Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಹೊರವಲಯದ ಜಾಗ ಸಾಹಿತ್ಯ ಸಮ್ಮೇಳನಕ್ಕೆ ಸೂಕ್ತವಲ್ಲ: ಜಿ.ಟಿ.ವೀರಪ್ಪ

ಮುಂಬರುವ ಡಿಸೆಂಬರ್ ನಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ‘ಸಕ್ಕರೆ ನಗರಿ’ ಎಂಬ ಖ್ಯಾತಿ ಪಡೆದಿರುವ ಮಂಡ್ಯ ನಗರ ವ್ಯಾಪ್ತಿಯಲ್ಲೇ ಆಯೋಜನೆಗೊಳ್ಳುವುದು ಸೂಕ್ತ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ 63ನೇ ಸಾಹಿತ್ಯ ಸಮ್ಮೇಳನದ ಆಯೋಜಕರಲ್ಲೊಬ್ಬರಾಗಿದ್ದ ಜಿ.ಟಿ.ವೀರಪ್ಪ ಅಭಿಪ್ರಾಯಿಸಿದ್ದಾರೆ.

ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ವಾರದ ಸಾಹಿತ್ಯ ಸಂವಾದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸ್ತುತ ನಿಗದಿಯಾಗಿರುವ ಮಂಡ್ಯನಗರದ ಹೊರ ವಲಯದ ಜಾಗ ಸಮ್ಮೇಳನಕ್ಕೆ ಸೂಕ್ತವಲ್ಲ, ಮಂಡ್ಯ ನಗರ ವ್ಯಾಪ್ತಿಯಲ್ಲಿ ಸರ್.ಎಂ.ವಿ ಕ್ರೀಡಾಂಗಣ, ಮಂಡ್ಯ ವಿ.ವಿ.ಆವರಣ, ಪಿಇಎಸ್ ಶಿಕ್ಷಣ ಸಂಸ್ಥೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ಡಾ.ಬಿ.ಆರ್.ಅಂಬೇಡ್ಕರ್ ಭವನ, ರೈತ ಸಭಾಂಗಣ, ವಿವೇಕಾನಂದ ರಂಗ ಮಂದಿರ ಸೇರಿದಂತೆ ಹಲವು ಸ್ಥಳಗಳಿದ್ದು, ಮುಖ್ಯ ವೇದಿಕೆ ಹಾಗೂ ಉಪ ವೇದಿಕೆ ನಿರ್ಮಿಸಲು ಮತ್ತು ಜನ ಸಮೂಹ ಪಾಲ್ಗೊಳ್ಳಲು ಸಹಕಾರಿಯಾಗಲಿದೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಜಿಲ್ಲೆಯ ಉನ್ನತ ಅಧಿಕಾರಿಗಳು ಲಕ್ಷಗಟ್ಟಲೆ ಜನ ಸಮ್ಮೇಳನಕ್ಕೆ ಆಗಮಿಸುತ್ತಾರೆಂಬ ಭ್ರಮೆ ಬಿಡಬೇಕು. ಸಾಹಿತ್ಯಾಸಕ್ತರ ಸಂಖ್ಯೆ ಹತ್ತಾರು ಸಾವಿರಗಳಿಗಷ್ಟೇ ಮೀಸಲಾಗಿರುತ್ತದೆ. ಜನ ಸಾಮಾನ್ಯರ ಪಾಲ್ಗೊಳ್ಳುವಿಕೆ ಸಮ್ಮೇಳನದ ಯಶಸ್ಸನ್ನು ಬಿಂಬಿಸುತ್ತದೆ. ಆ ಕಾರಣಕ್ಕಾಗಿ ನಗರ ವ್ಯಾಪ್ತಿಯಲ್ಲೇ ಸಮ್ಮೇಳನ ಆಯೋಜನೆಯಾಗುವುದು ಸೂಕ್ತವೆಂದರು.

ಅರ್ಹರಿಗೆ ಪದವಿ ನೀಡಲಿ

ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ವಿಸೃತವಾಗಿ ಸಾಹಿತ್ಯ ಕೃಷಿ ಮಾಡಿರುವ ಸಾಹಿತಿಗಳನ್ನು ಪಟ್ಟಿ ಮಾಡಿ ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಸೂಕ್ತ. ವಿದೇಶಿಗರು ಅಥವಾ ಸಾಹಿತ್ಯ ಕ್ಷೇತ್ರದ ಹೊರಗಿನ ವ್ಯಕ್ತಿಗಳನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದು ಸರಿಯಲ್ಲ ಎಂದರು.

ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರಿಗೆ ಕಲೆ, ಸಾಹಿತ್ಯ, ಸಂಗೀತ ಹಾಗೂ ರಂಗಭೂಮಿಗಳಲ್ಲಿ ವಿಶೇಷವಾದ ಆಸಕ್ತಿ ಇತ್ತು, ಅದೇ ರೀತಿ ಸಾಹಿತ್ಯ ಕೃಷಿಯ ಅನುಭವಿಗಳನ್ನು ಅಧ್ಯಕ್ಷರನ್ನಾಗಿಸಲು ಮಹೇಶ್ ಜೋಷಿ ಹಾಗೂ ಉಸ್ತುವಾರಿ ಸಚಿವರು ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರಬೇಕೆಂದರು.

