Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ವಿಧಾನಸಭೆ ಚುನಾವಣೆ | ಆಖಾಡದಲ್ಲಿ ಚತುಷ್ಕೋನ ಸ್ಪರ್ಧೆ

✍️ ಮುತ್ತುರಾಜು, ವಿಶ್ಲೇಷಕರು ನಾನು‌ ಗೌರಿ.ಕಾಮ್


  • ಅನ್ಯಾಯವನ್ನು ಸಹಿಸದೆ ಸಿಡಿದೇಳುವ ಗುಣ ಮಂಡ್ಯ ಮಣ್ಣಿನದ್ದು 

  • ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆ.ವಿ. ಶಂಕರಗೌಡರ ಆಯ್ಕೆ 
  • ಈ ಬಾರಿ ಚತುಷ್ಕೋನ ಸ್ಪರ್ಧೆ ಏರ್ಪಡುವ ಸಂಭವ, ತೀವ್ರ ಹಣಾಹಣಿ ನಡೆಯುವ ಸೂಚನೆ ಇದೆ

ಸಕ್ಕರೆಯ ಜಿಲ್ಲೆ ಎಂದು ಕರೆಸಿಕೊಳ್ಳುವ ಮಂಡ್ಯ ಚಳವಳಿಗಳ ತವರೂರು. 1930ರ ಇರ್ವಿನ್ ನಾಲಾ ಚಳವಳಿಯಿಂದ ಆರಂಭವಾಗಿ ಇತ್ತೀಚಿನ ಕಬ್ಬು ಮತ್ತು ಭತ್ತಕ್ಕೆ ವೈಜ್ಞಾನಿಕ ಬೆಲೆ ನಿಗದಿ ಬೇಡಿಕೆಯ ಪ್ರತಿಭಟನೆಗಳವರೆಗೆ ಸಾವಿರಾರು ಹೋರಾಟಗಳನ್ನು ಜಿಲ್ಲೆಯು ಕಂಡಿದೆ. ಅನ್ಯಾಯವನ್ನು ಸಹಿಸದೆ ಸಿಡಿದೇಳುವ ಗುಣ ಮಂಡ್ಯ ಮಣ್ಣಿನದ್ದು ಎನ್ನುವ ಭಾವನೆ ಇಲ್ಲಿನ ಜನರದ್ದು. ಹಾಗಾಗಿ ಮಂಡ್ಯ ಅಂದ್ರೆ ಇಂಡಿಯಾಗೂ ಗೊತ್ತು ಎಂದು ಇಲ್ಲಿನ ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕೃಷಿ ಆಧಾರಿತ ರೈತಾಪಿ ಜನರೆ ಪ್ರಧಾನವಾಗಿರುವ ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಗಳಿವೆ. ಕಬ್ಬು, ಭತ್ತ, ರಾಗಿ, ರೇಷ್ಮೆ, ಹುರುಳಿ ಸೇರಿದಂತೆ ಹಲವು ಬೆಳೆ ಬೆಳೆದರೂ ರೈತರ ಬದುಕು ಇಂದಿಗೂ ಹಸನಾಗಿಲ್ಲದಿರುವುದು ದುರಂತ.

ಮಾಂಡವ್ಯ ಋಷಿಗಳ ನೆಲವೀಡಾಗಿದ್ದ ಕಾರಣ ಜಿಲ್ಲೆಗೆ ಮಂಡ್ಯ ಎಂದು ಹೆಸರು ಬಂದಿದೆ ಎನ್ನಲಾಗುತ್ತಿದೆ. ರಾಮನಗರ, ತುಮಕೂರು, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಂದ ಸುತ್ತುವರೆದಿರುವ ಮಂಡ್ಯ ಜಿಲ್ಲೆಯು ಬೆಂಗಳೂರು ಮತ್ತು ಮೈಸೂರು ಮಹಾನಗರಗಳ ನಡುವೆ ಇದ್ದರೂ ಇಂದಿಗೂ ತನ್ನತನ ಮತ್ತು ವಿಶಿಷ್ಟತೆಯನ್ನು ಉಳಿಸಿಕೊಂಡಿದೆ. ಕಾವೇರಿ, ಶಿಂಷಾ, ಹೇಮಾವತಿ, ಲೋಕಪಾವನಿ, ಲಕ್ಷ್ಮಣತೀರ್ಥ ಮತ್ತು ವೀರ ವೈಷ್ಣವಿ ನದಿಗಳು ಹರಿಯುವ ಮೂಲಕ ಜಿಲ್ಲೆಯನ್ನು ಸಮೃದ್ಧವಾಗಿಟ್ಟಿವೆ. ಜಾನಪದ ಕಲೆ ಮತ್ತು ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿರುವ ಜಿಲ್ಲೆಯು ಪ್ರವಾಸೋದ್ಯಮಕ್ಕೂ ಹೆಸರಾಗಿದೆ.

ಮಂಡ್ಯ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರು

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಬ್ರಿಟಿಷರ ಎದೆ ನಡುಗಿಸಿದ್ದನು. ಅಷ್ಟು ಮಾತ್ರವಲ್ಲದೆ ರೈತರಿಗೆ, ದಲಿತರಿಗೆ, ಸೈನಿಕರಿಗೆ ಭೂಮಿ ಹಂಚಿ ಕೃಷಿಗೆ ಪ್ರೋತ್ಸಾಹ ನೀಡಿದ್ದನು. ಬ್ರಿಟಿಷರ ಸುಲಿಗೆ ತೆರಿಗೆ ಪದ್ಧತಿಯ ವಿರುದ್ಧವಾಗಿ ರೈತಪರ ತೆರಿಗೆ ಪದ್ಧತಿ ಜಾರಿಗೆ ತಂದಿದ್ದ ಕೀರ್ತಿ ಟಿಪ್ಪುವಿನದು. ಸಾವಿರಾರು ಕೆರೆಗಳನ್ನು ಕಟ್ಟಿಸಿದ್ದಲ್ಲದೆ ಕನ್ನಂಬಾಡಿಯಲ್ಲಿ ಅಣೆಕಟ್ಟು ನಿರ್ಮಿಸಲು ಅಡಿಪಾಯ ಹಾಕಿದ್ದವನು ವೀರ ಟಿಪ್ಪು ಸುಲ್ತಾನ್. ರಾಕೆಟ್ ತಂತ್ರಜ್ಞಾನ ಬಳಸಿ ಬ್ರಿಟಿಷರನ್ನು ದೇಶದಿಂದ ಹೊಡೆದೋಡಿಸಲು ಯತ್ನಿಸಿದ್ದ ಟಿಪ್ಪು ಸುಲ್ತಾನ್ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನೆಲೆಸಿದ್ದಾನೆ.ಈಗ ಈಗ

ಟಿಪ್ಪೂ ನಂತರ ಜಿಲ್ಲೆಗೆ ಭದ್ರ ಬುನಾದಿ ಹಾಕಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಕನ್ನಂಬಾಡಿ ಅಣೆಕಟ್ಟು ಕಟ್ಟಿ ನೀರಾವರಿ ಒದಗಿಸಿದರು. ಬೃಂದಾವನ ನಿರ್ಮಿಸಿದರು. ಮೈಷುಗರ್ ಕಾರ್ಖಾನೆ ನಿರ್ಮಿಸಿ ಕಬ್ಬು ಬೆಳೆಗೆ ಪ್ರೋತ್ಸಾಹ ನೀಡಿದರು. ಮೀಸಲಾತಿ ನೀತಿ ಜಾರಿಗೊಳಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ಅರಸರಾದರು. ಅವರ ಹಾದಿಯಲ್ಲಿಯೇ ಸರ್ ಮಿರ್ಜಾ ಇಸ್ಮಾಯಿಲ್, ಸರ್.ಎಂ ವಿಶ್ವೇಶ್ವರಯ್ಯ, ಡಾ.ಲೆಸ್ಲಿ ಸಿ ಕೋಲ್ಮನ್ ಜಿಲ್ಲೆಯ ಹಿತಕ್ಕಾಗಿ ದುಡಿದಿದ್ದಾರೆ.

