ನಾನು ಎಂದಿಗೂ ದ್ವೇಷ ರಾಜಕಾರಣ ಮಾಡಲ್ಲ. ಕ್ಷೇತ್ರದಲ್ಲಿರುವ ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ಜನರು ನನ್ನ ಬಳಿ ಬರಲಿ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಮಳವಳ್ಳಿ ಮುಖ್ಯ ರಸ್ತೆಯಲ್ಲಿ ತಮ್ಮ ಕಚೇರಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಸುತ್ತಮುತ್ತಲಿನ ಗ್ರಾಮಗಳ ನಾಗರೀಕರು ತಮ್ಮ ಕುಂದು-ಕೊರತೆಗಳನ್ನು ತಿಳಿಸಲು ಮದ್ದೂರಿಗೆ ಬರಬೇಕಿತ್ತು. ಇದರಿಂದ ಅವರಿಗೆ ಸಮಯ ವ್ಯರ್ಥವಾಗುತಿತ್ತು ಇವುಗಳನ್ನು ಮನಗಂಡು ಕೆ.ಎಂ.ದೊಡ್ಡಿಯಲ್ಲಿ ಕಚೇರಿ ತೆರದಿದ್ದು ಇದರ ಸದುಪಯೋಗ ಪಡೆದು ಕೊಳ್ಳಿ ಎಂದರು.
ಮದ್ದೂರು ಕ್ಷೇತ್ರದ ಜನತೆಯನ್ನು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ವಿನಾಕಾರಣ ಅಲೆಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇನೆ. ಅಧಿಕಾರಿಗಳು ಜನರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
ಜನತೆಗೆ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ದೊರೆಯದಿರುವ ಬಗ್ಗೆ,ಅಭಿವೃದ್ಧಿ ಪರ ಕೆಲಸಗಳು ಹಾಗೂ ಸಲಹೆ ಸೂಚನೆಗಳನ್ನು ನೀಡಲು ಈ ಕಛೇರಿ ತೆರೆದಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಸಿಬ್ಬಂದಿಯನ್ನು ಸಹ ನಿಯೋಜಿಸುತ್ತಿದ್ದು, ವಾರದಲ್ಲಿ ಎರಡು ದಿನ ಕಚೇರಿಯಲ್ಲಿದ್ದು ಸಮಸ್ಯೆ ಆಲಿಸುತ್ತೇನೆ ಎಂದರು.
ಇಂದಿರಾ ಕ್ಯಾಂಟಿನ್
ಕೆ.ಎಂ.ದೊಡ್ಡಿಯಲ್ಲಿ ಶಾಲಾ-ಕಾಲೇಜುಗಳು ಹೆಚ್ಚಿದ್ದು, ಜನಸಂದಣಿ ಕೂಡ ಅಧಿಕವಾಗಿರುವುದರಿಂದ ಪಟ್ಟಣದ ಹೃದಯ ಭಾಗದಲ್ಲಿ ಶೀಘ್ರ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು ಎಂದು ಭರವಸೆ ನೀಡಿದರು.
ಮದ್ದೂರು ಕ್ಷೇತ್ರದ ಹಲವು ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲದಿರುವ ಬಗ್ಗೆ ಮಾಹಿತಿ ಪಡೆದಿದ್ದು ಈ ಬಗ್ಗೆ ಸಾರಿಗೆ ಸಚಿವರ ಜತೆ ಚರ್ಚಿಸಲಾಗಿದ್ದು, ಕೂಡಲೇ ಬಸ್ ಸೌಕರ್ಯ ಒದಗಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಮದ್ದೂರು ಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿ ಪಡಿಸಲು ಈಗಾಗಲೇ ಕಾಯೋನ್ಮುಖನಾಗಿದ್ದು ಅಗತ್ಯವಿರುವಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ಕ್ರಮ ವಹಿಸುತ್ತೇನೆ ಎಂದರು.
ಕಛೇರಿ ಉದ್ಘಾಟಿಸಿದ ನಂತರ ಸಾರ್ವಜನಿಕರಿಂದ ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿ ಕೆಲವನ್ನು ಸ್ಥಳದಲ್ಲೇ ಬಗೆಹರಿಸಿದರು.
ಈ ವೇಳೆ ಜಿ.ಪಂ.ಮಾಜಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯ ಎ.ಎಸ್.ರಾಜೀವ್, ಮನ್ಮುಲ್ ಮಾಜಿ ಅಧ್ಯಕ್ಷ ಕಾರ್ಕಹಳ್ಳಿ ಬಸವೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಕಪನಿಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಪಿ.ರವಿಚಂದ್ರ, ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಪುಟ್ಟರಾಮು, ಕೆ.ವಿ.ಶ್ರೀನಿವಾಸ್, ಕದಲೂರು ತಿಮ್ಮೇಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.




