ್ಯ ಅಧಿಕಾರಿ ಶಿವರಾಮು ಹಾಜರಿದ್ದು, ಪ್ರತಿಭಟನಾಕಾರರ ದೂರು ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ , ಗೌರವಾಧ್ಯಕ್ಷ ರಾಮ ಶೆಟ್ಟಿ , ರಾಜ್ಯ ಉಪಾಧ್ಯಕ್ಷ ವೆಂಕಟೇಶ್, ಕೃಷ್ಣಕುಮಾರ್, ರವಿ, ಟೆಂಪೋ ರಾಮಕೃಷ್ಣ, ಸಂದೀಪ್ ಕೆ.ವಿ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!