Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದ ಪ್ರಸಿದ್ಧ ನಟ ರವಿಪ್ರಸಾದ್ ನಿಧನ


  • ಪ್ರಸಿದ್ಧ ನಟ ರವಿಪ್ರಸಾದ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಮರಣ

  • ಷೇಕ್ಸ್ ಪಿಯರ್ ನ ಒಥೆಲೋ ನಾಟಕದ ನಿರ್ದೇಶಿಸಿದ್ದ ರವಿಪ್ರಸಾದ್
  • ಸೇವಂತಿ, ಟಿಪ್ಟು ಕಂಡ ಕನಸು ನಾಟಕಗಳಲ್ಲಿ ಅತ್ಯದ್ಭುತ ಅಭಿನಯ

ಕನ್ನಡ ಚಲನಚಿತ್ರ ಹಾಗೂ ಕಿರುತೆರೆಯ ಪ್ರಸಿದ್ಧ ನಟ ರವಿಪ್ರಸಾದ್ ರವರು (43) ಬಹು ಅಂಗಾಂಗ ವೈಫಲ್ಯದಿಂದ  ಬುಧವಾರ ಸಂಜೆ 6.10ರಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.

ರವಿಪ್ರಸಾದ್ ರವರು ತನ್ನ ತಂದೆ ಪ್ರಾಧ್ಯಾಪಕರು, ಸಾಹಿತಿಗಳಾದ ಎಚ್.ಎಸ್.ಮುದ್ದೇಗೌಡ, ತಾಯಿ ಪಾಪಚ್ಚಿ, ಇಬ್ಬರು ತಂಗಿಯರು, ಪತ್ನಿ ಮತ್ತು ಮಗನನ್ನು ಸೇರಿದಂತೆ ಅಪಾರ ಗೆಳೆಯರ ಬಳಗವನ್ನು, ಹಿತೈಷಿಯರನ್ನು ಆಗಲಿದ್ದಾರೆ.

ಕನ್ನಡ ಪ್ರಾಧ್ಯಾಪಕ, ಕಸಪಾ ಮಾಜಿ ಅಧ್ಯಕ್ಷ, ಸಾಹಿತಿ  ಡಾ: ಪ್ರೊ.ಹೆಚ್.ಎಸ್.ಮುದ್ದೇಗೌಡ ಅವರ ಪುತ್ರರಾಗಿರುವ ರವಿಪ್ರಸಾದ್ ಅವರು, ಮಿಂಚು, ಮುಕ್ತಮುಕ್ತ, ಚಿತ್ರಲೇಖ, ಯಶೋಧೆ, ಮಗಳು ಜಾನಕಿ, ವರಲಕ್ಷ್ಮಿ, ನಮ್ಮನೆ ಯುವರಾಣಿ ಹಾಗೂ ಉಲ್ಲಾಸ ಉತ್ಸಾಹ ಚಲನಚಿತ್ರ ಸೇರಿದಂತೆ ಹಲವು ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ನಟ ರವಿಪ್ರಸಾದ್ ರಂಗಭೂಮಿಯಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ನಟಿಸುತ್ತಿದ್ದ ಅವರು ಗೆಳೆಯರ ಬಳಗದಲ್ಲಿ, ಜನದನಿ ತಂಡದಲ್ಲಿ  ಗುರುತಿಸಿಕೊಂಡಿದ್ದರು.

ಇವರು ಸೇವಂತಿ, ಜಾತ್ರೆ, ಸಾಯೋ ಆಟ, ಟಿಪ್ಟು ಕಂಡ ಕನಸು ನಾಟಕಗಳಲ್ಲಿ ಅತ್ಯುತ್ತಮ ಅಭಿನಯ ಮಾಡಿದ್ದರು. ರಂಗಭೂಮಿಯನ್ನು ವಿಭಿನ್ನ ಆಯಾಮಗಳಲ್ಲಿ ನೋಡುವ ದೃಷ್ಠಿಕೋನ ಹೊಂದಿದ್ದರು.

ರಂಗಭೂಮಿಯಲ್ಲಿ ಪರಿಣಿತಿ ಪಡೆದಿದ್ದರು ಇವರು ಷೇಕ್ಸ್ ಪಿಯರ್ ನ ಒಥೆಲೋ ನಾಟಕದ ನಿರ್ದೇಶನವನ್ನು ಕೂಡ ಮಾಡಿದ್ದರು. ಆನಂತರ ಅವರು ಕನ್ನಡ ಕಿರುತೆರೆಯಲ್ಲಿ ಮಿಂಚಿದ್ದರು. ಇಂಗ್ಲೀಷ್ ಸಾಹಿತ್ಯದಲ್ಲಿ ಇವರು ಸ್ನಾತಕೋತ್ತರ ಪದವಿ ಪಡೆದಿದ್ದರು.

ಉತ್ತಮ ಧ್ವನಿಯನ್ನು ಹೊಂದಿದ್ದ ಇವರು ರಂಗಭೂಮಿಯಲ್ಲಿ ಬರುವ ಹಲವಾರು ದೀರ್ಘವಾದ ಸ್ವಗತಗಳನ್ನು ಬಹಳ ಅತ್ಯುತ್ತಮವಾಗಿ ಹೇಳುತ್ತಿದ್ದರು. ನಟನೆಯಲ್ಲಿ ಕಣ್ಣುಗಳು ಹಾಗೂ ಮುಖದ ಸ್ನಾಯುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದರು. ಮಂಡ್ಯಕ್ಕೆ ಬಂದಾಗ ಹವ್ಯಾಸವಾಗಿ ಪಿಇಟಿಯ ಈಜುಕೊಳಕ್ಕೆ ಬರುತ್ತಿದ್ದರು.

ಇವರ ಮರಣಕ್ಕೆ ರಂಗಭೂಮಿಯ ಕಲಾವಿದರು, ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಕಿರುತೆರೆ ನಟರು ಕಂಬನಿ ಮಿಡಿದಿದ್ದಾರೆ.

ರವಿಪ್ರಸಾದ್ ಅವರ ಪಾರ್ಥಿವ ಶರೀರವನ್ನು ಮಂಡ್ಯದಲ್ಲಿ  ಗುರುವಾರ ನಾಲ್ವಡಿ ಕೃಷ್ಣರಾಜ ಒಡೆಯರ ಬಡಾವಣೆಯಲ್ಲಿರುವ ಎಚ್.ಎಸ್.ಮುದ್ದೇಗೌಡರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇವರ ಅಂತಿಮ ಸಂಸ್ಕಾರವನ್ನು ಮಧ್ಯಾಹ್ನ ಕಲ್ಲಹಳ್ಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು.

ರವಿ ಅವರ ನಿಧನಕ್ಕೆ ನಿರ್ಮಾಪಕಿ ಹಾಗೂ ನಟಿ ಜಯಶ್ರೀ ಆಘಾತ ವ್ಯಕ್ತಪಡಿಸಿದ್ದಾರೆ.

 

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!