Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ : ವಿಧಾನಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಸ್ಪರ್ಧೆ ?

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸಂಸದೆ ಸುಮಲತಾ ಸುಳಿವು ನೀಡಿದ್ದಾರೆ. ‘ಈಗಲೇ ಸ್ಪರ್ಧಿಸುವ ಕುರಿತು ಬಹಿರಂಗಗೊಳಿಸಲು ಆಗಲ್ಲ. ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಅನೇಕ ಸವಾಲುಗಳಿವೆ. ಬೆಂಬಲಿಗರನ್ನು ಭೇಟಿಯಾದ ನಂತರ ನಿರ್ಧಾರವನ್ನು ಸಾರ್ವಜನಿಕವಾಗಿ ತಿಳಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದೆ ಸುಮಲತಾ, “ನನ್ನ ಮತದಾರರು ಮತ್ತು ಬೆಂಬಲಿಗರು ನನ್ನನ್ನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಜನರಿಗೆ ಸಹಾಯ ಮಾಡುವ ಒಬ್ಬ ವ್ಯಕ್ತಿಯು ವಿಧಾನಸಭೆಯ ಸದಸ್ಯನಾಗಿದ್ದಾಗ ಜನರಿಗೆ ಇನ್ನೂ ಹೆಚ್ಚಿನ ಲಾಭವಾಗುತ್ತದೆ” ಎಂದರು.

ಯಾವ ಪಕ್ಷದಿಂದ ಚುನಾವಣೆ ಎದುರಿಸುತ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅಕ್ರಮ ಗಣಿಗಾರಿಕೆ ವಿರುದ್ಧ ಹಾಗೂ ಇತರೆ ಜನಪರ ವಿಷಯಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದೇನೆ. ಆ ಹೋರಾಟವನ್ನು ಮುಂದುವರಿಸಲು ನನಗೆ ಸಹಾಯ ಮಾಡುವ ಪಕ್ಷಕ್ಕೆ ನಾನು ಸೇರುತ್ತೇನೆ. ಯಾಕೆಂದರೆ ಈ ಹೋರಾಟ ನನಗಾಗಿ ಅಲ್ಲ. ಜನರಿಗಾಗಿ” ಎಂದು ಹೇಳಿದರು.

‘ಸಂಸದೆ ಸುಮಲತಾ ಬಿಜೆಪಿ ಅಸೋಸಿಯೇಟ್‌ ಮೆಂಬರ್’‌ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ನಾನು ಯಾವ ಪಕ್ಷದ ಸದಸ್ಯಯೆಯೂ ಅಲ್ಲ. ನಾನೊಬ್ಬಳು ಸ್ವತಂತ್ರ ಅಭ್ಯರ್ಥಿ. ಕೆಲವು ವಿಷಯಗಳಿಗೆ ನಾನು ಬೆಂಬಲ ನೀಡಿರಬಹುದು. ಆದರೆ, ಯಾವ ಪಕ್ಷವನ್ನು ಸೇರಿಲ್ಲ. ಹಿಂದೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಕಾಂಗ್ರೆಸ್‌ ಬಿಟ್ಟು ಬೇರಾವ ಪಕ್ಷದ ಬಳಿ ಹೋಗಿ ಟಿಕೆಟ್‌ ಕೇಳಿರಲಿಲ್ಲ. ಒಂದು ಪಕ್ಷದ ಉನ್ನತ ಸ್ಥಾನದಲ್ಲಿ ಇರುವ ಅವರು ಈ ರೀತಿ ಮಾತನಾಡಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಡಿ.ಕೆ ಶಿವಕುಮಾರ್‍‌ ಬಳಿ ಮಂಡ್ಯದ ಟಿಕೆಟ್‌ ಕೇಳಿದಾಗ ‘ಮಂಡ್ಯದಲ್ಲಿ ನೀವು ಗೆಲ್ಲುವುದು ಕಷ್ಟ. ಮಂಡ್ಯವನ್ನು ನಿಭಾಯಿಸುವುದಕ್ಕೆ ನಿಮ್ಮ ಕೈಯಲ್ಲಿ ಆಗಲ್ಲ. ಬೇಕಾದರೆ ಬೆಂಗಳೂರು ಸೌತ್‌ ಅಥವಾ ನಾರ್ಥ್‌ನಲ್ಲಿ ನಿಲ್ಲಿ’ ಎಂದು ಹೇಳಿ ನನ್ನನ್ನು ನಿರುತ್ಸಾಹಗೊಳಿಸಿದ್ದರು” ಎಂದು ಹೇಳಿದರು.