ಹೋರಾಟದ ಹೆಜ್ಜೆಗಳು

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಿಲ್ಲೆಯ ಶಿವಪುರ ಬಳಿ ನಡೆದ ಧ್ವಜ ಸತ್ಯಾಗ್ರಹ ಹೋರಾಟವು ಚರಿತ್ರೆಯಲ್ಲಿ ಸ್ಥಾನ ಪಡೆದಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಧ್ವಜ ಹಾರಿಸಬಾರದೆಂಬ ಬ್ರಿಟಿಷರ ಕಾನೂನು ಉಲ್ಲಂಘಿಸಿ ನಡೆದ ಶಿವಪುರ ಧ್ವಜ ಸತ್ಯಾಗ್ರಹ ಮೈಸೂರು ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿತು. ಅದು ವಿದುರಾಶ್ವತ ಹೋರಾಟಕ್ಕೆ ಪ್ರೇರಣೆಯಾಯಿತು. ಈ ಎಲ್ಲಾ ಹೋರಾಟಗಳು ಎಚ್.ಕೆ ವೀರಣ್ಣಗೌಡ, ಎ.ಜಿ ಬಂದೀಗೌಡ, ಜಿ.ಮಾದೇಗೌಡ, ಡಾ.ಸಿ ಬಂದೀಗೌಡ, ನಿತ್ಯ ಸಚಿವರೆಂದೆ ಖ್ಯಾತರಾದ ಕೆ.ವಿ ಶಂಕರೇಗೌಡರಂತಹ ಮುತ್ಸದ್ಧಿ ರಾಜಕಾರಣಿಗಳು ಜಿಲ್ಲೆಯ ನಾಯಕತ್ವ ವಹಿಸಲು ಕಾರಣವಾದವು.

ಆನಂತರ ವರುಣಾನಾಲಾ ವಿರೋಧಿ ಚಳವಳಿ, ಕಾವೇರಿ ನದಿ ನೀರು ಹಂಚಿಕೆಯಲ್ಲಿನ ಅನ್ಯಾಯ ವಿರೋಧಿಸಿ ಬೃಹತ್ ಹೋರಾಟಕ್ಕೆ ಜಿಲ್ಲೆ ಸಾಕ್ಷಿಯಾಯಿತು. ಮಳೆ ಚೆನ್ನಾಗಿ ಬಂದಾಗ ಕಾವೇರಿ ನೀರಿನ ಸಮಸ್ಯೆ ತಲೆದೋರುವುದಿಲ್ಲ. ಆದರೆ ಮಳೆ ಕೈಕೊಟ್ಟಾಗ ಸಮಸ್ಯೆ ದಿಢೀರ್ ಎಂದು ಭುಗಿಲೇಳುತ್ತದೆ. ಇನ್ನು ಕಬ್ಬಿಗೆ ವೈಜ್ಞಾನಿಕ ದರ ನಿಗದಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಆರಂಭಿಸಿದ್ದ ಹೋರಾಟ ಇಂದಿಗೂ ಮುಂದುವರೆದಿದೆ. ಟನ್ ಕಬ್ಬಿಗೆ ಕನಿಷ್ಟ 4500 ರೂ ನಿಗದಿ ಮಾಡಬೇಕೆಂದು ರೈತರು ಚಳವಳಿ ನಡೆಸುತ್ತಿದ್ದಾರೆ. ದಲಿತ ಚಳವಳಿ, ಕನ್ನಡ ಚಳವಳಿ ಮತ್ತು ಕಾರ್ಮಿಕ ಚಳವಳಿ ಮಂಡ್ಯದಲ್ಲಿ ನೆಲೆ ಕಂಡಿವೆ. ಹೆಣ್ಣು ಭ್ರೂಣ ಹತ್ಯೆಯಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆಯುವ ಮೂಲಕ ಇತ್ತೀಚೆಗೆ ಜಿಲ್ಲೆಯು ಕುಖ್ಯಾತಿಗೆ ಒಳಗಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಮರ್ಯಾದಾಹೀನ ಹತ್ಯೆಗಳು ಹೆಚ್ಚುತ್ತಿವೆ. ಅತಿ ಹೆಚ್ಚು ಪೋಕ್ಸೊ ಪ್ರಕರಣಗಳು ಮಂಡ್ಯದಲ್ಲಿ ವರದಿಯಾಗಿವೆ. ಅವುಗಳ ವಿರುದ್ಧದ ಮಹಿಳಾ ಚಳವಳಿ ಸಹ ಪ್ರಬಲವಾಗಿ ದನಿಯೆತ್ತುತ್ತಿದೆ. ಶ್ರಮಿಕ ನಗರ ನಿವಾಸಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಮಂಡ್ಯ ಜಿಲ್ಲೆ ಹಲವು ಹೋರಾಟಗಳನ್ನು ಇಂದಿಗೂ ಉಸಿರಾಡುತ್ತಿದೆ.

ಕೃಷಿ-ಆರ್ಥಿಕತೆ

ಕಬ್ಬು ಮತ್ತು ಭತ್ತ ಜಿಲ್ಲೆಯ ಪ್ರಧಾನ ಬೆಳೆಗಳು. ಈ ಎರಡು ಬೆಳೆಗಳು ಅತಿ ಹೆಚ್ಚು ನೀರಿನ ಅಗತ್ಯ ಕೇಳುವ ಬೆಳೆಗಳೂ ಆಗಿದ್ದು ಸಮರ್ಪಕ ಮಳೆ ಬಾರದಿದ್ದಾಗ ರೈತರು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳಿವೆ. ಹೊರಗಿನವರಿಗೆ ಮಂಡ್ಯ ಜಿಲ್ಲೆ ಸಮೃದ್ಧ ನೀರಾವರಿ ಹೊಂದಿದ ಜಿಲ್ಲೆಯಾಗಿ ಕಾಣಿಸುತ್ತದೆ. ಆದರೆ ವಾಸ್ತವವಾಗಿ ಶೇ.50 ಪ್ರದೇಶ ಇಂದಿಗೂ ಮಳೆಯಾಶ್ರಿತವಾಗಿದೆ. ಆ ಕಡೆಯಲ್ಲೆಲ್ಲಾ ರಾಗಿ, ಹುರಳಿ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಪಂಪ್‌ಸೆಟ್ ಹಾಕಿಸಿಕೊಂಡ ರೈತರು ತರಕಾರಿ, ರೇಷ್ಮೆಯತ್ತ ಮುಖ ಮಾಡಿದ್ದಾರೆ. ಎಷ್ಟೆಲ್ಲಾ ಬೆಳೆದರೂ ಸಮರ್ಪಕ ಬೆಲೆ ಸಿಗದ ಕಾರಣ ರೈತರು ನಲುಗಿಹೋಗಿದ್ದಾರೆ. 2015ರಲ್ಲಿ ಬರ ಬಂದು 125ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ರಾಹುಲ್ ಗಾಂಧಿ ಮಂಡ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಬ್ಬಿನ ಬಾಕಿ ಪಾವತಿಗೆ ಒತ್ತಾಯಿಸಿ ಕಪ್ಪುಬಾವುಟ ಪ್ರದರ್ಶನ ನಡೆಸಲಾಗಿತ್ತು. ನಂತರ ರಾತ್ರೋರಾತ್ರಿ ಹಣ ಪಾವತಿಯಾಗಿತ್ತು!.

