Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಟೋಟ | ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಡಾ.ಹೆಚ್.ಎನ್.ರವೀಂದ್ರ ರಾಜೀನಾಮೆ

ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿರುವಂತೆಯೇ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಂಡ್ಯ ಲೋಕಸಭೆಗೆ ಸಿರಿವಂತ ಉದ್ಯಮಿ ವೆಂಕಟರಮಣೇಗೌಡ ಕಾಂಗ್ರೆಸ್ ಅಭ್ಯರ್ಥಿ ಯಾಗಲಿದ್ದಾರೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಬಿಂಬಿಸುತ್ತಿರುವ ಬೆನ್ನಲ್ಲೇ, ಇದರಿಂದ ಬೇಸತ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಹೆಚ್.ಎನ್.ರವೀಂದ್ರ ಇಂದು ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದರು.

ಮಂಡ್ಯನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ತಮ್ಮ ರಾಜಕೀಯ ಬದುಕಿನ ಒಡಲಾಳದ ಮಾತುಗಳನ್ನು ಪತ್ರಕರ್ತರೊಂದಿಗೆ ಹಂಚಿಕೊಂಡ ಅವರು, ಹತ್ತಾರು ವರ್ಷಗಳಿಂದ ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷದ ಒಳಿತಿಗಾಗಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದವರೆಗೆ ಶ್ರಮಿಸುತ್ತಿರುವ ಪಕ್ಷ ನಿಷ್ಟರಿಗೆ ರಾಜ್ಯ ಕಾಂಗ್ರೆಸ್ ಪಾಳೇಯದಲ್ಲಿ ಗೌರವ ಸಿಗುತ್ತಿಲ್ಲ, ಹಣವಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆಯದವರನ್ನು ಕರೆತಂದು ಚುನಾವಣೆ ನಿಲ್ಲಿಸುತ್ತಿದ್ಧಾರೆ, ಇಂತಹ ವ್ಯವಸ್ಥೆಯಲ್ಲಿ ನಾನು ಪಕ್ಷದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ ಎಂದರು.

ಕಾಂಗ್ರೆಸ್ ನಾಯಕರು ಅನ್ನ ಹಾಕುವ ಜನರನ್ನು ದುಡ್ಡಿನಲ್ಲಿ ಅಳೆಯಲು ಮುಂದಾಗಿದ್ದಾರೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ, ಕೆ.ಆರ್.ಪೇಟೆ, ಆ.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಿ, ನನ್ನ ಶಕ್ತಿ ಮೀರಿ ಶ್ರಮಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇನೆ, ಜಿಲ್ಲೆಯಲ್ಲಿ ಸ್ಥಳೀಯರು ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಹೊಂದಿದ್ದಾರೆ, ಆದರೂ ಸಹ ಹೊರಗಿನವರಿಗೆ ಮನ್ನಣೆ ನೀಡಲಾಗುತ್ತಿದೆ, ಚುನಾವಣೆಗೆ ಸ್ಪರ್ಧಿಸಲು ಹಣವೇ ಮಾನದಂಡನಾ ? ಜಿಲ್ಲೆಯ ಸಾಮಾನ್ಯ ಕುಟುಂಬ ವರ್ಗದವರು ಪ್ರತಿ ವರ್ಷ ದೇವರ ಸೇವೆ ಮಾಡಿ ನೂರಾರು ಜನಕ್ಕೆ ಊಟ ಹಾಕುತ್ತಾರೆ, ಆದರೆ ಕಾಂಗ್ರೆಸ್ ನಾಯಕರು ಅನ್ನ ಹಾಕುವ ಜನರನ್ನು ದುಡ್ಡಿನಲ್ಲಿ ಅಳೆಯಲು ಮುಂದಾಗಿದ್ದಾರೆ, ದುಡ್ಡು ಕೊಡದಿದ್ದರೆ ಜಿಲ್ಲೆಯ ಜನತೆ ಮತ ಹಾಕೊಲ್ಲ ಎಂದು ಜಿಲ್ಲೆಯ ಜನರನ್ನು ಅವಮಾನಿಸಲು ಮುಂದಾಗಿದ್ದಾರೆ ಕಿಡಿಕಾರಿದರು.

ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಜಾತ್ಯತೀತ ಜನತಾದಳದ ಏಳು ಶಾಸಕರು, ವಿಧಾನ ಪರಿಷತ್ ನ ಮೂವರು ಸದಸ್ಯರು ಅಷ್ಟೇ ಏಕೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು, ಆದರೆ ಜಿಲ್ಲೆಯ ಜನತೆ ತಿರಸ್ಕಾರ ಮಾಡಿದ್ದರು, ಇದೀಗ ಕಾಂಗ್ರೆಸ್ ಪಕ್ಷದ ಶಾಸಕರು ಲೋಕಸಭಾ ಕ್ಷೇತ್ರದ ಏಳು ಕ್ಷೇತ್ರದಲ್ಲಿ ಇದ್ದಾರೆ ಎಂದು ಬೀಗುತ್ತಿರುವ ಕಾಂಗ್ರೆಸ್ ನಾಯಕರು ಇದನ್ನ ಅರಿಯಬೇಕು. ಇತಿಹಾಸದಿಂದ ಪಾಠ ಕಲಿಯಲು ಮುಂದಾಗಬೇಕು, ಇಲ್ಲದಿದ್ದರೆ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ, ಸಾಹುಕಾರ್ ಚೆನ್ನಯ್ಯ ಮುಖ್ಯಮಂತ್ರಿ ಯಾಗುವ ಅವಕಾಶ ಬಂದಾಗ ಸೋತರು, ಎಸ್.ಎಂ ಕೃಷ್ಣ ಕೇಂದ್ರ ಕ್ಯಾಬಿನೆಟ್ ನಲ್ಲಿ ಸಚಿವರಾಗುವ ಸಂದರ್ಭ ಇತ್ತು, ಆದರೂ ಸಹ ಜಿಲ್ಲೆಯ ಜನತೆ ಅವರಿಗೆ ಮಣ್ಣು ಮುಕ್ಕಿಸಿದರು ಎಂಬುದನ್ನು ತಿಳಿಯಿರಿ ಎಂದರು.

ಟಿಕೆಟ್ ಪಡೆಯಲು ಹಣ ಮಾನದಂಡವೇ ?

ಹಣ ಇದ್ದವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಎಂಬ ಮಾನದಂಡ ಸರಿಯಲ್ಲ, ಕುಬೇರರಿಗೆ ಮಾತ್ರ ಮನ್ನಣೆ ನೀಡುವುದು ಸರಿಯಲ್ಲ, ಲೋಕಸಭೆ ಚುನಾವಣೆಯಲ್ಲಿ ಹಣ ಇದ್ದವರಿಗೆ ಮನ್ನಣೆ ನೀಡಿದರೆ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿಗೊ ಹೊರಗಿನಿಂದಲೇ ಹಣ ಇರುವ ಅಭ್ಯರ್ಥಿಯನ್ನು ಕರೆ ತರುವ ಚಾಳಿ ಮುಂದುವರೆಸುತ್ತಾರೆ. ಹೀಗಿರುವಾಗ ಪಕ್ಷವನ್ನೇ ನಂಬಿಕೊಂಡು ದುಡಿಯುತ್ತಿರುವ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

