Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ತಮಿಳು ಕಾಲೋನಿ ವಶಕ್ಕೆ ಪಡೆಯಲು ವಿವಿಧ ಸಂಘಟನೆಗಳ ಮನವಿ

ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ತಮಿಳು ಕಾಲೋನಿ ಸ್ಥಳವನ್ನು ವಶಕ್ಕೆ ಪಡೆಯುವಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿ ದಶಕವೇ ಉರುಳುತ್ತಿದ್ದು, ಕೂಡಲೇ ಮಂಡ್ಯ ಜಿಲ್ಲಾಡಳಿತ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.

ಕರುನಾಡ ಸೇವಕರು ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಮಂಡ್ಯ ನಗರಾಧ್ಯಕ್ಷ ಎಂ.ಎನ್ ಚಂದ್ರು ಸೇರಿದಂತೆ ಭಜರಂಗಸೇನೆಯ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಅವರು ಸೋಮವಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್ ಎಲ್ ನಾಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಾ.ಹೆಚ್.ಎಲ್.ನಾಗರಾಜು ಮಾತನಾಡಿ, ಶೀಘ್ರವಾಗಿ ಜಿಲ್ಲಾಡಳಿತ ಸಭೆ ಆಯೋಜಿಸಿ ತಮಿಳು ಕಾಲೋನಿ ಸಮಸ್ಯೆ ಇತ್ಯರ್ಥಗೊಳಿಸಲಾಗುವುದು. ಹೈಕೋರ್ಟ್ ಆದೇಶ ಪಾಲನೆಗೆ ಜಿಲ್ಲಾಡಳಿತ ಬದ್ದವಾಗಿದೆ. ಮಂಡ್ಯ ಜಿಲ್ಲೆಯ ಜನರ ಆರೋಗ್ಯ ಸೇವೆಯ ವಿಸ್ತರಣೆ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಲಿದ್ದೇವೆ ಎಂದರು.

ಮಂಡ್ಯ ಮೆಡಿಕಲ್ ಕಾಲೇಜು ದಿನೇ ದಿನೇ ಸ್ಥಳಾವಕಾಶದ ಕೊರತೆಯಿಂದ ಯಾವುದೇ ಹೊಸ ಆರೋಗ್ಯ ವ್ಯವಸ್ಥೆಯ ವಿಸ್ತರಣೆ ಸಾಧ್ಯವಿಲ್ಲದಂತಾಗಿ ಕಾಂಕ್ರೀಟ್ ಕಾಡಾಗುತ್ತಿದೆ. ತಾಯಿ ಮಕ್ಕಳ ಆಸ್ಪತ್ರೆಗೆ ಸ್ಥಳಾವಕಾಶವಾಗದೆ, ಅದು ಮಂಡ್ಯ ನಗರದಿಂದ ಎಂಟು ಕೀಮಿ ಅಂತರದ ಬಿ.ಹೊಸೂರು ಗ್ರಾಮಕ್ಕೆ ವರ್ಗವಾಗಿದೆ. ಪಾರ್ಕಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೂಕ್ತ ಆಟದ ಮೈದಾನ. ಗಾಳಿ,ಬೆಳಕು ಇಲ್ಲದೆ ಮಂಡ್ಯ ಮಿಮ್ಸ್ ಕಿಷ್ಕಿಂಧೆಯಾಗುತ್ತಿದೆ ಎಂದು ವಿವಿಧ ಸಂಘಟನೆಗಳು ದೂರಿವೆ.

ತಮಿಳು ಕಾಲೋನಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ ಆ ಪ್ರದೇಶವನ್ನು ಹೈಕೋರ್ಟ್ ನಿರ್ದೇಶನದಂತೆ ವಶಕ್ಕೆ ಪಡೆಯುವಲ್ಲಿ ಜಿಲ್ಲಾಡಳಿತಕ್ಕೆ ಅಗತ್ಯ ಇಚ್ಚಾಶಕ್ತಿ ಇಲ್ಲವಾಗಿರುವುದು ಜಿಲ್ಲೆಯ ದುರಂತವಾಗಿದೆ. ಟ್ರಾಮಾಕೇರ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ಆರೋಗ್ಯ ವ್ಯವಸ್ಥೆಯ ವಿಸ್ತರಣೆಗಾಗಿ ತಮಿಳು ಕಾಲೋನಿ ಸ್ಥಳವನ್ನು ವಶಕ್ಕೆ ಪಡೆಯುವುದು ಜರೂರಾಗಿದೆ. ಈ ಪ್ರದೇಶವನ್ನು ವಶಕ್ಕೆ ಪಡೆಯುವ ಜಿಲ್ಲಾಡಳಿತದ ಪ್ರಯತ್ನ ಕಳೆದ ನಾಲ್ಕು ದಶಕಗಳಿಂದ ವಿಫಲವಾಗಿದೆ. ಇದಕ್ಕೆ ಜಿಲ್ಲೆಯ ರಾಜಕೀಯ ನಾಯಕರ ಅಸಹಕಾರವೂ ಒಂದು ಕಾರಣವಾಗಿದೆ ಎಂದು ಮನವಿ ಪತ್ರದಲ್ಲಿ ದೂರಲಾಗಿದೆ.

ಜಿಲ್ಲೆಯ 23 ಲಕ್ಷ ಜನರ ಆರೋಗ್ಯ ಸೇವೆಗಾಗಿ ತಮಿಳು ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ವಶಕ್ಕೆ ಪಡೆಯಲು ಜಿಲ್ಲಾಡಳಿತ ಸಮರ್ಥ ಕ್ರಮ ಅನುಸರಿಬೇಕು. ಅಲ್ಲಿನ ತಮಿಳುವಾಸಿಗಳಿಗೆ ಈಗಾಗಲೇ ಮಂಡ್ಯ ಕೆರೆ ಅಂಗಳದಲ್ಲಿ ನಿರ್ಮಿಸಿರುವ ಮನೆಗಳಿಗೆ ಸ್ಥಳಾಂತರಿಸಲು ಕಾಲಮಿತಿಯೊಳಗೆ ಕ್ರಮ ವಹಿಸಬೇಕು. ಈ ವಿಷಯದಲ್ಲಿ ಜಿಲ್ಲೆಯ ಜನ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಸಹಕಾರ ನೀಡಲಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!