Friday, September 20, 2024

ಪ್ರಾಯೋಗಿಕ ಆವೃತ್ತಿ

ಸಾಧಕರನ್ನು ಗುರುತಿಸಿ ಗೌರವಿಸಿದರೆ ಸ್ಪೂರ್ತಿ ಹೆಚ್ಚುತ್ತದೆ: ಅಂಜನಾ ಶ್ರೀಕಾಂತ್

ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಅವರಿಗೆ ಶಕ್ತಿ ತುಂಬಿದಂತಾಗುವುದು. ಅವರು ಮತ್ತಷ್ಟು ಸಮಾಜಮುಖಿಯಾಗಿ ಕೆಲಸ ಮಾಡಲು ಸ್ಫೂರ್ತಿ ದೊರೆತಂತಾಗುವುದು ಎಂದು ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಅಭಿಪ್ರಾಯಪಟ್ಟರು.

ಮಂಡ್ಯನಗರದ ಜೆಪಿ ಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮತ್ತು ಸಾಧಕರನ್ನು ಅಭಿನಂದಿಸಿ ಮಾತನಾಡಿದರು.

ಪತ್ರಕರ್ತರ ಹಿತ ಕಾಯುವುದಲ್ಲದೆ, ಸಾಧಕರನ್ನು ಗುರುತಿಸಿ ಅಭಿನಂದಿಸುವಂತಹ ಉತ್ತಮ ಕೆಲಸವನ್ನು ಮಾಡುತ್ತಿರುವ ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದು ಹರ್ಷಿಸಿದರು.

ಪತ್ರಕರ್ತರ ಕೆಲಸ ತುಂಬಾ ಜವಾಬ್ದಾರಿಯುತವಾದುದ್ದು, ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ತರ. ಸರ್ಕಾರದ ತಪ್ಪು ಒಪ್ಪುಗಳನ್ನು ಗಮನಿಸುತ್ತಾ ಎಚ್ಚರಿಕೆ ನೀಡುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಾ ಆರೋಗ್ಯಕರ ಸಮಾಜ ಕಾಪಾಡುವಲ್ಲಿ ಶ್ರಮಿಸುತ್ತಾರೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಕೌಡ್ಲೆ ಚನ್ನಪ್ಪ ಅವರು ಪ್ರಾಸ್ತಾವಿಕ ಮಾತನಾಡಿ, ಮುದ್ರಣ ಮಾಧ್ಯಮ ಜನರ ಹಿತಕ್ಕಾಗಿ, ಸಮಸ್ಯೆಗಳನ್ನು ಬಗೆಹರಿಸಲು, ಸಾಮಾಜಿಕ ನ್ಯಾಯ ದೊರಕಿಸಲು, ಪ್ರಭುತ್ವವನ್ನು ಎಚ್ಚರಿಸಿ, ಪ್ರಾಮಾಣಿಕ ಲೇಖನಗಳ ಮೂಲಕ ಸಮಾಜದ ಹಿತಕಾಯುವ ಕಾರ್ಯ ನಿರ್ವಹಿಸಬೇಕಿದೆ. ಎಲ್ಲಾ ಸಂಘಟನೆಗಳಿಗೂ ಅವರವರದೇ ಆದ ಜವಾಬ್ದಾರಿಗಳಿರುತ್ತವೆ. ಅಂತೆಯೇ ನಮ್ಮ ಜಿಲ್ಲೆಯ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯಾ ಜಿಲ್ಲೆಯ ಪತ್ರಿಕೆಗಳು ಕಾರ್ಯನಿರ್ವಹಿಸುವುದು ಅಗತ್ಯ. ವಿದ್ವತ್ತಿಗೆ ಯಾವ ವಯಸ್ಸು,ಜಾತಿ ಭೇದ ಇರುವುದಿಲ್ಲ. ವರದಿಗಾರಿಕೆ ಮತ್ತು ಪತ್ರಿಕೆ ಕರಾರುವಕ್ಕಾಗಿ ಇರಬೇಕೆಂಬುದಷ್ಟೇ ಈ ಕ್ಷೇತ್ರದ ಆದ್ಯತೆ. ಪ್ರಾಮಾಣಿಕತೆ ಉಳಿಸಿಕೊಳ್ಳದಿದ್ದರೆ ಪ್ರಮಾದವಾಗುವುದು ನಿಶ್ಚಿತ ಎಂದು ಎಚ್ಚರಿಸಿದರು.

ಸಾಧಕರಿಗೆ ಅಭಿನಂದನೆ

ಮಂಡ್ಯ ನಗರ ಕುಡಿಯುವ ನೀರಿನ ಕರ ಇಳಿಕೆ ಹಾಗೂ ಬಡ್ಡಿ ಮನ್ನಾ ವಿಷಯದಲ್ಲಿ ಹೋರಾಟ ರೂಪಿಸಿ ಯಶಸ್ವಿಯಾಗಿರುವ ಸಾಮಾಜಿಕ ಕಾರ್ಯಕರ್ತ ಥಾಮಸ್ ಬೆಂಜಮಿನ್ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯವಾಗಿರುವ, ಜನರಲ್ಲಿ ಆರೋಗ್ಯದ ಆರಿವು ಮೂಡಿಸುವಲ್ಲಿ ತೊಡಗಿಸಿಕೊಂಡಿರುವ ವಿಮ್ಸ್ ನಿವೃತ್ತ ಪಿಆರ್‌ಒ ಚ.ಮ.ಉಮೇಶ್ ಅವರನ್ನು ಅಭಿನಂದಿಸಲಾಯಿತು.

ಅಭಿನಂದಿತರ ಕುರಿತು ಜರ್ನಲಿಸ್ಟ್ ಕ್ಲಬ್ ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್ ದೇಶಹಳ್ಳಿ ಸಾಧಕರ ಸಾಧನೆಗಳನ್ನು ಪರಿಚಯಿಸಿದರು.
ಕ್ಲಬ್‌ನ ಅಧ್ಯಕ್ಷ ಎ.ಎಲ್.ಬಸವೇಗೌಡ ಅಧ್ಯಕ್ಷತೆ  ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ-ವಿತರಕ ಅಣ್ಣೂರು ಲಕ್ಷ್ಮಣ್, ಹಿರಿಯ ಅಂಕಣಕಾರ ತೂಬಿನಕೆರೆ ಲಿಂಗರಾಜು, ಹಿರಿಯ ಕಲಾವಿದ, ಚಿಂತಕ ಎಂ.ಎಲ್. ಸೋಮವರದ, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ಚಂದ್ರ ಗುರು, ದಸಂಸ ಮುಖಂಡ ವೆಂಕಟಗಿರಿಯಯ್ಯ, ಕಾರಸವಾಡಿ ರಾಜು, ಮಂಜಣ್ಣ ಮುತ್ತೆಗೆರೆ, ಗೊರವಾಲೆ ಚಂದ್ರಶೇಖರ್, ಅನುಪಮ, ಕ್ಲಬ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ದ.ಕೋ.ಹಳ್ಳಿ, ನಿರ್ದೇಶಕರಾದ ಸಿದ್ದಲಿಂಗಾರಾಧ್ಯ, ರಮೇಶ್, ದಾಸ್‌ಪ್ರಕಾಶ್, ಸುಮಾ ಆರ್. ಪುರುಷೋತ್ತಮ ಮತ್ತಿತರರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!