“ಡಿ.ಕೆ ಶಿವಕುಮಾರ್ ನನಗೆ ಟಿಕೆಟ್‌ ನೀಡುವುದಿಲ್ಲವೆಂದು ಹೇಳಿದ ಮೇಲೆ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಜೊತೆ ‘ಅಜೆಸೆಟ್‌ಮೆಂಟ್‌ ಪಾಲಿಟಿಕ್ಸ್’ ಮಾಡುವ ಮೂಲಕ ಡಿ. ಕೆ. ಶಿವಕುಮಾರ್ ನನ್ನನ್ನು ದೂರುತ್ತಿದ್ದಾರೆ” ಎಂದು ಕಿಡಿಕಾರಿದರು.

“ಪಕ್ಷೇತರ ಅಭ್ಯರ್ಥಿಯಾಗಿ ನಿಂತಾಗ ಮಂಡ್ಯದಲ್ಲಿ ಬಿಜೆಪಿ ನನಗೆ ಪರೋಕ್ಷವಾಗಿ ಬೆಂಬಲಿಸಿದೆ. ಅದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ. ಆದರೆ ಗೆದ್ದ ಮೇಲೆ ನೀವು ನಮ್ಮ ಪಕ್ಷಕ್ಕೆ ಸೇರಬೇಕು ಎಂಬ ಯಾವ ನಿಯಮವನ್ನು ಬಿಜೆಪಿ ನನ್ನ ಮೇಲೆ ಇದುವರೆಗೂ ಹೇರಿಲ್ಲ. ಮುಂದೆ ನಾನು ಯಾವ ಪಕ್ಷ ಸೇರಬೇಕೆಂದು ನನ್ನ ಬೆಂಗಲಿಗರು, ಜನರೇ ತಿಳಿಸುತ್ತಾರೆ’” ಎಂದು ತಿಳಿಸಿದರು.

ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಉತ್ತಮವೇ ಎಂಬುದರ ಬಗ್ಗೆ ನುಡಿ.ಕರ್ನಾಟಕ.ಕಾಮ್ ಜೊತೆ ಮಾತನಾಡಿದ ಮಂಡ್ಯ ನಿವಾಸಿ ಸಿದ್ದರಾಜು, “ಸಂಸದೆಯಾಗಿ ಸುಮಲತಾ ಅವರು ಮಂಡ್ಯದ ಜನರಿಗಾಗಿ ಹೆಮ್ಮೆ ಪಡುವಂತಹ ಕೆಲಸಗಳನ್ನು ಮಾಡಲಿಲ್ಲ. ಮೈಸೂರು ಸಂಸದರೊಂದಿಗಿನ ಗಲಾಟೆಯೊಂದಿಗೆ ಅವರು ಸುದ್ದಿಯಾದಂತೆ, ಜನಪರ ಕೆಲಸ ಮಾಡಿ ಸುದ್ದಿಯಾಗಲಿಲ್ಲ. ಇತ್ತೀಚೆಗೆ ಮಂಡ್ಯದಲ್ಲಿ ರೈತರು ಹೋರಾಟ ನಡೆಸಿದರು, ಒಂದು ದಿನವೂ ಅತ್ತ ಸುಳಿಯಲಿಲ್ಲ. ನಗರದಲ್ಲಿ ಹಲವಾರು ಸ್ಲಂಗಳಿವೆ. ಅವರ ಸಮಸ್ಯೆಗಳ ಬಗ್ಗೆ ಎಂದೂ ಮಾತನಾಡಲಿಲ್ಲ. ಇನ್ನು ಅವರು ಶಾಸಕಿಯಾಗಿ ಮಂಡ್ಯದ ಜನರಿಗಾಗಿ ದುಡಿಯುತ್ತಾರೆ ಎಂಬ ಯಾವುದೇ ವಿಶ್ವಾಸವಿಲ್ಲ” ಎಂದು ಅಸಮಾಧಾನದ ಮಾತನಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!