ರೈತರ ಮೇಲಿನ ಅನ್ಯಾಯ ಖಂಡಿಸಿ ಹುಟ್ಟಿಕೊಂಡ ರೈತಸಂಘ ಪ್ರಬಲವಾಗಿ ಬೆಳೆದ ಜಿಲ್ಲೆಗಳಲ್ಲಿ ಮಂಡ್ಯ ಸಹ ಒಂದು. ಜಿಲ್ಲೆಯಲ್ಲಿ ಕೆ.ಎಸ್ ಪುಟ್ಟಣ್ಣಯ್ಯ, ಎಸ್.ಡಿ ಜಯರಾಂ, ಎಂ.ಶ್ರೀನಿವಾಸ್, ಎಚ್.ಶ್ರೀನಿವಾಸ್, ನಂದಿನಿ ಜಯರಾಂ, ಕೆ.ಎಸ್ ನಂಜುಂಡೇಗೌಡ, ಸುನಂದಾ ಜಯರಾಂ ಮುಂತಾದವರು ಸಮರ್ಥ ನಾಯಕತ್ವ ನೀಡಿ ರೈತಸಂಘವನ್ನು ಕಟ್ಟಿದರು. ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದ, ರೈತರಿಗೆ ದನಿಯಾಗಿದ್ದ ರೈತಸಂಘ ಇಂದಿಗೂ ಅಸ್ತಿತ್ವ ಉಳಿಸಿಕೊಂಡು ಹೋರಾಟನಿರತವಾಗಿದೆ.

ಕೆ.ಆರ್.ಎಸ್ ಅಣೆಕಟ್ಟು, ಎಡಮುರಿ-ಬಲಮುರಿ, ರಂಗನತಿಟ್ಟು, ಶ್ರೀರಂಗಪಟ್ಟಣ, ಮೇಲುಕೋಟೆ, ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು, ಕೆರೆ ತೊಣ್ಣೂರು, ಕುಂತಿ ಬೆಟ್ಟ, ತಲಕಾಡು, ಸೋಮನಾಥ ದೇವಾಲಯದಂತಹ ಹತ್ತು ಹಲವು ಪ್ರವಾಸಿ ತಾಣಗಳಿವೆ. ಆದರೆ ಸೂಕ್ತ ಯೋಜನೆಗಳಿಲ್ಲದ ಕಾರಣ ಪ್ರವಾಸೋದ್ಯಮ ನಿರೀಕ್ಷಿಸಿದಷ್ಟು ಜಿಲ್ಲೆಯಲ್ಲಿ ಬೆಳವಣಿಗೆಯಾಗಿಲ್ಲ.

ರಾಜಕೀಯ ಇತಿಹಾಸ

1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ವಿ. ಶಂಕರಗೌಡರು ಕಿಸಾನ್ ಮಜ್ದೂರ್ ಪಕ್ಷದ ಕೆ. ಚಿಕ್ಕಲಿಂಗಯ್ಯ ವಿರುದ್ಧ ಗೆಲುವು ಸಾಧಿಸುತ್ತಾರೆ. ಆದರೆ ಕೆಂಗಲ್ ಹನುಮಂತಯ್ಯ ಸರ್ಕಾರ ಮೈಸೂರು ಭಾಗದ ರೈತರಿಗೆ ಹೆಚ್ಚಿನ ಕರ ನಿಗದಿ ಮಾಡಿದ್ದನ್ನು ವಿರೋಧಿಸಿ ಶಂಕರೇಗೌಡರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. 1954ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಿ.ಎಸ್ ಬೊಮ್ಮೇಗೌಡರು ಗೆಲುವು ಸಾಧಿಸುತ್ತಾರೆ.

1957ರಲ್ಲಿ ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘನೆ ಆರೋಪದಲ್ಲಿ ಕೆ.ವಿ.ಶಂಕರೇಗೌಡರಿಗೆ ಟಿಕೆಟ್ ನಿರಾಕರಿಸಿ ಸ್ವಾತಂತ್ರ್ಯ ಹೋರಾಟಗಾರ ಸಾಹುಕಾರ್ ಚನ್ನಯ್ಯ ಅವರನ್ನು ಕಣಕ್ಕಿಳಿಸಲಾಗುತ್ತದೆ. ಅವರೆದುರು ಜಿ.ಎಸ್. ಬೊಮ್ಮೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು 1,875 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ.

1962ರ ಚುನಾವಣೆ ವೇಳೆಗೆ ಮತ್ತೆ ಕೆ.ವಿ. ಶಂಕರಗೌಡರಿಗೆ ಕಾಂಗ್ರೆಸ್ ಟಿಕೆಟ್ ದೊರೆಯುತ್ತದೆ. ಆಗ ಕಾಂಗ್ರೆಸ್‌ನಲ್ಲಿದ್ದ ಜೆ. ದೇವಯ್ಯ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೇವಲ 660 ಮತಗಳ ಅಂತರದಿಂದ ಜಯ ಕಾಣುತ್ತಾರೆ. 1967ರ ಚುನಾವಣೆ ವೇಳೆಗೆ ಕೆ.ವಿ ಶಂಕರಗೌಡರು ಎಂಎಲ್‌ಸಿಯಾಗಿ ಶಿಕ್ಷಣ ಸಚಿವರಾಗಿರುತ್ತಾರೆ. ಆಗ ಕಾಂಗ್ರೆಸ್ ಪಕ್ಷವು ಗೌಡಗೆರೆ ನಾಗಪ್ಪ ಅವರನ್ನು ಕಣಕ್ಕಿಳಿಸುತ್ತದೆ. ಸ್ವತಂತ್ರ ಅಭ್ಯರ್ಥಿಯಾಗಿ ಕೆ ಚಿಕ್ಕಲಿಂಗಯ್ಯ ಎದುರಾಳಿಯಾಗುತ್ತಾರೆ. 3,363 ಮತಗಳ ಅಂತರದಿಂದ ಗೌಡಗೆರೆ ನಾಗಪ್ಪ ಜಯ ಸಾಧಿಸುತ್ತಾರೆ.

1972ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಮತ್ತು ಸಂಸ್ಥಾ ಕಾಂಗ್ರೆಸ್ ನಡುವೆ ಚುನಾವಣಾ ಸಮರ ನಡೆಯುತ್ತದೆ. ಇಂದಿರಾ ಕಾಂಗ್ರೆಸ್‌ನಿಂದ ಎಂ.ಎಚ್. ಬೋರಯ್ಯ ಸ್ಪರ್ಧಿಸಿದರೆ, ಸಂಸ್ಥಾ ಕಾಂಗ್ರೆಸ್‌ನಿಂದ ಕೆ.ವಿ. ಶಂಕರಗೌಡರು ಸ್ಪರ್ಧಿಸುತ್ತಾರೆ. ಆದರೆ 147 ಮತಗಳ ಅಂತರದಿಂದ ಮತ್ತೆ ಶಂಕರೇಗೌಡರು ಸೋಲು ಅನುಭವಿಸುತ್ತಾರೆ.

1978ರ ಚುನಾವಣೆ ವೇಳೆಗೆ 4 ಬಾರಿ ಮಂಡ್ಯದ ಸಂಸದರಾಗಿದ್ದ ಎಂ.ಕೆ. ಶಿವನಂಜಪ್ಪ ಅವರು ನಿಧನರಾಗಿರುತ್ತಾರೆ. ಅವರ ಪುತ್ರ ಎಂ.ಎಸ್ ಆತ್ಮಾನಂದರವರು ಜನತಾಪಕ್ಷದಿಂದ ವಿಧಾನ ಸಭೆಗೆ ಸ್ಪರ್ಧಿಸುತ್ತಾರೆ. ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಾಯದ ಸಾದತ್ ಅಲಿಖಾನ್ ಕಣಕ್ಕಿಳಿಯುತ್ತಾರೆ. ಎಂ.ಎಸ್. ಆತ್ಮಾನಂದರವರು ಮೊದಲ ಯತ್ನದಲ್ಲಿಯೇ 2,747 ಮತಗಳ ಅಂತರದಿಂದ ಗೆಲುವು ಕಾಣುತ್ತಾರೆ.

