ಆರ್ ಎಸ್ ಎಸ್ ಸಂಘಟನೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೇ, ಚಡ್ಡಿ ಸುಡುವುದಾಗಿ ಹೇಳಿಕೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಚಡ್ಡಿ ಸುಟ್ಟರೆ ಕಾಂಗ್ರೆಸ್ ಸಮಾಧಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮದ್ದೂರಿನಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರವಾಗಿ ಮತಯಾಚಿಸಲು ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಡ್ಡಿ ಸುಟ್ಟರೆ ಕಾಂಗ್ರೆಸ್ ನವರು ಸ್ವತಃ ಗುಂಡಿ ತೋಡಿಕೊಂಡು ಸಮಾಧಿಯಾಗುತ್ತಾರೆ.ಆರ್ ಎಸ್ಎಸ್ ಸಂಘಟನೆ ವ್ಯಕ್ತಿಗಳಲ್ಲಿ ರಾಷ್ಟ್ರೀಯತೆ ಮೂಡಿಸಿದೆ.ಸಮಾಜ ಕಟ್ಟಲು ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪಿದೆ.ಆರ್ ಎಸ್ ಎಸ್ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಸರಿಯಲ್ಲ ಎಂದು ಕಿಡಿಕಾರಿದರು.
ಈಗಾಗಲೇ ಜನರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.ಇನ್ನೂ ಅಲ್ಪ ಸ್ವಲ್ಪ ಇರುವುದನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕಾರ ಹಾಕ್ತಾರೆ.ಅವರೇ ಸ್ವತಃ ಗುಂಡಿ ತೋಡಿಕೊಂಡು ಸಮಾಧಿಯಾಗ್ತಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರು ಏನೂ ಬೇಕಾದರೂ ಮಾಡ್ತಾರೆ ಎಂದರು.
ರವಿಶಂಕರ್ ಗೆಲ್ತಾರೆ
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಗೆಲ್ಲುತ್ತಾರೆ. ಪರಿಷತ್ ಕಣದಲ್ಲಿ ನಮಗೆ ಪ್ರತಿಸ್ಪರ್ಧಿ ಕಾಣ್ತಿಲ್ಲ. ಪರಿಷತ್ ಚುನಾವಣೆಯಲ್ಲಿ ಬಿಜೆಪಿದೇ ಗೆಲುವು ಎಂದರು.
ಪಠ್ಯದಲ್ಲೂ ಕಾಂಗ್ರೆಸ್ ರಾಜಕೀಯ
ಪಠ್ಯ ಪರಿಷ್ಕರಣೆಯಲ್ಲಿ ಲೋಪದೋಷ ಇದ್ದರೆ ಸರಿಪಡಿಸುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತದೆ. ಇದುವರೆಗೂ ಪಠ್ಯ ಪುಸ್ತಕದಲ್ಲಿ ಕಾಂಗ್ರೆಸ್ ನವರು ಏನು ಮಾಡಿದ್ರು.? ಬರಗೂರು ರಾಮಚಂದ್ರ ಸಮಿತಿ ಏನು ಮಾಡಿತ್ತು ಎಂಬ ಬಗ್ಗೆ ಗೊತ್ತಿದೆ ಎಂದ ಅವರು, ಪಠ್ಯಪುಸ್ತಕದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ನಿಡಘಟ್ಟ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ಕೆಲಗೆರೆ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮನವಿ ಮಾಡಿದ ಸಚಿವರು ಮೈ.ವಿ. ರವಿಶಂಕರ್ ಪರವಾಗಿ ಮೊದಲನೇ ಪ್ರಾಶಸ್ತ್ಯ ಮತ ನೀಡಬೇಕೆಂದು ಮತಯಾಚನೆ ಮಾಡಿದರು.
ಮದ್ದೂರಿಗೆ ಆಗಮಿಸಿದ ಸಚಿವರನ್ನು ಯುವ ನಾಯಕ ಇಂಡುವಾಳು ಸಚ್ಚಿದಾನಂದ ಅವರು ಬೃಹತ್ ಹಾರವನ್ನು ಹಾಕಿ ಸ್ವಾಗತಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಪಿ. ಉಮೇಶ್, ಮನ್ ಮುಲ್ ನಿರ್ದೇಶಕ ಎಸ್. ಪಿ. ಸ್ವಾಮಿ, ತಾಲೂಕು ಅಧ್ಯಕ್ಷ ರಘು, ಯುವ ಮೋರ್ಚಾ ಅಧ್ಯಕ್ಷ ಸುನಿಲ್, ನಗರ ಘಟಕ ಅಧ್ಯಕ್ಷ ಮಧುಕುಮಾರ್, ತಾಲೂಕು ಮಹಿಳಾ ಅಧ್ಯಕ್ಷೆ ಶ್ವೇತಾ, ನಾಮ ನಿರ್ದೇಶಕ ಸದಸ್ಯ ಮ.ನ.ಪ್ರಸನ್ನ ಕುಮಾರ್, ಕೆ.ಸ್ವಾಮಿ ಮತ್ತಿತರರಿದ್ದರು.