ಮನ್ಮುಲ್ನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಇಬ್ಬರು ನಿರ್ದೇಶಕರನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಡ್ಯದ ಅಶೋಕನಗರದಲ್ಲಿರುವ ಸಹಕಾರ ಸಂಘಗಳ ಸಹಾಯಕರ ನಿಬಂಧಕರ ಕಚೇರಿ ಮುಂದೆ ಜಮಾಯಿಸಿದ ಜೆಡಿಎಸ್ ಬೆಂಬಲಿತ ಮನ್ಮುಲ್ ನಿರ್ದೇಶಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮನ್ಮುಲ್ನಲ್ಲಿ ಅಧಿಕಾರ ಹಿಡಿಯುವ ಉದ್ದೇಶದಿಂದ ಕಾಂಗ್ರೆಸ್ ವಾಮಮಾರ್ಗ ಅನುಸರಿಸಿದೆ. ಕಳೆದ ಜು.6ರಂದು ಅಧ್ಯಕ್ಷ ಸ್ಥಾನದ ಚುನಾವಣೆಯ ಸಂದರ್ಭದಲ್ಲಿ ಇಬ್ಬರು ನಿರ್ದೇಶಕರನ್ನು ಅನರ್ಹಗೊಳಿಸಿ,ಅದೇ ದಿನ ಸಂಜೆ ಅನರ್ಹತೆಯ ಆದೇಶವನ್ನು ವಾಪಸ್ ಪಡೆದಿತ್ತು.ಅದರಂತೆ ಇಂದು ಸಹ ಅದೇ ನಿರ್ದೇಶಕರನ್ನು ಅನರ್ಹಗೊಳಿಸಿ ಕುತಂತ್ರದಿಂದ ಅಧಿಕಾರ ಹಿಡಿದಿದೆ ಎಂದು ಕಿಡಿಕಾರಿದರು.
ಸರ್ಕಾರ ಹಾಗೂ ಸಚಿವ ಎನ್.ಚಲುವರಾಯಸ್ವಾಮಿ ಭ್ರಷ್ಟ ಅಧಿಕಾರಿಯನ್ನು ಮುಂದಿಟ್ಟುಕೊಂಡು ಇಬ್ಬರು ನಿರ್ದೇಶಕರನ್ನು ಅನರ್ಹಗೊಳಿಸುವ ಮೂಲಕ ಮನ್ಮುಲ್ನ ಅಧಿಕಾರ ಹಿಡಿದಿರುವ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು. ಇದರ ವಿರುದ್ಧ ಹೋರಾಟ ಮಾಡಲಾಗುವುದು. ಅಲ್ಲದೆ, ಸಹಾಯಕ ನಿಬಂಧಕರು ಆಗಮಿಸಿ ಕಾರಣ ತಿಳಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
ಮಾತಿನ ಚಕಮಕಿ
ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ನುಗ್ಗಲು ಯತ್ನಿಸಿದರು. ಆಗ ಪೊಲೀಸರು ತಡೆದರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ವಾಗ್ವಾದ, ತಳ್ಳಾಟ ನೂಕಾಟ ನಡೆಯಿತು. ಯಾಕೆ ನೀವು ನಮಗೆ ಅನ್ಯಾಯ ಮಾಡುತ್ತೀರಾ. ನಾವು ಅಧಿಕಾರಿಯೊಂದಿಗೆ ಮಾತನಾಡಬೇಕು ಎಂದು ಜೆಡಿಎಸ್ ಮುಖಂಡರು ಪಟ್ಟು ಹಿಡಿದರು. ನಂತರ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಬಾಗಿಲಲ್ಲೇ ಕುಳಿತು ಧರಣಿ ಮುಂದುವರೆಸಿದರು.
ಕಚೇರಿ ಮೇಲ್ವಿಚಾರಕಿಗೆ ತರಾಟೆ
ಪ್ರತಿಭಟನೆಗೂ ಮುನ್ನ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ನುಗ್ಗಿದ ಜೆಡಿಎಸ್ ಬೆಂಬಲಿತ ನಿರ್ದೇಶಕರು ಸಹಾಯಕ ನಿಬಂಧಕರಿಗೆ ತರಾಟೆಗೆ ತೆಗೆದುಕೊಳ್ಳಲು ಯತ್ನಿಸಿದರು. ಆದರೆ ಸಹಾಯಕ ನಿಬಂಧಕರು ಕಚೇರಿಯಲ್ಲಿ ಇರಲಿಲ್ಲ. ಇದರಿಂದ ಕೆರಳಿದ ನಿರ್ದೇಶಕರು ಮೇಲ್ವಿಚಾರಕಿ ಫಿಲೋಮಿನಾ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾನೂನು ಪ್ರಕಾರ ಕೆಲಸ ಮಾಡುವುದನ್ನು ಬಿಟ್ಟು ಸರ್ಕಾರದ ಕೈಗೊಂಬೆಗಳಾಗಿದ್ದೀರಾ ಎಂದು ಕಿಡಿಕಾರಿದರು.

ಅನರ್ಹಗೊಳಿಸಬೇಕಾದರೆ ಒಂದು ತಿಂಗಳ ಹಿಂದೆಯೇ ನೋಟಿಸ್ ನೀಡಬೇಕು. ಅದಕ್ಕೆ ಉತ್ತರ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಏಕಾಏಕಿ ಚುನಾವಣೆ ದಿನವೇ ಅನರ್ಹ ಮಾಡಿರುವುದು ನಿಮ್ಮ ಭ್ರಷ್ಟ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಸಹಾಯಕ ನಿಬಂಧಕರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಡೆಸುತ್ತೇವೆ. ಕೂಡಲೇ ಆತನಿಗೆ ಕರೆ ಮಾಡಿ ಬರುವಂತೆ ತಿಳಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಬೆಂಬಲಿತ ನಿರ್ದೇಶಕರಾದ ಶಾಸಕ ಎಚ್.ಟಿ.ಮಂಜು, ಬಿ.ಆರ್.ರಾಮಚಂದ್ರು,ಎಂ.ಎಸ್.ರಘುನಂದನ್, ವಿಶ್ವನಾಥ್, ನೆಲ್ಲಿಗೆರೆ ಬಾಲು, ಕೋಟಿ ರವಿ, ನಗರಸಭೆ ಸದಸ್ಯ ನಾಗೇಶ್, ಮುಖಂಡ ಬಿ.ಆರ್.ಸುರೇಶ್ ಸೇರಿದಂತೆ ಮತ್ತಿತರರಿದ್ದರು.