1983 ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದರೂ ಹಾಲಿ ಶಾಸಕ ಆತ್ಮಾನಂದರವರಿಗೆ ಕಾಂಗ್ರೆಸ್ ಟಿಕೆಟ್ ದೊರಕುವುದಿಲ್ಲ. ಮತ್ತೆ ಸಾದತ್ ಅಲಿಖಾನ್ ಕಾಂಗ್ರೆಸ್‌ನಿಂದ ಕಣಕ್ಕಿಳಿದರೆ ಜನತಾ ಪಕ್ಷದಿಂದ ಸ್ಪರ್ಧಿಸಿದ ಮಾಜಿ ಶಾಸಕ ಬಿ. ದೊಡ್ಡಬೋರೇಗೌಡರು 11,649 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುತ್ತಾರೆ. 1985ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎಂ.ಡಿ. ರಮೇಶರಾಜು ಅವರಿಗೆ ಟಿಕೆಟ್ ನೀಡುತ್ತದೆ. ರೈತಸಂಘದ ಹೋರಾಟದಿಂದ ಮುನ್ನಲೆಗೆ ಬಂದಿದ್ದ ಎಸ್.ಡಿ. ಜಯರಾಂ ಅವರನ್ನು ಜನತಾ ಪಕ್ಷ ಕಣಕ್ಕಿಳಿಸುತ್ತದೆ. ಇಬ್ಬರ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ಜಯರಾಂ ಅವರು 4,004 ಮತಗಳ ಅಂತರದಿಂದ ಗೆಲುವು ಸಾಧಿಸಿ ಮೊದಲ ಚುನಾವಣೆಯಲ್ಲಿಯೇ ವಿಧಾನಸಭೆ ಪ್ರವೇಶಿಸುತ್ತಾರೆ.

1989ರ ಚುನಾವಣೆಯಲ್ಲಿ ಹಾಲಿ ಶಾಸಕರಾಗಿದ್ದ ಎಸ್.ಡಿ. ಜಯರಾಂ ಅವರು ಪುನರಾಯ್ಕೆ ಬಯಸಿ ಜನತಾ ಪಕ್ಷದಿಂದ ಸ್ಪರ್ಧಿಸುತ್ತಾರೆ. ಕೊನೆಗೂ ಕಾಂಗ್ರೆಸ್ ಪಕ್ಷವು ಎರಡು ಚುನಾವಣೆಗಳ ನಂತರ ಮಾಜಿ ಶಾಸಕ ಎಂ.ಎಸ್ ಆತ್ಮಾನಂದರವರಿಗೆ ಟಿಕೆಟ್ ನೀಡುತ್ತದೆ. ಆತ್ಮಾನಂದ ಅವರು 27,829 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರ ಸಚಿವ ಸಂಪಟದಲ್ಲಿ ರೇಷ್ಮೆ, ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ತೋಟಗಾರಿಕೆ, ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾರೆ.

1994ರ ಚುನಾವಣೆಯಲ್ಲಿ ಹಾಲಿ ಸಚಿವರಾಗಿದ್ದ ಎಂ.ಎಸ್.ಆತ್ಮಾನಂದ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಜನತಾ ದಳದಿಂದ ಎಸ್.ಡಿ. ಜಯರಾಂ ಅವರು ಮತ್ತೆ ಸ್ಪರ್ಧಿಸುತ್ತಾರೆ. ಜಯರಾಂ ಅವರು 30,033 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. ಎಚ್.ಡಿ. ದೇವೇಗೌಡ ಹಾಗೂ ಜೆ.ಎಚ್. ಪಟೇಲ್ ಅವರ ಸಚಿವ ಸಂಪುಟಗಳಲ್ಲಿ ಗಣಿ ಮತ್ತು ಭೂವಿಜ್ಞಾನದ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾರೆ. ಆದರೆ ಅವರು ಸಚಿವರಾಗಿದ್ದಾಗಲೇ ಆನಾರೋಗ್ಯದಿಂದ 1996ರಲ್ಲಿ ನಿಧನರಾಗುತ್ತಾರೆ.

1997ರಲ್ಲಿ ನಡೆಯುವ ಉಪಚುನಾವಣೆಯಲ್ಲಿ ಎಸ್.ಡಿ. ಜಯರಾಂ ಅವರ ಪತ್ನಿ ಪ್ರಭಾವತಿ ಜಯರಾಂ ಅವರನ್ನು ಜನತಾದಳವು ಕಣಕ್ಕಿಳಿಸುತ್ತದೆ. ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಎಂ.ಎಚ್. ಬೋರಯ್ಯ ಅವರ ಪುತ್ರ ಎಂ.ಬಿ ಶ್ರೀಕಾಂತ್ ಕಣಕ್ಕಿಳಿಯುತ್ತಾರೆ. ಆದರೆ ಎಸ್.ಡಿ ಜಯರಾಂರವರ ಸಾವಿನ ಅನುಕಂಪದ ಅಲೆಯಲ್ಲಿ ಪ್ರಭಾವತಿ ಜಯರಾಂರವರು 8,774 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ.

1999ರ ಚುನಾವಣೆಯಲ್ಲಿ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಅವರಿಗೆ ಮತ್ತೆ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರೆಯುತ್ತದೆ. ಜೆಡಿಯು ಪಕ್ಷದಿಂದ ರೈತ ಹೋರಾಟಗಾರ ಎಂ.ಶ್ರೀನಿವಾಸ್ ಕಣಕ್ಕಿಳಿಯುತ್ತಾರೆ. ಹೊಂದಾಣಿಕೆ ರಾಜಕಾರಣದಿಂದ ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದಿಲ್ಲ. ಹಾಗಾಗಿ ಎಂ.ಎಸ್. ಆತ್ಮಾನಂದರವರು 18,056 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಶಾಸಕರಾಗುತ್ತಾರೆ.

2004ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ.ಎಸ್. ಆತ್ಮಾನಂದರವರು ಕಣಕ್ಕಿಳಿಯುತ್ತಾರೆ. ಎಂ.ಶ್ರೀನಿವಾಸ್ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗುತ್ತಾರೆ. ಎಂ.ಶ್ರೀನಿವಾಸ್ ಅವರು 14,880 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಾರೆ.

2008ರ ವೇಳೆಗೆ ಕ್ಷೇತ್ರ ಪುನರ್‌ವಿಂಗಡಣೆಯಾಗುತ್ತದೆ. ಕೆರಗೋಡು ಕ್ಷೇತ್ರವನ್ನು ಮಂಡ್ಯ ಮತ್ತು ಮೇಲುಕೋಟೆ ಕ್ಷೇತ್ರಗಳಿಗೆ ಸೇರಿಸಲಾಗುತ್ತದೆ. ಅಲ್ಲಿ ಶಾಸಕರಾಗಿದ್ದ ಎಚ್.ಬಿ ರಾಮುರವರು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ. ಜೆಡಿಎಸ್‌ನಿಂದ ಹಾಲಿ ಶಾಸಕ ಎಂ.ಶ್ರೀನಿವಾಸ್ ಕಣಕ್ಕಿಳಿಯುತ್ತಾರೆ. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಎಚ್.ಪಿ. ನಾಗೇಂದ್ರರವರ ಹತ್ಯೆಯಾಗಿರುತ್ತದೆ. ಅವರ ಪತ್ನಿ ವಿದ್ಯಾ ನಾಗೇಂದ್ರರವರಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದುದರಿಂದ ಅವರು ಬಿಜೆಪಿ ಅಭ್ಯರ್ಥಿಯಾಗುತ್ತಾರೆ. ಮೂರು ಜನರ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಜೆಡಿಎಸ್ ಪಕ್ಷದ ಎಂ.ಶ್ರೀನಿವಾಸ್ ಅವರು 10,529 ಮತಗಳ ಅಂತರದಿಂದ ಸತತ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ಎಂ.ಶ್ರೀನಿವಾಸ್ 47,265 ಮತ ಪಡೆದರೆ, ವಿದ್ಯಾ ನಾಗೇಂದ್ರ 36,736 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆಯುತ್ತಾರೆ. ಎಚ್.ಬಿ. ರಾಮು, 31,407 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿಯುತ್ತಾರೆ.

