ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆಗೆ ಜೆಡಿಎಸ್ ತರಗೆಲೆಯಂತೆ ಧೂಳೀಪಟವಾಗಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎಲ್ಲಾ ಏಳೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಏಳು ಕ್ಷೇತ್ರಗಳ ಪೈಕಿ ಕೆ.ಆರ್.ಪೇಟೆ ಬಿಟ್ಟು ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದು ಜಾದಳ ಭದ್ರಕೋಟೆ ಛಿದ್ರವಾಗಿದೆ.
ಕಳೆದ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂಬ ಹಿನ್ನೆಲೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಭಾರೀ ಬಹುಮತದಿಂದ ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದರು.

ಆದರೆ ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ತಂತ್ರಗಾರಿಕೆ ನಡೆದಿಲ್ಲ.ಒಕ್ಕಲಿಗರನ್ನು ಜಾತಿಯ ಅಸ್ತ್ರಗಳಿಂದ,ಭಾವನಾತ್ಮಕ ಮಾತುಗಳಿಂದ,ಕಣ್ಣೀರಿನಿಂದ ಸೆಳೆಯುತ್ತಿದ್ದ ಜೆಡಿಎಸ್ ವರಿಷ್ಠರ ಮಾತುಗಳು ಈ ಬಾರಿ ಜನರ ಮನಸ್ಸು ಹಾಗೂ ಮತವನ್ನು ಸೆಳೆಯುವಲ್ಲಿ ವಿಫಲವಾಗಿದೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿದರು ಎಂದು ಚಲುವರಾಯಸ್ವಾಮಿ ಮತ್ತು ರಮೇಶ್ ಬಾಬು ಬಂಡಿಸಿದ್ದೇಗೌಡರನ್ನು ಭಾರೀ ಅಂತರದಿಂದ ಸೋಲಿಸಿದ್ದರು. ಆದರೆ ಈ ಬಾರಿ ಚಲುವರಾಯಸ್ವಾಮಿ ಅವರ ನಾಯಕತ್ವಕ್ಕೆ ಜನರು ಮನ್ನಣೆ ನೀಡಿದ್ದಾರೆ. ಕಾಂಗ್ರೆಸ್ ವರಿಷ್ಠರು ಚಲುವರಾಯಸ್ವಾಮಿ ನಾಯಕತ್ವಕ್ಕೆ ಗೌರವ ನೀಡಿ ಅವರಿಗೆ ಸ್ವತಂತ್ರವಾಗಿ ಅಧಿಕಾರ ನೀಡಿದ್ದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಆಶೀರ್ವಾದ ಮಾಡಿದ ಜನರು, ಇತರ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ವಿಜಯದ ಮಾಲೆ ಹಾಕಿದ್ದಾರೆ.ಕೆಪಿಸಿಸಿ ಉಪಾಧ್ಯಕ್ಷರಾದ ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರ ನಾಯಕತ್ವ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭದ್ರ ಬುನಾದಿ ಹಾಕಿದೆ ಎಂದರೆ ತಪ್ಪಾಗಲಾರದು.
ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎನ್. ಚಲುವರಾಯಸ್ವಾಮಿ(90,634) ಅವರು ಜೆಡಿಎಸ್ ಪಕ್ಷದ ಸುರೇಶ್ ಗೌಡ(86,220)ಅವರನ್ನು 4,414 ಮತಗಳ ಅಂತರದಿಂದ ಪರಾಭವ ಗೊಳಿಸಿದ್ದಾರೆ. ಕಳೆದ ಬಾರಿ 47 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದ ಚಲುವರಾಯಸ್ವಾಮಿಯವರು ಈ ಬಾರಿಯ ಚುನಾವಣೆಯಲ್ಲಿ 47,000 ಮತಗಳನ್ನು ಮೆಟ್ಟಿನಿಂತು 4,414 ಮತಗಳ ಅಂತರದಿಂದ ಜಯಗಳಿಸಿರುವುದು ಉತ್ತಮ ಸಾಧನೆ.ಏಕೆಂದರೆ ನಾಗಮಂಗಲ ಕ್ಷೇತ್ರದಲ್ಲಿ ಈ ಬಾರಿಯೂ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿತ್ತು. ಕೊನೆಯ ದಿನಗಳವರೆಗೂ ದೇವೇಗೌಡ ಮತ್ತು ಕುಮಾರಸ್ವಾಮಿ ಭಾವನಾತ್ಮಕವಾಗಿ ಹಲವು ಬಾಣಗಳನ್ನು ಪ್ರಯೋಗಿಸಿದ್ದರು.ಅನೇಕ ತಂತ್ರಗಾರಿಕೆಗಳನ್ನು ಮಾಡಿದ್ದರು.ಆದರೆ ಕ್ಷೇತ್ರದ ಜನರು ಚಲುವರಾಯಸ್ವಾಮಿ ಪರವಾಗಿ ನಿಲ್ಲುವ ಮೂಲಕ ಜೆಡಿಎಸ್ ವರಿಷ್ಠರಿಗೆ ಈ ಬಾರಿ ನಾವು ಮೋಸ ಹೋಗುವುದಿಲ್ಲ ಎಂದು ನಿರ್ಧರಿಸಿ ಕ್ಷೇತ್ರವನ್ನು ಚಲುವರಾಯಸ್ವಾಮಿ ಅವರಿಗೆ ನೀಡಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರಮೇಶ್ ಬಾಬು ಬಂಡಿಸಿದ್ದೇಗೌಡ(72,817) ಜೆಡಿಎಸ್ ಪಕ್ಷದ ರವೀಂದ್ರ ಶ್ರೀಕಂಠಯ್ಯ(61,680)ಅವರನ್ನು 11,137 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ 53,000 ಮತಗಳಿಂದ ಸೋತಿದ್ದ ರಮೇಶ್ ಬಾಬು ಅವರನ್ನು ಕ್ಷೇತ್ರದ ಜನ ಈ ಬಾರಿ ಗೆಲ್ಲಿಸುವ ಮೂಲಕ ಕುಮಾರಸ್ವಾಮಿ ಹಾಗೂ ದೇವೇಗೌಡರ ತಂತ್ರಗಾರಿಕೆಗೆ ಮನ್ನಣೆ ನೀಡಿಲ್ಲದಿರುವುದು ಕಂಡುಬಂದಿದೆ.
ಮಳವಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪಿ.ಎಂ ನರೇಂದ್ರಸ್ವಾಮಿ(1,06,000) ಅವರು ಜೆಡಿಎಸ್ ಪಕ್ಷದ ಅನ್ನದಾನಿ(59,652)ಅವಯನ್ನು 46,846 ಮತಗಳ ದೊಡ್ಡ ಅಂತರದಿಂದ ಸೋಲಿಸಿದ್ದಾರೆ. ಹಲಗೂರು ಭಾಗದಲ್ಲೂ ಒಕ್ಕಲಿಗ ಸಮುದಾಯದ ಜನರು ನರೇಂದ್ರಸ್ವಾಮಿ ಅವರ ಬೆನ್ನಿಗೆ ನಿಂತಿರುವುದರಿಂದಲೇ ಇಷ್ಟು ದೊಡ್ಡ ಅಂತರದ ಗೆಲುವಿಗೆ ಕಾರಣವಾಗಿದೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ, ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ(91,151)ಅವರು ಜೆಡಿಸ್ ಪಕ್ಷದ ಸಿ.ಎಸ್. ಪುಟ್ಟರಾಜು(80,289) ಅವರನ್ನು10,862 ಮತಗಳಿಂದ ಸೋಲಿಸಿದ್ದಾರೆ.
ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕದಲೂರು ಉದಯ್ ಅವರು (87,019)ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ದೇವೇಗೌಡರ ಬೀಗರಾದ ಡಿ.ಸಿ. ತಮ್ಮಣ್ಣ(62,906) ಅವರನ್ನು 24,113 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮದ್ದೂರು ಕ್ಷೇತ್ರದಲ್ಲಿ ದೇವೇಗೌಡರ ಬೀಗರಾದ ಡಿ.ಸಿ. ತಮ್ಮಣ್ಣನವರ ಆಟ ನಡೆದಿಲ್ಲ. ಕ್ಷೇತ್ರದ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ದೇವೇಗೌಡ ಮತ್ತು ಕುಮಾರಸ್ವಾಮಿಯವರು ವಿಫಲರಾಗಿದ್ದಾರೆ ಎಂದೇ ಹೇಳಬಹುದು.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗಣಿಗ ರವಿಕುಮಾರ್ (61,411) ಅವರು ಜೆಡಿಎಸ್ ಪಕ್ಷದ ಬಿ.ಆರ್. ರಾಮಚಂದ್ರ(59,392) ಅವರನ್ನು ಕೇವಲ 2,119 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಬಂಡಾಯವಾಗಿ ಸ್ಪರ್ಧಿಸಿದ್ದ ಕೆ.ಎಸ್. ವಿಜಯ್ ಆನಂದ್ ಅವರು 15,000ಕ್ಕೂ ಹೆಚ್ಚು ಮತ ಪಡೆದು ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರಿಗೆ ಮಗ್ಗುಲ ಮುಳ್ಳಾಗಿದ್ದಾರೆ.
ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಎಚ್.ಟಿ. ಮಂಜು(80,646) ಅವರು ಕಾಂಗ್ರೆಸ್ ಪಕ್ಷದ ದೇವರಾಜ್(58,302) ಅವರನ್ನು ಪರಾಭವಗೊಳಿಸಿ, ಜೆಡಿಎಸ್ ಪಕ್ಷದ ಮಾನ ಉಳಿಸಿದ್ದಾರೆ.ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಬಿ.ಎಲ್. ದೇವರಾಜ್ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್.ಟಿ. ಮಂಜು ಜಯಗಳಿಸುವ ಮೂಲಕ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಮಾನವನ್ನು ಕಾಪಾಡಿದ್ದಾರೆ ಎಂದೇ ಹೇಳಬಹುದು.

ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಜೆಡಿಎಸ್ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ನಾಯಕತ್ವ ಸಾಕೆಂದು ಜನರು ತೀರ್ಮಾನಿಸಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷರಾಗಿ ಜೋಡೆತ್ತುಗಳಂತೆ ಕಾಂಗ್ರೆಸ್ ಕಟ್ಟುವ ಕೆಲಸ ಮಾಡುತ್ತಿರುವ ಚಲುವರಾಯಸ್ವಾಮಿ ಮತ್ತು ಪಿ.ಎಂ. ನರೇಂದ್ರಸ್ವಾಮಿ ಅವರ ನಾಯಕತ್ವಕ್ಕೆ ಜಿಲ್ಲೆಯ ಜನತೆ ಬೆಲೆ ಕೊಟ್ಟಿದ್ದಾರೆ ಎನ್ನುವುದಕ್ಕೆ ಈ ಫಲಿತಾಂಶ ಸ್ಪಷ್ಟ ಸಾಕ್ಷಿಯಾಗಿದೆ.




