ಮಂಡ್ಯ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳು ಹಾಗೂ ಲಂಚದ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿ ಕರುನಾಡ ಸೇವಕರು ಸಂಘಟನೆಯ ಮುಖಂಡರು ತಹಶೀಲ್ದಾರ್ ವಿಜಯ್‌ಕುಮಾರ್, ಮತ್ತಿತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಸೋಮವಾರ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಮಂಡ್ಯ ನಗರಾಧ್ಯಕ್ಷ ಎಂ.ಎನ್.ಚಂದ್ರು ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನೇ ನಾಪತ್ತೆಯಾಗಿಸಿರುವ ಕುರಿತು ಭೂದಾಖಲೆಗಳ ಕೊಠಡಿಯ ನೌಕರರನ್ನು ತರಾಟೆಗೆ ತೆಗೆದುಕೊಂಡರು.
ಹಣ ಕೊಟ್ಟವರಿಗೆ ದಾಖಲೆಗಳನ್ನು ಹುಡುಕುತ್ತಾರೆ. ಹಣ ನೀಡದ ಸಾಮಾನ್ಯ ರೈತರನ್ನು ಅಲೆಸಲಾಗುತ್ತಿದೆ. ಸರ್ವೇ ಹಾಗೂ ಭೂದಾಖಲೆಗಳ ವಿಭಾಗದಲ್ಲಿ ಲಂಚ ಮಿತಿ ಮೀರಿದೆ. ಕೊಟ್ಟಿರುವ ಅರ್ಜಿಗಳು ನಾಪತ್ತೆಯಾದುದು ಹೇಗೆ? ಎಂದು ಅವರು ಪ್ರಶ್ನಿಸಿದರು.
ನಂತರ ತಹಶೀಲ್ದಾರ್ ವಿಜಯ್ ಅವರ ಬಳಿಗೆ ತೆರಳಿದ ಮುಖಂಡರು, ಈ ತಾಲೂಕು ಕಚೇರಿಯಲ್ಲಿ ರೈತರು, ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ. ಬದಲಿಗೆ ಹಣ ಕೊಟ್ಟವರ ಹಾಗೂ ರಿಯಲ್ ಎಸ್ಟೇಟ್ ಏಜೆಂಟರ ಕೆಲಸಗಳು ಸುಲಭವಾಗಿ ಜರುಗುತ್ತಿವೆ. ಸಣ್ಣಪುಟ್ಟ ಕೆಲಸಕ್ಕೂ ರೈತರನ್ನು ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಮಿತಿ ಮೀರಿದೆ. ಇಲ್ಲಿ ದಲ್ಲಾಳಿಗಳು ಯಾರು? ಅಧಿಕಾರಿಗಳು ಯಾರು? ಎಂಬುದೇ ತಿಳಿಯುತ್ತಿಲ್ಲ. ಯಾವುದೇ ನೌಕರರು ಗುರುತಿನ ಚೀಟಿ ಧರಿಸಿಲ್ಲ. ಟೇಬಲ್ ಬಳಿ ಅವರ ಹುದ್ದೆಗಳ ನಾಮಫಲಕ ಅಳವಡಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸಂಘಟನೆಯ ಮುಖಂಡರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ವಿಜಯ್‌ಕುಮಾರ್, ತಾಲೂಕು ಕಚೇರಿಯ ಎಲ್ಲ ನೌಕರರಿಗೆ ಗುರುತಿನ ಚೀಟಿ ಧರಿಸಲು ಸೂಚಿಸಲಾಗುವುದು ಹಾಗೂ ಅಯಾ ಟೇಬಲ್‌ಗಳ ಮುಂದೆ ಹುದ್ದೆಗಳನ್ನು ನಮೂದಿಸಲಾಗುವುದು. ದಲ್ಲಾಳಿಗಳ ನಿಯಂತ್ರಿಸಲಾಗುವುದು. ನೌಕರರು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಕಾಲಕ್ಕೆ ಮುಗಿಸದಿದ್ದಲ್ಲಿ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಸಂಘಟನೆಯ ಮುಖಂಡರಾದ ಮನು, ಚನ್ನಕೇಶವ, ಶಿವಕುಮಾರ್, ಇತರರು ಉಪಸ್ಥಿತರಿದ್ದರು.