2013ರ ಚುನಾವಣೆ ವೇಳೆಗೆ ಹಾಲಿ ಶಾಸಕ ಎಂ.ಶ್ರೀನಿವಾಸ್ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಟಿಕೆಟ್ ಸಿಗದಿದ್ದರಿಂದ ಎಸ್.ಡಿ ಜಯರಾಂರವರ ಪುತ್ರ ಅಶೋಕ್ ಜಯರಾಂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. 2008ರಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಮತ್ತು 2009ರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋಲುಂಡಿದ್ದ ಚಿತ್ರನಟ ಅಂಬರೀಶ್ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುತ್ತಾರೆ. ಕೊನೆ ಕ್ಷಣದಲ್ಲಿ ಜೆಡಿಎಸ್ ಪಕ್ಷವು ಎಸ್.ಡಿ ಜಯರಾಂರವರನ್ನು ಸಮಾಧಾನ ಪಡಿಸಿ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸುವಂತೆ ಮಾಡುತ್ತದೆ. ಆದರೂ ರೆಬೆಲ್ ಸ್ಟಾರ್ ಅಂಬರೀಷ್‌ರವರ ಗೆಲುವು ತಡೆಯಲು ಸಾಧ್ಯವಾಗುವುದಿಲ್ಲ. ಅವರು 42,937 ಮತಗಳ ಭಾರೀ ಅಂತರದ ಭರ್ಜರಿ ಜಯ ದಾಖಲಿಸುತ್ತಾರೆ.

ಅಂಬರೀಶ್‌ರವರು 90,329 ಮತ ಪಡೆದರೆ, ಎಂ. ಶ್ರೀನಿವಾಸ್ 47,392 ಮತಗಳಿಗೆ ಕುಸಿಯುತ್ತಾರೆ. ಬಿಜೆಪಿಯ ಟಿ.ಎಲ್. ರವಿಶಂಕರ್ ಕೇವಲ 3,094 ಮತಗಳಿಗೆ ಸೀಮಿತರಾಗುತ್ತಾರೆ. ಚುನಾವಣೆಯಿಂದ ಹಿಂದೆ ಸರಿದರೂ ಮತಪತ್ರದಲ್ಲಿ ಹೆಸರಿದ್ದ ಬಂಡಾಯ ಅಭ್ಯರ್ಥಿ ಅಶೋಕ್ ಜಯರಾಂರವರಿಗೆ 524 ಮತಗಳು ಬಿದ್ದಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅಂಬರೀಶ್ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಎಂ.ಶ್ರೀನಿವಾಸ್‌ರವರಿಗೆ ಟಿಕೆಟ್ ನೀಡುತ್ತದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆರಗೋಡಿನ ಮಾಜಿ ಶಾಸಕ ಚಂದಗಾಲು ಎನ್.ತಮ್ಮಣ್ಣನವರ ಸಹೋದರ ಎನ್.ಶಿವಣ್ಣ ಬಿಜೆಪಿ ಸೇರಿ ಕಣಕ್ಕಿಳಿಯುತ್ತಾರೆ.

ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಹಾಲಿ ಶಾಸಕ ಅಂಬರೀಶ್ ಹಿಂದೇಟು ಹಾಕುತ್ತಾರೆ. ಹಾಗಾಗಿ ಕೊನೆ ಕ್ಷಣದಲ್ಲಿ ಪಿ.ಗಣಿಗ ರವಿಕುಮಾರ್‌ರವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸುತ್ತದೆ. 5 ರೂಪಾಯಿ ವೈದ್ಯರೆನಿಸಿಕೊಂಡಿದ್ದ ಡಾ.ಶಂಕರೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುತ್ತಾರೆ. ನಾಲ್ಕು ಜನರ ನಡುವಿನ ಕಾಳಗದಲ್ಲಿ ಜೆಡಿಎಸ್ ಪಕ್ಷದ ಎಂ.ಶ್ರೀನಿವಾಸ್‌ರವರಿಗೆ ಗೆಲುವು ಲಭಿಸುತ್ತದೆ. ಅವರು 69,421 ಮತಗಳನ್ನು ಪಡೆದರೆ, ಗಣಿಗ ರವಿಕುಮಾರ್ 47,813 ಮತಗಳನ್ನು ಪಡೆಯುತ್ತಾರೆ. ಬಿಜೆಪಿಯ ಶಿವಣ್ಣ 32,064 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡರು. ಪಕ್ಷೇತರ ಅಭ್ಯರ್ಥಿ ಡಾ.ಶಂಕರೇಗೌಡ 10,564 ಮತಗಳಿಗೆ ತೃಪ್ತಿಪಟ್ಟುಕೊಂಡರು.

ಮಂಡ್ಯದ ಶಾಸಕರಾಗಿ ಆಯ್ಕೆಯಾಗಿರುವವರು ಬಹುತೇಕ ಒಕ್ಕಲಿಗ ಸಮುದಾಯದವರೆ ಆಗಿದ್ದಾರೆ. ಮಂಡ್ಯದ ಜನರ ನಿಜವಾದ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯವಾದರೂ ಜಾತಿ, ಹಣ ಮತ್ತು ಚಿತ್ರನಟರ ಮೇಲಿನ ಅಭಿಮಾನ ಅವರನ್ನು ಗೆಲ್ಲಿಸಿದೆ. ಯುವಜನರು ತಮ್ಮ ಸಮಸ್ಯೆಗಳಿಗೆ ಇಲ್ಲಿನ ಶಾಸಕರುಗಳನ್ನು ಹೊಣೆ ಮಾಡಿದ ಉದಾಹರಣೆಗಳಿಲ್ಲ. ಚುನಾವಣೆ ಸಂದರ್ಭದಲ್ಲಿ ಆರಂಭವಾಗುವ ಬಣ ರಾಜಕೀಯ, ಜಾತಿ ರಾಜಕೀಯ, ಚಿತ್ರನಟರ ಪ್ರಚಾರ ಮತ್ತು ಹಂಚುವ ದುಡ್ಡು ಹೆಚ್ಚು ಕೆಲಸ ಮಾಡುತ್ತದೆ.

ಅಂದಾಜು ಜಾತಿವಾರು ಮತಗಳು

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 2,35,000 ಮತದಾರರಿದ್ದಾರೆ. ಅದರಲ್ಲಿ ಒಕ್ಕಲಿಗ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಮಾರು 95,000 ಮತಗಳಿವೆ ಎನ್ನಲಾಗಿದೆ. ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತಗಳಿದ್ದು ಸುಮಾರು 33,000 ಮತಗಳಿವೆ. ಉಳಿದಂತೆ ಮುಸ್ಲಿಂ 23,000, ಲಿಂಗಾಯಿತ 13,000, ಕುರುಬ 13,000, ಎಸ್‌ಟಿ 8,000 ಮತಗಳಿವೆ. ಇತರೆ ಸಮುದಾಯದ ಸುಮಾರು 50,000 ಮತಗಳಿವೆ ಎನ್ನಲಾಗಿದೆ.

