Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ವಿವಿಗೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ದಿನೇಶ್‌ ಗೂಳಿಗೌಡ ಒತ್ತಾಯ

ಮಂಡ್ಯ ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು,ಅಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಡ್ಯ ವಿಶ್ವವಿದ್ಯಾಲಯದ ಸಮಿತಿ ಸದಸ್ಯರಾದ ಬಳಿಕ ಮೊದಲ ಬಾರಿ ಶಾಸಕ ದಿನೇಶ ಗೂಳಿಗೌಡ ಅವರು ಇಂದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ವಿವಿಯ ಕುಂದುಕೊರತೆ, ಸಮಸ್ಯೆಗಳ ಬಗ್ಗೆ ಉಪ ಕುಲಪತಿ ಪ್ರೊ.ಪುಟ್ಟರಾಜು ಹಾಗೂ ರಿಜಿಸ್ಟ್ರಾರ್‌ ಡಾ.ನಾಗರಾಜ್ ಜೊತೆ ಚರ್ಚೆ ನಡೆಸಿದರು.

ಇದೇ ವೇಳೆ, ವಿಶ್ವವಿದ್ಯಾಲಯದ ಕಾರ್ಯವೈಖರಿ ಬಗ್ಗೆ ಸಲಹೆ ನೀಡಿರುವ ಶಾಸಕರು, ವಿವಿಗಳು ಉದ್ಯೋಗಾಧಾರಿತ, ಕೌಶಲ್ಯ ಭರಿತ ಶಿಕ್ಷಣ ನೀಡುವಂತಾಗಬೇಕೇ ವಿನಃ ಪದವಿ ನೀಡುವ ಕಾರ್ಖಾನೆಯಾಗಬಾರದು ಎಂಬ ಕಿವಿಮಾತು ಹೇಳಿದರು.ಶೈಕ್ಷಣಿಕವಾಗಿ ಜಿಲ್ಲೆಯನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಶಾಸಕರು ಸಾಕಷ್ಟು ಸಲಹೆ – ಸೂಚನೆಗಳನ್ನು ನೀಡಿದರು.

ಮೂಲ ಸೌಕರ್ಯ ಇಲ್ಲ

2019ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬೇರ್ಪಡಿಸಿ ಮಂಡ್ಯ ಪ್ರತ್ಯೇಕ ವಿವಿಯನ್ನು ಸ್ಥಾಪನೆ ಮಾಡಲಾಗಿದೆ. ಕಟ್ಟಡ ನಿರ್ಮಾಣವಾಗಿದ್ದು ಬಿಟ್ಟರೆ ಬೇರೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ಹಾಸ್ಟೆಲ್‌ ಸೌಲಭ್ಯವೂ ಇಲ್ಲಿ ಸಮರ್ಪಕವಾಗಿ ನೀಡಲಾಗಿಲ್ಲ. ಹಿಂದಿನ ಪದವಿ ಕಾಲೇಜಿನ ಹಾಸ್ಟೆಲ್‌ ಅನ್ನೇ ಮುಂದುವರಿಸಲಾಗಿದೆ. ಸಮರ್ಪಕ ಗ್ರಂಥಾಲಯ, ಪೀಠೋಪಕರಣ, ಕ್ರೀಡಾ ಸಾಮಗ್ರಿಗಳನ್ನೂ ನೀಡಲಾಗಿಲ್ಲ. ಮೈಸೂರು ಮುಕ್ತ ವಿವಿಯಿಂದ ಹಳೆಯ ಪೀಠೋಪಕರಣಗಳನ್ನು ತಂದು ತರಗತಿ ನಡೆಸಲಾಗುತ್ತಿದೆ. ಸಿಬ್ಬಂದಿ, ಅಧಿಕಾರಿಗಳ ಕೊರತೆಯೂ ಇದೆ. ರಿಜಿಸ್ಟ್ರಾರ್‌ ಒಬ್ಬರೇ ಫೈನಾನ್ಸ್‌ ಆಫೀಸರ್‌, ಗ್ರಂಥಪಾಲಕರ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ ಎಂಬ ಅಂಶವನ್ನು ಶಾಸಕರ ಗಮನಕ್ಕೆ ತಂದರು.

