ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಅವರು, ಕೂಡಲೇ ಆಯ್ಕೆ ಪ್ರಕ್ರಿಯೆಯನ್ನು ರದ್ದು ಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದಲ್ಲಿ ಖಾಲಿ ಇರುವ ವಿವಿಧ ವೃಂದದಲ್ಲಿರುವ ವಿವಿಧ 187 ಹುದ್ದೆಗಳಿಗೆ ನೇಮಾಕಾತಿಗಾಗಿ ಆನ್ಲೈನ್ ಮೂಲಕ ಜ.25ರಂದು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಸಾಮಾನ್ಯ ನೇಮಕಾತಿ (ತಿದ್ದುಪಡಿ) ನಿಯಮಗಳನ್ನು ಅಳವಡಿಸಿಕೊಳ್ಳದೆ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಸರ್ಕಾರದ ಅಧಿಸೂಚನೆ ಪ್ರಕಾರ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳಿಗೆ ಮೌಖಿಕ ಸಂದರ್ಶನ ಇಲ್ಲ, ಆದರೆ, ಒಕ್ಕೂಟವು ಗ್ರೂಪ್ ಸಿ ಹುದ್ದೆಗಳಿಗೆ ಮೌಖಿಕ ಸಂದರ್ಶನವನ್ನು ಅಳವಡಿಸಿಕೊಳ್ಳುವ ಮೂಲಕ ಸರ್ಕಾರ ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ದೂರಿದರು.
ಒಕ್ಕೂಟವು ಸ್ವಯತ್ತ ಸಂಸ್ಥೆಯಾಗಿದ್ದು, ಸಹಕಾರ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವುದರಿಂದ, ಕಾಲಕಾಲಕ್ಕೆ ಸರ್ಕಾರವು ಹೊರಡಿಸುವ ಎಲ್ಲಾ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಬೇಕಾಗಿರುತ್ತದೆ. ಅದರೆ ಒಕ್ಕೂಟವು ಸರ್ಕಾರದ ನಿಯಮವನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದರು.
ಸರ್ಕಾರದ ತಿದ್ದುಪಡಿಗಳನ್ನು ಅಳವಡಿಕೊಳ್ಳದ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿರುವುದು, ಮೇಲ್ನೋಟಕ್ಕೆ ಅಕ್ರಮ ನಡೆಯುತ್ತಿರುವುದಕ್ಕೆ ನಿದರ್ಶನವಾಗಿದೆ, ಆದ್ದರಿಂದ ನೇಮಕಾತಿ ಪ್ರಕ್ರಿಯೆಯನ್ನು ರದ್ಧುಪಡಿಸಬೇಕೆಂದು ಒತ್ತಾಯಿಸಿದರು.
ಲೋಕಾಯುಕ್ತಕ್ಕೆ ದೂರು
ಈ ಅಕ್ರಮ ನೇಮಕಾತಿ ವಿರುದ್ಧ ಕರ್ನಾಟಕ ಲೋಕಾಯುಕ್ತಗೆ ಶೀಘ್ರದಲ್ಲೆ ದಾಖಲೆಗಳ ಸಮೇತ ದೂರು ನೀಡಲಾಗುವುದು, ಈ ಹಿಂದೆ ಮನ್ ಮುಲ್ ನಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಲಾಗಿತ್ತು. ಅದರಂತೆ ಈ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬಂದಿದೆ, ಇದರ ತನಿಖೆ ಕಾರ್ಯ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
73.16 ಕೋಟಿ ರೂ. ವಸೂಲಿ ಮಾಡಲಿ
ಈ ಹಿಂದಿನ ಮನ್ ಮುಲ್ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ 73.16 ಕೋಟಿ ರೂ.ಗಳ ಹಗರಣ ನಡೆದಿದ್ದು, ಇದನ್ನು ವಸೂಲಿ ಮಾಡುವಂತೆ ಆದೇಶವಿದ್ದರೂ, ಪ್ರಸ್ತುತ ಆಡಳಿತ ಮಂಡಳಿ ಆ ಹಣ ವಸೂಲಿ ಮಾಡಲು ಕ್ರಮ ಕೈಗೊಂಡಿಲ್ಲ, ಹಣ ವಸೂಲಿ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ನೇಮಕಾತಿ ಶುರುವಾದ ಮೇಲೆ ಧರ್ಮಸ್ಥಳ ಯಾತ್ರೆ
ಮನ್ ಮುಲ್ ನಲ್ಲಿ ನೇಮಕಾತಿ ಪ್ರಕ್ರಿಯೆ ಶುರುವಾದ ಮೇಲೆ ಮಂಡ್ಯ ಜಿಲ್ಲೆಯಲ್ಲಿ ಧರ್ಮಸ್ಥಳ ಯಾತ್ರೆಗಳು ಹಾಗೂ ದೇವಾಲಯಗಳಿಗೆ ಸಹಾಯಧನ ನೀಡುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ, ಇವರಿಗೆ ಎಲ್ಲಿಂದ ಹಣ ಬರುತ್ತದೆ ಎಂಬುವುದರ ಬಗ್ಗೆ ಮೊದಲು ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಲಕ್ಷಾಂತರ ರೂ.ಗಳ ಭ್ರಷ್ಟಾಚಾರ ನಡೆಯುತ್ತಿದೆ, 1 ಸಾವಿರ ಸಂಬಳದ ಹುದ್ದೆಗೆ 1 ಲಕ್ಷ ರೂ. ಲಂಚ ನಡೆಯುತ್ತಿದೆ, ಅದರಂತೆ 5 ಸಾವಿರ ಸಂಬಳದ ಹುದ್ದೆ 5 ಲಕ್ಷ ರೂ. ಲಂಚ ನಡೆಯುತ್ತಿರುವುದು ಬಹಿರಂಗ ಸತ್ಯವಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಮಂಚೇಗೌಡ, ರಮೇಶ್, ಶ್ರೀಕಾಂತ್ ಹಾಗೂ ಶಶಿಧರ್ ಗೌಡ ಉಪಸ್ಥಿತರಿದ್ದರು.