ಹಾಲಿ ಪರಿಸ್ಥಿತಿ

ಮೂರನೇ ಬಾರಿ ಶಾಸಕರಾಗಿರುವ ಎಂ ಶ್ರೀನಿವಾಸ್‌ರವರಿಗೆ ಅನಾರೋಗ್ಯ ಕಾಡುತ್ತಿದೆ. ಅವರಿಗೆ ಮಾತು ಆಡಲೂ ಕಷ್ಟದ ಪರಿಸ್ಥಿತಿಯಿದೆ ಎನ್ನಲಾಗುತ್ತಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಅವರು ಐಟಿಐ ಕಾಲೇಜು ಪ್ರಿನ್ಸಿಪಾಲ್ ಕಪಾಳಕ್ಕೆ ಹೊಡೆದಿದ್ದ ವಿಡಿಯೋ ಹರಿದಾಡಿತ್ತು. ಯಾವುದಾದರೂ ಸಮಸ್ಯೆ ಹೇಳಿಕೊಂಡು ಹೋದರೆ ’ನಾನೀಗ ಝೀರೊ’ ಎಂದು ಶಾಸಕರು ಹೇಳುತ್ತಾರೆ ಎಂಬ ಆರೋಪಗಳಿವೆ. ಆರಂಭದಲ್ಲಿ ಶಾಸಕರಾದಾಗ ಜನರಿಗೆ ಸುಲಭವಾಗಿ ಸಿಗುತ್ತಿದ್ದ, ಒಂದಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದ ಅವರು ಸದ್ಯ ಸಂಪೂರ್ಣವಾಗಿ ನಿಷ್ಕ್ರಿಯರಾಗಿದ್ದಾರೆ. ಆಡಳಿತ ವಿರೋಧಿ ಅಲೆ ಅವರನ್ನು ಕಾಡುತ್ತಿದೆ. ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಆದರೆ ಹಾಲಿ ಶಾಸಕರ ಕೋಟಾದಲ್ಲಿ ಯಾವಾಗ ಅವರಿಗೆ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಎಂದು ಘೋಷಿಸಲಾಯಿತೊ ಆಗಿನಿಂದ ಮತ್ತೆ ಸಕ್ರಿಯರಾಗಿಬಿಟ್ಟಿದ್ದಾರೆ. ಇಡೀ ದಿನ ಮಾತನಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು

ಯಾವಾಗ ಹಾಲಿ ಶಾಸಕ ಎಂ ಶ್ರೀನಿವಾಸ್‌ರವರಿಗೆ ಟಿಕೆಟ್ ಘೋಷಿಸಲಾಯಿತೋ ಆಗ ಅವರ ಅಳಿಯ, ಜಿ.ಪಂ ಮಾಜಿ ಸದಸ್ಯ ಯೋಗೇಶ್ ತನಗೇ ಈ ಟಿಕೆಟ್ ಎಂಬಂತೆ ಚುನಾವಣಾ ತಯಾರಿ ನಡೆಸಿದ್ದಾರೆ. ಕೊನೆ ಕ್ಷಣದಲ್ಲಿ ಎಂ ಶ್ರೀನಿವಾಸ್ ತಮ್ಮ ಟಿಕೆಟ್‌ಅನ್ನು ಅಳಿಯನಿಗೆ ವರ್ಗಾಯಿಸುತ್ತಾರೆ ಎಂದು ಜೆಡಿಎಸ್ ಕಾರ್ಯಕರ್ತರು ನಂಬಿದ್ದಾರೆ.

ಕೆ.ವಿ ಶಂಕರೇಗೌಡರ ಮೊಮ್ಮಗ, ಸಚ್ಚಿದಾನಂದರವರ ಪುತ್ರ ಕೆ.ಎಸ್ ವಿಜಯಾನಂದ ಸಹ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ತಮ್ಮ ತಾತ ಮತ್ತು ತಂದೆಯ ಹೆಸರಿನಿಂದ ಗೆಲುವು ಸಾಧಿಸುವ ಬಯಕೆ ಅವರದಾಗಿದೆ.

ಮನ್‌ಮುಲ್ ಅಧ್ಯಕ್ಷರಾಗಿರುವ ಬಿ.ಆರ್ ರಾಮಚಂದ್ರರವರು ಮತ್ತೊಬ್ಬ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜುರವರ ಬೆಂಬಲದೊಂದಿಗೆ ಟಿಕೆಟ್‌ಗಾಗಿ ಪ್ರಯತ್ನ ಮುಂದುವರೆಸಿದ್ದಾರೆ. ಅದೇ ರೀತಿ ಜೆಡಿಎಸ್ ವಕ್ತಾರರಾದ ಮುದ್ದನಘಟ್ಟ ಮಹಾಲಿಂಗೇಗೌಡ ಸಹ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.

ಡಾ.ಎಚ್ ಕೃಷ್ಣ ಮತ್ತು ರಾಧಾಕೃಷ್ಣ ಕೀಲಾರರವರು ಜೆಡಿಎಸ್ ಟಿಕೆಟ್ ಸಿಗುವುದಿಲ್ಲ ಎಂಬುದು ದೃಢವಾಗುತ್ತಲೇ ಪಕ್ಷ ತೊರೆದು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಅಲ್ಲದೆ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಟಿಕೆಟ್‌ಗಾಗಿ 16 ಆಕಾಂಕ್ಷಿಗಳು!

ಕಳೆದ ಚುನಾವಣೆಯಲ್ಲಿ ತಡವಾಗಿ ಟಿಕೆಟ್ ಘೋಷಿಸಿದ ಕಾಂಗ್ರೆಸ್ ಪಕ್ಷ, ಸ್ವಯಂಕೃತ ಅಪರಾಧದಿಂದಾಗಿ ಮಂಡ್ಯ ಕ್ಷೇತ್ರವನ್ನು ಕಳೆದುಕೊಂಡಿತ್ತು. ಈ ಬಾರಿ ಮಂಡ್ಯದ ಕಾಂಗ್ರೆಸ್ ಟಿಕೆಟ್‌ಗಾಗಿ ಬರೋಬ್ಬರಿ 16 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಗಣಿಗ ರವಿಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಅವರು ಕಳೆದ ಬಾರಿ ಸೋತರೂ ಕ್ಷೇತ್ರಕ್ಕೆ ಬೆನ್ನು ಹಾಕದೆ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರಿಗೆ ನೆರವಾಗಿದ್ದು, ಶತಾಯ ಗತಾಯ ಗೆಲ್ಲಲು ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಕೆ.ಕೆ ರಾಧಾಕೃಷ್ಣ ಕೀಲಾರರವರು ಕಾಂಗ್ರೆಸ್ ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ. ಅದೇ ರೀತಿ ಕಾವೇರಿ ನರ್ಸಿಂಗ್ ಹೋಮ್‌ನ ಡಾ.ಎಚ್ ಕೃಷ್ಣರವರು ಸಹ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ಆಸ್ಪತ್ರೆ ಪಕ್ಕದಲ್ಲಿಯೇ ಕಾಂಗ್ರೆಸ್ ಕಚೇರಿ ತೆರೆದು ಕೆಲಸ ಆರಂಭಿಸಿದ್ದಾರೆ.