ಹುದ್ದೆಗಷ್ಟೇ ರಾಜೀನಾಮೆ ಪಕ್ಷಕ್ಕಲ್ಲ

ಕಾಂಗ್ರೆಸ್ ಪಕ್ಷದ ಹುದ್ದೆಗೆ ಮಾತ್ರ ರಾಜೀನಾಮೆ ನೀಡಿದ್ದೇನೆಯೆ ಹೊರತು ಪಕ್ಷಕ್ಕಲ್ಲ, ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ, ಆದರೆ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಹೋರಾಟ ಮುಂದುವರೆಯಲಿದೆ, ಮಂಡ್ಯ ಕಾಂಗ್ರೆಸ್ ನ ಹೆಬ್ಬಟ್ಟಿಗೆ ಗ್ಯಾಂಗ್ರಿನ್ ಬಂದಿದೆ. ಇದಕ್ಕಾಗಿ ತುರ್ತು ಆಪರೇಷನ್ ಅಗತ್ಯವಾಗಿದೆ, ಅದಕ್ಕಾಗಿ ಆಸ್ಪತ್ರೆ ಹುಡುಕಾಟದಲ್ಲಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾರೊಬ್ಬರಿಗೂ ಸದಾಭಿಪ್ರಾಯ ಇಲ್ಲ, ಎಲ್ಲಾ ಅಸಮಾಧಾನಿತರ ಪ್ರತಿನಿಧಿಯಾಗಿ ನಾನು ಧ್ವನಿ ಎತ್ತಿದ್ದೇನೆ, ರಾಜಕಾರಣ ಮುಂದಿಟ್ಟು ವ್ಯಕ್ತಿಗತ ದ್ವೇಷ ಮಾಡುವ ಮನಸ್ಥಿತಿ ನಮ್ಮದಲ್ಲ, ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು, ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದರೆ ನಾನು ನೇರವಾಗಿ ವಿರೋಧ ಮಾಡಲಿದ್ದೇನೆ, ಇದಕ್ಕಾಗಿ ಪರ್ಯಾಯ ಹಾದಿ ಹಿಡಿಯಲಿದ್ದೇನೆ ಎಂದರು.

ಅಧಿಕಾರ ಮುಖ್ಯವಲ್ಲ

ಜಿಲ್ಲೆಯ ಒಳಿತು ಮತ್ತು ಜನರ ಶ್ರೇಯಸ್ಸು ನನಗೆ ಮುಖ್ಯವೇ ಹೊರತು ಅಧಿಕಾರ ಮುಖ್ಯವಲ್ಲ, ನ್ಯಾಯಯುತ ಕೆಲಸಕ್ಕೆ ಅಧಿಕಾರ ಬೇಕಾಗಿಲ್ಲ, ಸ್ವಲ್ಪ ವಿಳಂಬವಾದರೂ ಜನಸಾಮಾನ್ಯರ ಕೆಲಸ ಆಗಲಿದೆ,ಈ ನಿಟ್ಟಿನಲ್ಲಿ ನನ್ನ ನಿಲುವು ಇರಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಸ್ಟಾರ್ ಚಂದ್ರು ಅವರು ಸ್ಥಳೀಯರೇ ಆಗಿದ್ದು, ನಾಟಿಕೋಳಿ ಎಂದು ಸಮರ್ಥಿಸಿಕೊಂಡಿದ್ಧಾರೆ ಎಂದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಗುರುರಾಜ ಕೋಳಿಯನ್ನೇ ಚಲುವರಾಯಸ್ವಾಮಿ ನಾಟಿ ಕೋಳಿ ಎಂದುಕೊಂಡಿದ್ದಾರೆ, ಅವರಿಗೆ ನಾಟಿ ಕೋಳಿಯ ರುಚಿ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.

ಅಹಂಕಾರಕ್ಕೆ ಸೆಡ್ಡು ಹೊಡೆದು ಹೋರಾಡುತ್ತೇನೆ

ಮಂಡ್ಯ ಜಿಲ್ಲೆಯ ಜನತೆ ಪ್ರೀತಿ ವಿಶ್ವಾಸಕ್ಕೆ ಬಗ್ಗುತ್ತಾರೆ, ನಾನು ಸಹ ಪ್ರೀತಿ ವಿಶ್ವಾಸಕ್ಕೆ ತಲೆಬಾಗುತ್ತೇನೆ, ಅಹಂಕಾರಕ್ಕೆ ಸೆಡ್ಡು ಹೊಡೆದು ಹೋರಾಡುತ್ತೇನೆ, ಇದಕ್ಕೆ ಲೋಕಸಭಾ ಚುನಾವಣೆ ಜನರಿಗೆ ವೇದಿಕೆ ಆಗಬೇಕು, ಜಿಲ್ಲೆಯ ಜನರ ಒಳಿತಿಗಾಗಿ ನಾನು ಸದಾಕಾಲ ಸಿದ್ಧನಿದ್ದೇನೆ ಎಂದರು.