1974ರಲ್ಲಿ ಜಿಲ್ಲೆಯಲ್ಲಿ ಜರುಗಿದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಹಿಳಾ ಸಾಹಿತಿ ಜಯದೇವಿ ತಾಯಿ ಲಿಗಾಡೆ ಹಾಗೂ 1994ರಲ್ಲಿ ನಡೆದ 63ನೇ ಸಾಹಿತ್ಯ ಸಮ್ಮೇಳಾಧ್ಯಕ್ಷರಾಗಿ ಹಿರಿಯ ಸಾಹಿತಿ ಚದುರಂಗ ಅವರನ್ನು ಸಾಹಿತ್ಯ ಕೃಷಿಯ ಹಿರಿತನ ಆಧರಿಸಿ ಆಯ್ಕೆ ಮಾಡಲಾಗಿತ್ತು, ಈ ಪರಂಪರೆ ಮುಂದುವರಿಯಲಿ ಎಂದು ಆಶಿಸಿದರು.

ಮೀರಾಶಿವಲಿಂಗಯ್ಯ ಆಯ್ಕೆ ಸೂಕ್ತ

ಸಾಹಿತ್ಯ ಸಮ್ಮೇಳನದ ಸಂಚಾಲಕರನ್ನಾಗಿ ಮೀರಾ ಶಿವಲಿಂಗಯ್ಯ ಅವರನ್ನು ಆಯ್ಕೆ ಮಾಡಿರುವುದು ಸಮಯೋಚಿತವಾಗಿದೆ. ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ಯಶಸ್ವಿಗೊಳಿಸುವ ಹೊಣೆಗಾರಿಕೆ ನಿಭಾಯಿಸುತ್ತಾರೆಂದರು.

ಸುಸಜ್ಜಿತ ಭವನವನ್ನು ನಿರ್ಮಿಸಲು ಮುಂದಾಗಲಿ

1994ರಲ್ಲಿ ಆಯೋಜನೆಗೊಂಡಿದ್ದ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 42 ಲಕ್ಷ ರೂಪಾಯಿ ಹಣ ಸಂಗ್ರಹವಾಗಿ ಸಮ್ಮೇಳನಕ್ಕೆ 22 ಲಕ್ಷ ವ್ಯಯಿಸಿ, ಸಮ್ಮೇಳನ ಯಶಸ್ವಿಗೊಳಿಸಲಾಯಿತು. ಉಳಿದ 20 ಲಕ್ಷ ಪೈಕಿ 6.25 ಲಕ್ಷ ರೂ.ವೆಚ್ಚದಲ್ಲಿ ಸಾಹಿತ್ಯ ಭವನ, ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ನಿರ್ಮಾಣಕ್ಕೆ 8.50 ಲಕ್ಷ, ರೈತ ಸಭಾಂಗಣ ಆವರಣದಲ್ಲಿರುವ ಕುವೆಂಪು ಪ್ರತಿಮೆ ನಿರ್ಮಾಣಕ್ಕೆ 4 ಲಕ್ಷ ಹಾಗೂ ಜನಪದ ಲೋಕ ಅಭಿವೃದ್ದಿಗೆ 1 ಲಕ್ಷ ವಂತಿಕೆ ನೀಡಲಾಗಿತ್ತು. ಅದೇ ರೀತಿ ಈ ಬಾರಿ ಸಂಗ್ರಹವಾಗುವ ಹಣದಲ್ಲಿ ಉಳಿದ ಹಣವನ್ನು ಸಾಹಿತ್ಯ ಚಟುವಟಿಕೆಗಳಿಗೆ ಪೂರಕವಾಗುವ ರೀತಿಯಲ್ಲಿ ಸುಸಜ್ಜಿತ ಭವನವನ್ನು ನಿರ್ಮಿಸಲು ಮುಂದಾಗಲಿ ಎಂದು ಸಲಹೆ ನೀಡಿದರು.

ಕನ್ನಡ ಭಾಷೆ ಮತ್ತಷ್ಟು ಅಭಿವೃದ್ದಿ ಕಾಣಲು ಸಾಹಿತ್ಯ ಕಾರ್ಯಕ್ರಮಗಳನ್ನು ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಆಯೋಜಿಸಬೇಕೆಂದು ಕಿವಿಮಾತು ಹೇಳಿದ ಅವರು, ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಸಾಹಿತ್ಯಾಸಕ್ತರ ಅಭಿರುಚಿಯಂತೆ ನಡೆಯಬೇಕು, ಅದು ಜಾತ್ರೆಯಾಗಬಾರದು ಎಂದರು.

ಸಂವಾದದಲ್ಲಿ ಸಮ್ಮೇಳನದ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ್, ಹಿರಿಯ ಪತ್ರಕರ್ತರಾದ ಚೈತನ್ಯ ಕುಮಾರ್, ಕೆರಗೋಡು ಸೋಮಶೇಖರ್, ನವೀನ್ ಕುಮಾರ್, ವಾರ್ತಾಧಿಕಾರಿ ನಿರ್ಮಲ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!