ಇನ್ನುಳಿದಂತೆ ಮಾಜಿ ಶಾಸಕರಾದ ಎಂ.ಎಸ್ ಆತ್ಮಾನಂದ, ಎಚ್.ಬಿ ರಾಮುರವರು ಸಹ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಮನ್‌ಮುಲ್ ನಿರ್ದೇಶಕರಾದ ಯು.ಸಿ ಶಿವಕುಮಾರ್ ಸೇರಿದಂತೆ ಎಂ.ಎಸ್ ಚಿದಂಬರ್, ಅಮರಾವತಿ ಚಂದ್ರಶೇಖರ್, ಹಾಲಹಳ್ಳಿ ರಾಮಲಿಂಗಯ್ಯ, ಸಿದ್ಧಾರೂಢ ಸತೀಶ್ ಗೌಡ, ಎಚ್.ಸಿ ಶಿವರಾಮು, ಬಿ.ಸಿ ಶಿವಾನಂದ, ಅಸಾದುಲ್ಲಾ ಖಾನ್, ಹಾಲಹಳ್ಳಿ ಅಶೋಕ್, ಎಚ್.ಸಿ ಶಿವಲಿಂಗೇಗೌಡ ಮತ್ತು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಇತರರು.

ಕಾರ್ಯಕರ್ತರನ್ನು ಮರೆತ ಬಿಜೆಪಿ

ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುತ್ತೇವೆ ಎಂದು ಬಿಜೆಪಿ ಘೋಷಿಸಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್ ವಂಚಿತರಾದ ಚಂದಗಾಲು ಶಿವಣ್ಣನವರಿಗೆ ಟಿಕೆಟ್ ನೀಡಿತು. ಈ ಬಾರಿಯೂ ಜೆಡಿಎಸ್‌ನಿಂದ ವಲಸೆ ಬಂದಿರುವ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂರವರಿಗೆ ಬಿಜೆಪಿ ಟಿಕೆಟ್ ನೀಡುತ್ತದೆ ಎನ್ನಲಾಗಿದೆ. ಮದ್ದೂರಿನಲ್ಲಿಯೂ ಜೆಡಿಎಸ್ ತೊರೆದು ಬಂದ ವ್ಯಕ್ತಿಗೆ ಮತ್ತು ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ತೊರೆದು ಬಂದ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಲು ಸಿದ್ಧತೆ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನುಳಿದಂತೆ ಕಳೆದ ಬಾರಿ ಸೋತ ಚಂದಗಾಲು ಶಿವಣ್ಣ, ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ ಉಮೇಶ್, ಬೇಕರಿ ಅರವಿಂದ್ ಸಹ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.

ರೈತಸಂಘದಿಂದ ಮಧುಚಂದನ್ ಎಸ್.ಸಿ ಕಣಕ್ಕೆ

ವಿದೇಶದಲ್ಲಿನ ಉದ್ಯೋಗ ತೊರೆದು ಆರ್ಗ್ಯಾನಿಕ್ ಮಂಡ್ಯ ಸಂಸ್ಥೆಯ ಮೂಲಕ ಗುರುತಿಸಿಕೊಂಡಿದ್ದ ಮಧುಚಂದನ್ ರೈತಸಂಘ ಕಟ್ಟುವಲ್ಲಿ ಸಕ್ರಿಯರಾಗಿದ್ದಾರೆ. ಕೀರೆಮಡಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿರುವ ಅವರು ಜನರು ಸರ್ಕಾರಿ ಕಚೇರಿಗಳ ಕೆಲಸಗಳನ್ನು ಸುಲಲಿತವಾಗಿ ಮಾಡಿಸಿಕೊಳ್ಳಲು ಅನುವಾಗುವಂತೆ ಸಹಾಯ ಮಾಡಿ ಕಾರ್ಯೋನ್ಮುಖರಾಗಿದ್ದಾರೆ. ಪೇಸಿಎಂ ಗದ್ದಲದಲ್ಲಿ ಅವರು ಪೇ ಫಾರ್ಮರ್ ಪೋಸ್ಟರ್ ಬಿಡುಗಡೆ ಮಾಡಿ ಮಧುಚಂದನ್ ಗಮನ ಸೆಳೆದಿದ್ದರು. ಮೈಷುಗರ್ ಪುನಶ್ಚೇತನಕ್ಕಾಗಿ, ಕಬ್ಬು ಮತ್ತು ಭತ್ತದ ಬೆಳೆಗೆ ವೈಜ್ಞಾನಿಕ ಬೆಲೆಗಾಗಿ ಅವರು ಹಲವಾರು ಹೋರಾಟಗಳನ್ನು ಮುನ್ನಡೆಸಿದ್ದಾರೆ. ಕಳೆದ 75 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುವ ಮೂಲಕ ರೈತರ ವಿಷಯವನ್ನು ಚುನಾವಣೆಯ ವಿಷಯವನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಅವರು ಸರ್ವೋದಯ ಕರ್ನಾಟಕ ಪಕ್ಷವನ್ನು ಕ್ಷೇತ್ರದಾದ್ಯಂತ ವಿಸ್ತರಿಸುತ್ತ ಪರ್ಯಾಯ ಚುನಾವಣಾ ತಯಾರಿ ನಡೆಸಿದ್ದಾರೆ.

ಸಾಧ್ಯತೆಗಳೇನು?

ಜೆಡಿಎಸ್ ಪಕ್ಷವು ಒಕ್ಕಲಿಗ ಮತಗಳು ತಮ್ಮ ಕೈಹಿಡಿಯುತ್ತವೆ ಎಂದು ನಂಬಿಕೊಂಡಿದೆ. ಆದರೆ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ ಅಧಿಕೃತವಾದರೆ ಟಿಕೆಟ್ ವಂಚಿತರು ಯಾವ ರೀತಿ ಒಳೇಟು ನೀಡುತ್ತಾರೆ ಎಂಬುದನ್ನು ಊಹಿಸಲು ಕಷ್ಟ. ಕಳೆದ ಲೋಕಸಭಾ ಚುನಾವಣೆಗೆ ದೇವೇಗೌಡರ ಕುಟುಂಬದ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿ ಸೋತಿದ್ದು, ಅವರು ನಂತರ ರಾಮನಗರದ ಕಡೆ ಮುಖ ಮಾಡಿದ್ದು ಕಾರ್ಯಕರ್ತರ ಬಲ ಕುಗ್ಗುವಂತೆ ಮಾಡಿದೆ.

ಇನ್ನು ಕಾಂಗ್ರೆಸ್ ಪಕ್ಷವು, ಹಾಲಿ ಶಾಸಕರ ಮೇಲಿನ ಆಡಳಿತ ವಿರೋಧಿ ಅಲೆ ಮತ್ತು ಇತ್ತೀಚಿನ ವಿಧಾನ ಪರಿಷತ್ ಚುನಾವಣೆಗಳ ಜಯದ ಅಲೆ ಪಕ್ಷವನ್ನು ಗೆಲುವಿನ ದಡ ಸೇರಿಸುತ್ತದೆ ಎಂಬ ವಿಶ್ವಾಸದಲ್ಲಿದೆ. ಆದರೆ ಕಾಂಗ್ರೆಸ್‌ನಲ್ಲಿ ಗಟ್ಟಿ ಕಾರ್ಯಕರ್ತರಿಗಿಂತ ನಾಯಕರೇ ತುಂಬಿರುವುದು ಮತ್ತು ಟಿಕೆಟ್‌ಗಾಗಿ ಒಳಜಗಳವಿರುವುದು ಅವರ ವೀಕ್ ಪಾಯಿಂಟ್ ಆಗಿದೆ. ಮಂಡ್ಯದಲ್ಲಿ ಜನ ಅಭ್ಯರ್ಥಿ ನೋಡಿ ಮತ ಹಾಕಿದ್ದಾರೆಯೇ ಹೊರತು ಬಿಜೆಪಿಗಾಗಿ ಮತ ಹಾಕಿದ ಇತಿಹಾಸವಿಲ್ಲ. ಇನ್ನು ಮಧುಚಂದನ್‌ರವರ ಬೆನ್ನಿಗೆ ರೈತಸಂಘವಿದೆ, ಅವರು ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಒಟ್ಟಿನಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡುವ ಸಂಭವವಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರಾನೇರ ಕದನ ನಡೆಯುವ ಸೂಚನೆ ಕಂಡುಬರುತ್ತಿದೆ.

