Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕಬ್ಬಿಗೆ ದರ ನಿಗದಿ ಹೋರಾಟಕ್ಕೆ ವಿದಾಯ: ರೈತರ ಆಕ್ರಂದನಕ್ಕೆ ಸ್ಪಂದಿಸದ ಸರ್ಕಾರ

ರೈತರ ನಾನಾ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸದ ಸರ್ಕಾರದ ಧೋರಣೆಯನ್ನು ಖಂಡಿಸಿ ಮಂಡ್ಯ ಜಿಲ್ಲೆಯ ರೈತರು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ ಹಾಕಿದರು.

ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹಲವು ಜನಪರ ಚಳುವಳಿಗಳ ನಾಯಕರು, ರೈತ ಮುಖಂಡರು, ಯುವ ಜನರು ಹಾಗೂ ನೂರಾರು ರೈತರು, 101 ಟ್ರ್ಯಾಕ್ಟರ್, 101 ಎತ್ತಿನ ಗಾಡಿ, ತಮ್ಮ ಸಾಕು ಪ್ರಾಣಿಗಳಾದ ಕುರಿ, ಕೋಳಿ ನಾಯಿ, ಹಸು, ಎತ್ತು ಹಾಗೂ ಎಮ್ಮೆಗಳ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗೆ ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ ನೀಡುವಂತೆ ಆಗ್ರಹಿಸಿ 109 ದಿನಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟವನ್ನು ಅಂತ್ಯಗೊಳಿಸಲಾಗಿದೆ. ನಂತರ ಧರಣಿ ಸ್ಥಳದಿಂದ ಜಿಲ್ಲಾಧಿಕಾರಿ ಕಚೇರಿಗೆ ರೈತರು ಮೆರವಣಿಗೆ ನಡೆಸಿ ಸರ್ಕಾರದ ರೈತ ವಿರೋದಿ ನಿಲುವುಗಳನ್ನು ಖಂಡಿಸಿದರು.

ಈ ವೇಳೆ ರೈತ ಸಂಘದ ಮುಖಂಡ ಸಿ ಮಧುಚಂದನ್‌ ಮಾತನಾಡಿ, “ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆ ನಡೆಸುವ ಮಾಲೀಕರ ಪರವಾಗಿ ತನ್ನ ನಿಲುವುಗಳನ್ನು ಮುಂದುವರೆಸಿತೆ ವಿನಃ ರಾಜ್ಯದ ರೈತರಿಗೆ ಮಾತು ಕೊಟ್ಟಂತೆ ಸಿಹಿ ಸುದ್ದಿ ಕೊಡಲಿಲ್ಲ. ಸಿಎಂ ಸೇರಿದಂತೆ ಎಲ್ಲ ಸಚಿವರು ರೈತ ವಿರೋಧಿ ಆಡಳಿತ ನಡೆಸಿಕೊಂಡೆ ಮುಂದಿನ ಚುನಾವಣೆಗೆ ಪಲಾಯನ ಮಾಡಿದ್ದಾರೆ. ರೈತರ ಮಗ ಎಂದು ಹೇಳಿಕೊಳ್ಳುವ ಸಿಎಂ ಬೊಮ್ಮಾಯಿ ಅವರಿಗೆ ದುಡಿಯುವ ಜನರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ” ಎಂದು ಆರೋಪಿಸಿದರು.

