Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಣ್ಣೂರು : ಮಂಚಮ್ಮ ದೇವಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ

ಮದ್ದೂರು ತಾಲ್ಲೂಕು ಅಣ್ಣೂರು ಗ್ರಾಮದಲ್ಲಿ ಮಂಚಮ್ಮ ದೇವಿಗೆ ವರ್ಷದಲ್ಲಿ 8 ದಿನ ಮಾತ್ರ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.

ಮಂಗಳವಾರ ಮಧ್ಯ ರಾತ್ರಿ ಕೊಂಡ ಬಂಡಿ ಉತ್ಸವದ ನಂತರ ಕೊಂಡಕ್ಕೆ ಹಾಕಲಾಗಿದ್ದ ಸೌದೆಗೆ ವಿಶೇಷ ಪೂಜೆ ಸಲ್ಲಿಸಿ ಬೆಂಕಿಯನ್ನು ಹಾಕಲಾಯಿತು. ನಂತರ ಮಂಚಮ್ಮ, ಮಾಕಳಮ್ಮ, ಮಾರಮ್ಮ, ಅಟ್ಟಿಮಾರಮ್ಮ, ಬೊಪ್ಪಸಮುದ್ರ ಚೌಡೇಶ್ವರಿ ಸೇರಿದಂತೆ ಗ್ರಾಮ ದೇವತೆಗಳ ಹೂ-ಹೊಂಬಾಳೆ ಹಾಗೂ ಉತ್ಸವವು ಭಕ್ತಿ ಪ್ರಧಾನವಾಗಿ ಜರುಗಿದವು.

ವರ್ಷವೆಲ್ಲಾ ಬಾಗಿಲು ಮುಚ್ಚಿದ್ದ ಮಂಚಮ್ಮ ದೇವಿಗೆ ಮಂಗಳವಾರ ರಾತ್ರಿಯಿಂದ ಬಾಗಿಲು ತೆರೆದು 8 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗುವುದು. ಬುಧವಾರ ಮುಂಜಾನೆ ಮಾರಮ್ಮ ದೇವತೆಯ ಕೊಂಡೋತ್ಸವವು ಜರುಗಿತು. ಮಾರಮ್ಮ ದೇವಿಯ ಕೊಂಡೋತ್ಸವ, ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಗ್ರಾಮ ದೇವತೆಗಳ ಉತ್ಸವ ಸಂಭ್ರಮದಿಂದ ಜರುಗಿದವು.

ಮಾರಮ್ಮ ದೇವಿಯ ಹಬ್ಬದ ವಿಶೇಷವಾಗಿ ಮಂಗಳವಾರದಿಂದಲೇ ದೇವರುಗಳಿಗೆ ಹೋಮ, ಹವನ ಮತ್ತು ವಿಶೇಷ ಪೂಜಾಕೈಂಕರ್ಯಗಳು ಜರುಗುವುದರೊಂದಿಗೆ ಗ್ರಾಮದಲ್ಲಿ ಹಬ್ಬಕ್ಕೆ ಮೆರಗು ಬಂದಿತು. ಗ್ರಾಮ ದೇವತೆಗಳ ಉತ್ಸವವು ಮತ್ತು ಮೆರವಣಿಗೆ, ತಂಬಿಟ್ಟಿನ ಆರತಿ ಪ್ರತಿಯೊಂದು ಬೀದಿಯಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯ ತನಕ ಜರುಗಿತು. ಹೀಗೆ ಯುಗಾದಿ ಹಬ್ಬದವರೆವಿಗೂ ಗ್ರಾಮದಲ್ಲಿರುವ ತಿಮ್ಮಪ್ಪ, ಅಮೃತೇಶ್ವರ, ಚೌಡಮ್ಮ, ಮಾಕಳಮ್ಮ, ಲಕ್ಷ್ಮಿದೇವಿ, ಅಟ್ಟಿಮಾರಮ್ಮ ಸೇರಿದಂತೆ ಎಲ್ಲಾ ದೇವತೆಗಳಿಗೂ ಗ್ರಾಮಸ್ಥರು ಪೂಜೆ ಸಲ್ಲಿಸಲಿದ್ದಾರೆ. ಹಾಗೆಯೇ ಮಂಚಮ್ಮ ದೇವಿಗೆ 8 ದಿನಗಳ ಕಾಲವೂ ದೇವಸ್ಥಾನದ ಬಾಗಿಲು ತೆರೆದು ವಿಶೇಷ ಪೂಜೆ ಸಲ್ಲಿಸಲಾಗುವುದು.

ಯುಗಾದಿ ಹಬ್ಬದ ತನಕ ಮಂಚಮ್ಮ ದೇವಿಗೆ ಗ್ರಾಮದವರು ಸೇರಿದಂತೆ ಇತರೆ ಗ್ರಾಮದ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಯುಗಾದಿಹಬ್ಬಕ್ಕೆ ಪೂಜೆಯನ್ನು ಅಂತ್ಯಗೊಳಿಸಿ ಬಾಗಿಲು ಮುಚ್ಚಲಾಗುವುದೆಂದು ಗ್ರಾಮದ ಹಿರಿಯರು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!