ಜಿಲ್ಲೆಯ ಸಮಸ್ಯೆಗಳು

ರಾಜ್ಯದಲ್ಲಿ ಉಳಿದಿರುವ ಏಕೈಕ ಸರ್ಕಾರಿ ಸ್ವಾಮ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿ ಸೇರಿ ಹಳ್ಳಹಿಡಿಸಿದ್ದಾರೆ. ಅದರ ಪುನಶ್ಚೇತನಕ್ಕಾಗಿ ಸಮಗ್ರ ಪ್ಯಾಕೇಜ್ ಬೇಕೆಂದು ರೈತರು, ಪ್ರಜ್ಞಾವಂತರು ಸಾಕಷ್ಟು ಹೋರಾಟ ನಡೆಸಿದರೂ ’ಸರ್ಕಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಬಿಡಿಗಾಸು ಮಾತ್ರ ನೀಡುತ್ತಿದೆ. ಕಾಲಕ್ರಮೇಣ ಖಾಸಗಿಯವರಿಗೆ ಮಾರಿ ಕೈತೊಳೆದುಕೊಳ್ಳಲು ಸರ್ಕಾರ ಯತ್ನಿಸುತ್ತಿದೆ. ಉಳಿಸಿಕೊಳ್ಳಲು ಜನರು ಹೋರಾಡುತ್ತಿದ್ದಾರೆ.

ಮಂಡ್ಯ ಜಿಲ್ಲಾಸ್ಪತ್ರೆ ಭ್ರಷ್ಟಾಚಾರ ಮತ್ತು ಅವ್ಯವಸ್ಥೆಗಳ ಕೂಪವಾಗಿದೆ. ಯಂತ್ರೋಪಕರಣಗಳು ಮತ್ತು ಸಿಬ್ಬಂದಿ ಅಗತ್ಯ ಮಟ್ಟದಲ್ಲಿಲ್ಲ. ಇರುವ ವೈದ್ಯರು ಜಿಲ್ಲಾಸ್ಪತ್ರೆಗಿಂತ ಹೆಚ್ಚಾಗಿ ತಮ್ಮತಮ್ಮ ಕ್ಲಿನಿಕ್‌ಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅದನ್ನು ಸರಿಪಡಿಸಲು ಯಾರು ಮುಂದೆ ಬಂದಿಲ್ಲ. ಇನ್ನು ಮಂಡ್ಯದ ಜೀವಜಲದಂತಿರುವ ಕೆಎಂಎಫ್ ನಂದಿನಿ ಹಾಲಿನ ಡೇರಿಯನ್ನು ಅಮುಲ್‌ನೊಂದಿಗೆ ವಿಲೀನ ಮಾಡುವುದಾಗಿ ಅಮಿತ್ ಶಾ ಸುಳಿವು ನೀಡಿದ್ದಾರೆ. ಕ್ಷೇತ್ರದ ಜನತೆ ಅದರ ವಿರುದ್ಧ ರೊಚ್ಚಿಗೆದ್ದಿದ್ದು ಇದು ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿದೆ.

ಮಂಡ್ಯವನ್ನು ಆಳಿದ ಜನಪ್ರತಿನಿಧಿಗಳು ಜಿಲ್ಲೆಗೆ ಕೈಗಾರಿಕೆಗಳು, ಕೃಷಿ ಪೂರಕ ಉದ್ದಿಮೆಗಳನ್ನು ತರುವ ಕೆಲಸ ಮಾಡಿಲ್ಲದ ಕಾರಣ ನಿರುದ್ಯೋಗ ಸಮಸ್ಯೆಯಾಗಿ ಪರಿಣಮಿಸಿದೆ. ಹಿಡುವಳಿಗಳು ಅತಿ ಸಣ್ಣದಾಗುತ್ತಿರುವುದು ಮತ್ತು ಕೃಷಿಯಲ್ಲಿ ನಿರೀಕ್ಷಿತ ಆದಾಯವಿಲ್ಲದ ಕಾರಣ ಸಂಗಾತಿಗಳು ಸಿಗದೆ ರೈತ ಯುವಕರ ಮದುವೆಗೂ ಕುತ್ತುಬರುತ್ತಿದೆ ಎಂದು ಜನಸಾಮಾನ್ಯರು ಮಾತಾಡಿಕೊಳ್ಳುತ್ತಾರೆ. ಹಕ್ಕುಪತ್ರಗಳಿಲ್ಲದ, ಭೂಮಿ-ವಸತಿಯಿಲ್ಲದ ಜನ ಹೋರಾಡುತ್ತಿದ್ದರೂ ಅಧಿಕಾರಿಗಳು ಕುರುಡಾಗಿದ್ದಾರೆ.

ರಸ್ತೆ ಅಗಲೀಕರಣದ ಯೋಜನೆ ಅನುಷ್ಠಾನವಾಗಿಲ್ಲ. ಬೆಂಗಳೂರು ಮೈಸೂರು ಹೆದ್ದಾರಿಯ ಕಾರಣದಿಂದ ಈಗ ರಸ್ತೆ ಬದಿ ಇದ್ದ ಹೋಟೆಲ್ ಮತ್ತು ಸಣ್ಣ ವ್ಯಾಪಾರ ಉದ್ಯಮ ನೆಲಕಚ್ಚಲಿದೆ. ಅವರಿಗೆ ಪುನರ್ವಸತಿ, ಪರಿಹಾರದ ಬಗ್ಗೆ ಯಾರೂ ಮಾತನಾಡಿಲ್ಲ.

ಮಂಡ್ಯ ನಗರವನ್ನು ಒಂದು ಯೋಜಿತ ನಗರವನ್ನಾಗಿ ಕಟ್ಟಿಯೇ ಇಲ್ಲ. ರಸ್ತೆಗಳ, ಏರಿಯಗಳ ಹೆಸರು ಕೂಡಾ ಸಮರ್ಪಕವಾಗಿಲ್ಲ. ಸುಸಜ್ಜಿತ ಬಡಾವಣೆಗಳಿಲ್ಲ, ಪಾಸ್‌ಪೋರ್ಟ್ ಕೇಂದ್ರವಿಲ್ಲ, ನಗರಕ್ಕೆ ಒಂದು ಕೂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿಲ್ಲ. ವಿಶಾಲ ಬಸ್ ನಿಲ್ದಾಣವಿಲ್ಲ. ಮಂಡ್ಯ ಜಿಲ್ಲೆ 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸಿಕೊಂಡಿದೆ. ಅದರೆ ಅಭಿವೃದ್ದಿ ಏನಾಗಿದೆ ಎಂಬುದು ಕಾಣವುದಿಲ್ಲ. ಆದರೆ ಇವೆಲ್ಲವುಗಳನ್ನು ಚುನಾವಣಾ ವಿಷಯಗಳಾನ್ನಾಗಿ ಮಾಡಲು ಯುವಜನತೆಗೆ ಸಾಧ್ಯವಾಗಿಲ್ಲ. ಹಾಗಾಗಿ ಇಂದಿಗೂ ಚುನಾವಣೆಯಲ್ಲಿ ಕೇವಲ ಜಾತಿ, ಹಣವೇ ಡಿಸೈಂಡಿಂಗ್ ಫ್ಯಾಕ್ಟರ್ ಆಗಿರುವುದು ಜಿಲ್ಲೆಯ ಜನರ ದುರಂತವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!