ರೈತ ಮಹಿಳೆಯರು

“ಸ್ವಾಮಿನಾಥನ್‌ ವರದಿ ಪ್ರಕಾರ ಕಬ್ಬಿಗೆ ₹5500 ಬೆಲೆ ನೀಡಬೇಕು. ಆದರೆ, ನಾವು ಟನ್‌ಗೆ ₹4500 ದರ ನಿಗದಿ ಮಾಡಿ, ಹಾಲಿಗೆ ₹40, ರೈತರು ಬೆಳೆದ ಎಲ್ಲ ಬೆಳೆಗಳಿಗೆ ಬೆಲೆ ಕೊಡಿ ಎಂದು ಕೇಳುತ್ತಾ ಬಂದಿದ್ದೇವೆ. 109 ದಿನಗಳಾದರೂ ನಮ್ಮ ಹಕ್ಕೋತ್ತಾಯಗಳಿಗೆ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ. ಅಮಿತ್‌ ಶಾ ಭೇಟಿ ಸಂದರ್ಭದಲ್ಲಿ ಕಪ್ಪು ಬಾವುಟ ತೋರಿಸಬೇಡಿ, ಬೇಡಿಕೆ ಈಡೇರಿಸುತ್ತೇವೆ ಎಂದು ಅಂಗಲಾಚಿ ನಂತರ ರೈತರ ಬೆನ್ನಿಗೆ ಚೂರಿ ಹಾಕಿದ್ದಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕಬ್ಬು ಬೆಳೆಯುವ 25 ಲಕ್ಷ ರೈತರ ಹಿತವನ್ನು ನಿರ್ಲಕ್ಷ್ಯ ಮಾಡಿ ಮುಂದಿನ ಚುನಾವಣೆಗೆ ಹೋಗುತ್ತಿರುವ ಬಿಜೆಪಿಯ ಎಲ್ಲ ನಾಯಕರಿಗೂ ತಕ್ಕ ಪಾಠ ಕಲಿಸುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ “ರೈತ ವಿರೋಧಿ ಕಾನೂನುಗಳನ್ನು ರೂಪಿಸಿ ಆ ಕುಲವನ್ನೇ ನಾಶ ಮಾಡಲು ಹೊರಟಿರುವ ಮತ್ತು ಸಾಧು- ಸಂತರು, ಶರಣರು, ಸೂಫಿಗಳ ನಾಡಿನಲ್ಲಿ ಕೋಮು ಸಾಮರಸ್ಯವನ್ನು ಹದಗೆಡಿಸಿದ ಭ್ರಷ್ಟ ಫ್ಯಾಸಿಸ್ಟ್ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಉಳಿದಿರುವ ಸಂಪತ್ತನ್ನೆಲ್ಲ ಲೂಟಿ ಮಾಡುತ್ತದೆ. ಇಂತಹ ಕೆಟ್ಟ ಸಂಸ್ಕೃತಿಯ ಪಕ್ಷವು ಮತ್ತೆಂದೂ ಅಧಿಕಾರದ ಚುಕ್ಕಾಣಿ ಹಿಡಿಯಬಾರದು ಎಂದು ತೀರ್ಮಾನಿಸಿದ್ದೇವೆ. ಆ ಕುರಿತು ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘ - ಮಂಡ್ಯ

ಕಬ್ಬು ಬೆಳೆಗೆ ದರ ನಿಗದಿ ಮಾಡುವಂತೆ ಆಗ್ರಹಿಸಿ ಕಳೆದ ನವೆಂಬರ್‌ನಿಂದ ಮಂಡ್ಯದಲ್ಲಿ ನಿರಂತರವಾಗಿ ಅಹೋರಾತ್ರಿ ಧರಣಿ ನಡೆಸಿದ ರೈತರು ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದರು. ಆದರೆ, 2023ರ ಫೆ.1 ಮಂಡಿಸಿದ ಬಜೆಟ್‌ನಲ್ಲಿ ರೈತರ ಪರವಾದ ನಿಲುವು ತೋರದ ಹಿನ್ನೆಲೆಯಲ್ಲಿ ಅನಾಗರಿಕ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಸುವುದು ಅಪ್ರಯೋಜಕವೆಂದು ಅರಿತು ಹೋರಾಟ ಕೈ ಬಿಡಲಾಗಿದೆ. ಆದರೆ, ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕುಟಿಲ ತಂತ್ರಗಳನ್ನು ಮಾಡುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮತ್ತು ಗೃಹ ಸಚಿವ ಅಮಿತಾ ಶಾ ರಾಜ್ಯಕ್ಕೆ ಬಂದಾಗಲೆಲ್ಲ ಪ್ರತಿಭಟನೆ ಮಾಡುತ್ತೇವೆ ಎಂದು ರೈತ ಸಂಘ ಎಚ್ಚರಿಕೆ ನೀಡಿದೆ.