ವಿಶೇಷ ಅನುದಾನ ನೀಡಿಲ್ಲ

ವಿಶ್ವವಿದ್ಯಾಲಯಕ್ಕೆ ಸರ್ಕಾರ ಇದುವರೆಗೂ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಒಟ್ಟಿನಲ್ಲಿ ಮಂಡ್ಯದಲ್ಲಿ ಹೆಸರಿಗೆ ಮಾತ್ರ ಯುನಿವರ್ಸಿಟಿ ಕಾರ್ಯನಿರ್ವಹಿಸುತ್ತಿದೆ. ಒಂದು ಪರಿಪೂರ್ಣ ವಿವಿಗೆ ಬೇಕಾದ ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ಮೂಲ ಸೌಕರ್ಯ ಯಾವುವೂ ಇಲ್ಲದೆ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಿಷಯದ ಮೇಲೆ ಶಾಸಕರ ಗಮನಕ್ಕೆ ತರಲಾಯಿತು.

ಕಾಲೇಜುಗಳು ಹಸ್ತಾಂತರವಾಗಿಲ್ಲ

ಮಂಡ್ಯ ಜಿಲ್ಲೆಯಲ್ಲಿ 47 ಪದವಿ ಕಾಲೇಜುಗಳಿವೆ. ಆದರೆ, ಅವುಗಳನ್ನು ಮೈಸೂರು ವಿವಿಯಿಂದ ಮಂಡ್ಯ ವಿವಿಗೆ ಹಸ್ತಾಂತರಿಸಿರುವ ಬಗ್ಗೆ ಅಧಿಕೃತ ಆದೇಶವೇ ಆಗಿಲ್ಲ. ಕೇವಲ ಮಂಡ್ಯದ ಕೆಲ ಕಾಲೇಜುಗಳ 4 ಸಾವಿರ ವಿದ್ಯಾರ್ಥಿಗಳು ಮಾತ್ರ ಸದ್ಯ ವಿವಿ ವ್ಯಾಪ್ತಿಗೆ ಸೇರಿದ್ದಾರೆ. ಈ ಹಿಂದೆ ಮಂಡ್ಯದ ತೂಬಿನಕೆರೆ ಎಂಬಲ್ಲಿ ಮೈಸೂರು ವಿವಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರವಿತ್ತು. ಅದನ್ನು ಮಂಡ್ಯ ವಿವಿಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ಆಗಿಲ್ಲ. ಇಂತಹ ತಾಂತ್ರಿಕ ಪ್ರಕ್ರಿಯೆಗಳನ್ನೂ ಶೀಘ್ರ ಮುಗಿಸಬೇಕು.

ಬೋಧಕ ಸಿಬ್ಬಂದಿಯಲ್ಲಿ ಗೊಂದಲ

ವಿಶ್ವವಿದ್ಯಾಲಯದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕ ಮುಂತಾದ ಬೋಧಕ ಸಿಬ್ಬಂದಿಯೂ ಗೊಂದಲದಲ್ಲಿದ್ದಾರೆ.ಬೋಧಕರು ಸದ್ಯ ಕಾಲೇಜು ಶಿಕ್ಷಣ ಇಲಾಖೆಯಡಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಡ್ಯ ವಿವಿಗೆ ಅವರ ಹುದ್ದೆಗಳನ್ನು ಸೇರಿಸಲು ಹಲವು ಕಾನೂನು ತೊಡಕುಗಳಿವೆ. ಅವುಗಳನ್ನು ಬಗೆಹರಿಸಿಕೊಟ್ಟರೆ ಮಾತ್ರ ನಾವು ವಿವಿಯಲ್ಲಿ ಮುಂದುವರಿಯುತ್ತೇವೆ. ಇಲ್ಲದಿದ್ದಲ್ಲಿ ನಮ್ಮನ್ನು ಬೇರೆಡೆ ವರ್ಗಾವಣೆ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ.
ಇಂತಹ ಹಲವು ವಿಷಯಗಳನ್ನು ಶೀಘ್ರ ಬಗೆಹರಿಸಿ ಬೋಧಕರನ್ನು ಉಳಿಸಿಕೊಳ್ಳುವ ಕಾರ್ಯವಾಗಬೇಕು. ಇಲ್ಲದಿದ್ದಲ್ಲಿ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ ಎಂಬ ವಿಷಯವನ್ನೂ ಸಹ ಶಾಸಕ ದಿನೇಶ್‌ ಗೂಳಿಗೌಡ ಅವರ ಗಮನಕ್ಕೆ ತರಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!