ಮಂಡ್ಯ ಜಿಲ್ಲೆಯ ಜನ ಸ್ವಾಭಿಮಾನಿಗಳಾಗಿದ್ದು, ಹಣ ಹಾಗೂ ಅಧಿಕಾರದ ಥೈಲಿಗೆ ಮಾರು ಹೋಗುವುದಿಲ್ಲ, ಇದಕ್ಕೆ ಹಲವು ಉದಾಹರಣೆಗಳಿವೆ, 1957ರಲ್ಲಿ ಸಾಹುಕಾರ್ ಚೆನ್ನಯ್ಯ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಸ್ಥಳೀಯರಲ್ಲ ಎಂಬ ಕಾರಣಕ್ಕೆ ಜಿ.ಎಸ್. ಬೊಮ್ಮೇಗೌಡರ ಎದುರು ಸೋಲು ಕಾಣಬೇಕಾಯಿತು. 1984ರಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಂದಿನ ಪ್ರಭಾವಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಕೆ.ವಿ.ಶಂಕರಗೌಡರ ಎದುರು 1.25 ಲಕ್ಷ ಮತಗಳ ಅಂತರದಿಂದ ಪರಾಭವ ಹೊಂದಿದರು ಹಿಂದಿನ ಘಟನೆಯನ್ನು ಮೆಲಕು ಹಾಕಿದರು.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದಾಗ ಜಿಲ್ಲೆಯ 8 ವಿಧಾನಸಭೆ ಹಾಗೂ 3 ವಿಧಾನ ಪರಿಷತ್ ಸ್ಥಾನಗಳಲ್ಲಿ ಜೆಡಿಎಸ್ ಶಾಸಕರಿದ್ದು, ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಅಚ್ಚರಿ ಗೆಲುವು ಕಾಣುತ್ತಾರೆ. ಮೇಲಿನ ವಿದ್ಯಮಾನಗಳನ್ನು ಗಮನಿಸಿ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಜನಸಾಮಾನ್ಯರ ಒಡನಾಡಿಯಾಗಿರುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು, ಇಲ್ಲದಿದ್ದರೆ ಪ್ರಸ್ತುತ ಬಿಂಬಿಸುತ್ತಿರುವ ಸ್ಟಾರ್ ಚಂದ್ರು ಕಣಕ್ಕಿಳಿದರೆ ನನ್ನ ವಿರೋಧ ಇದ್ದೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಸಂಸದೆ ಸುಮಲತಾ ವಿರುದ್ದ ಕಿಡಿ

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ವಿರೋಧಿಸಿ ಸ್ವಾಭಿಮಾನದ ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸುಮಲತಾ ಅವರ ಗೆಲುವಿಗೆ ಸಾಕಷ್ಟು ಶ್ರಮಿಸಿದೆ. ಆದರೆ ಗೆದ್ದ ನಂತರ ಅವರು, ಅಭಿವೃದ್ದಿಗೆ ಮಾನ್ಯತೆ ಕೊಡದೇ ನಿರಾಸೆ ಉಂಟು ಮಾಡಿದರು ಎಂದು ಕಿಡಿಕಾರಿದರು.

ಹಣ ಹಾಗೂ ಅಧಿಕಾರಕ್ಕೆ ಆಸೆ ಪಡೆದೇ ಜಿಲ್ಲೆಯ ಅಮೂಲಾಗ್ರ ಬದಲಾವಣೆಗೆ ಸುಮಲತಾ ಅವರನ್ನು ಬೆಂಬಲಿಸಿ ಪಾದಯಾತ್ರೆ ಮಾಡಿದ್ದೆ. ಗೆಲುವಿನ ನಂತರ ಅವರಿಗೆ ನಮ್ಮಂತವರು ಕಾಣಲೇ ಇಲ್ಲ. ನಾನೇನೂ ರಾಕ್ ಲೈನ್ ವೆಂಕಟೇಶ್ ಅವರಂತೆ, ಅವರ ಹಿಂಬಾಲಕನಲ್ಲ ಎಂದು ಕಿಡಿಕಾರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!