ರೈತರು ಜಿಲ್ಲಾಡಳಿತದ ಮುಂದಿಟ್ಟಿರುವ ಹಕ್ಕೊತ್ತಾಯಗಳು

  1. ಟನ್ ಕಬ್ಬಿಗೆ ₹4500 ಎಫ್‌ಆರ್‌ಪಿ ದರವನ್ನು ಮತ್ತು ರಾಜ್ಯ ಸರ್ಕಾರ ಎಸ್‌ಎಪಿ ಘೋಷಣೆ ಮಾಡಬೇಕು. ಲೀಟರ್‌ ಹಾಲಿಗೆ ₹40 ಮತ್ತು ಕ್ವಿಂಟಾಲ್ ಭತ್ತಕ್ಕೆ ₹500 ವಿಶೇಷ ಸಹಾಯ ಧನ ನೀಡಬೇಕು ಹಾಗೂ ಎಲ್ಲ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ನಿರಂತರವಾಗಿ ಖರೀದಿ ಕೇಂದ್ರಗಳನ್ನು ತೆರೆಯಬೇಕು.
  2. ರೈತರು ಹಾಗೂ ಇತರೆ ದುಡಿಯುವ ಜನರನ್ನು ನಿರ್ಲಕ್ಷ್ಯ ಮಾಡಿ ಬಂಡವಾಳ ಶಾಹಿಗಳ ಗುಲಾಮಗಿರಿಯ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ವಿಧಾನ ಸಭೆಯಲ್ಲಿ ಕೂರುವ ಯೋಗ್ಯತೆಯನ್ನು ಕಳೆದುಕೊಂಡಿದೆ ಈ ಕೂಡಲೇ ವಿಧಾನ ಸೌಧವನ್ನು ಖಾಲಿ ಮಾಡಿ ಹೊರ ಹೊಗಬೇಕೆಂದು ರೈತ ಸಂಘ ಆಗ್ರಹಿಸುತ್ತದೆ.
  3. ಸತ್ಯಾಗ್ರಹದ ಗಂಧ- -ಗಾಳಿ ಅರಿಯದ ಅನಾಗರಿಕ ಬಿಜೆಪಿ ಸರ್ಕಾರದ ಮುಂದೆ ಸತ್ಯಾಗ್ರಹವನ್ನು ಮುಂದುವರೆಸದೇ ಇರುವುದು ಸೂಕ್ತ ಎಂದು ತೀರ್ಮಾನಿಸಿ ಕಳೆದ 109 ದಿನಗಳಿಂದ ಮಂಡ್ಯದಲ್ಲಿ ನಡೆಯುತ್ತಿದ್ದ ರೈತರ ಹೋರಾಟವನ್ನು ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಅಂತ್ಯಗೊಳಿಸಿದೆ.
  4. ರೈತರ ಹೋರಾಟಕ್ಕೆ ಬೆಲೆ ನೀಡದ ಬಿಜೆಪಿ ಪಕ್ಷವನ್ನು ಮತ್ತೆ ವಿಧಾನಸೌಧದೆಡೆಗೆ ಮುಖ ಮಾಡದಂತೆ ಪಾಠ ಕಲಿಸೋಣ ಎಂದು ನಿರ್ಣಯ ತೆಗೆದುಕೊಂಡ ರೈತ ಸಂಘ ರೈತ ಸಮುದಾಯಕ್ಕೆ ಕರೆ ನೀಡಿದೆ.

ಪ್ರತಿಭಟನೆಯಲ್ಲಿ ಸುನಿತಾ ಪುಟ್ಟಣ್ಣಯ್ಯ, ದರ್ಶನ್ ಪುಟ್ಟಣ್ಣಯ್ಯ, ಕೆ.ಆರ್. ಜಯರಾಂ, ಲಿಂಗಪ್ಪಾಜಿ, ಕೆಂಪುಗೌಡ, ಪ್ರಸನ್ನ ಎನ್. ಗೌಡ, ಹೊಸ‌ಕೋಟೆ ಬಸವರಾಜ್, ಮನು ಸೋಮಯ್ಯ, ರವಿಕಿರಣ ಪೂಣಚ್ಚ, ಮಹೇಶ್ ಪ್ರಭು,  ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಸಿಐಟಿಯು ಸಂಘಟನೆಯ ಕುಮಾರಿ, ಜನವಾದಿ ಮಹಿಳಾ ಸಂಘಟನೆಯ ದೇವಿ ಸೇರಿದಂತೆ ಹಲವು ಜನಪರ ಚಳವಳಿಗಳ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!