Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಟೇಸ್ವಾಮಿ ಕ್ಷೇತ್ರದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಧರೆಗೆ ದೊಡ್ಡವರು ಶ್ರೀಮಂಟೇಸ್ವಾಮಿ ಪುಣ್ಯಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಮಠದ ಹೊನ್ನಾಯಕನಹಳ್ಳಿಯಲ್ಲಿ ದೀಪಾವಳಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಕೆರೆ ಸಮೀಪ ನಿರ್ಮಿಸಿದ್ದ ಮಂಟಪದಲ್ಲಿ ಮಂಟೇಸ್ವಾಮಿ ಕಂಡಾಯ, ಬಸವಪ್ಪ, ಸೂರ್ಯಪಾಣಿ, ಚಂದ್ರ ಪಾಣಿ, ದೊಡ್ಡಸತ್ತಿಗೆ, ಬಿಂಕ ಬಿರುದುಗಳೊಂದಿಗೆ ಸಿಡಿಮದ್ದಿನ ಸಮೇತ ಹೂವು, ಹೊಂಬಾಳೆ ಕಾರ್ಯಕ್ರಮವು ವಿಧಿವಿಧಾನಗಳೊಂದಿಗೆ ನೆರೆವೇರಿತು.

ಮಠಾಧಿಪತಿಗಳಾದ ಎಂ.ಎಲ್.ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸು ಭಕ್ತರನ್ನುದ್ದೇಶಿಸಿ ಮಾತನಾಡಿ, ಧರೆಗೆ ದೊಡ್ಡವರು ಮಂಟೇಸ್ವಾಮಿ ಮಠದಲ್ಲಿ ಹಲವು ವರ್ಷಗಳಿಂದ ಸಂಸ್ಕೃತಿ, ಸಂಪ್ರದಾಯ ಗುರುಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಪೂಜಾ, ಕೈಂಕರ್ಯ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಅಪಾರ ಮಳೆಯಿಂದಾಗಿ ದೇಶವೇ ತೊಂದರೆಗೆ ಸಿಲುಕಿತು. ಮುಂದಿನ ದಿನಗಳಲ್ಲಿ ಮಳೆಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರಿಗೆ ಆಯಸ್ಸು, ಆರೋಗ್ಯ, ಸುಖ ಶಾಂತಿ ನೆಮ್ಮದಿ ಸಿಗಲಿ ಎಂದು ಶುಭ ಕೋರಿದರು.

ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರಿಂದ ಬಂದ ತಂಬೂರಿ ಜಾನಪದ ಕಲೆ ಆಧುನಿಕ ಭರಾಟೆಗೆ ಸಿಲುಕಿ ಮಾಯವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸಂಸ್ಕೃತಿ ಸಂಪ್ರದಾಯ ಮರೆಯಾಗದಂತೆ ಕೆ.ಆರ್.ನಗರದ ರಾಚಪ್ಪಾಜಿ ಪುಣ್ಯ ಕ್ಷೇತ್ರ ಹಾಗೂ ಮಠದ ಹೊನ್ನಾಯಕಹಳ್ಳಿ ಮಂಟೇಸ್ವಾಮಿ ಕ್ಷೇತ್ರಗಳಲ್ಲಿ ಜಾನಪದ ಕಲೆ ಉಳಿಸುವ ನಿಟ್ಟಿನಲ್ಲಿ ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು, ಸ್ಥಳೀಯ ಜಾನಪದ ಕಲಾವಿದರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.

ಬಸವಪ್ಪ ಮೆರವಣಿಗೆ ಹೊನ್ನಾಯಕನಹಳ್ಳಿಯ ಚೌಡೇಶ್ವರಿ, ಮಾರಮ್ಮ, ಹುಚ್ಚಮ್ಮ ಸೇರಿದಂತೆ ವಿವಿಧ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಬಸವಪ್ಪ, ಕಂಡಾಯ, ಪೂಜೆ ಸತ್ತಿಗೆಗಳ ಮೆರವಣಿಗೆ ನಡೆಸಲಾಯಿತು. ಮನೆ ಮುಂದೆ ಬಂದ ದೇವರಿಗೆ ಮಹಿಳೆಯರು ಆರತಿ ನೀಡಿ ಪೂಜೆ ಸಲ್ಲಿಸಿ ನಮಿಸಿದರು.

ಭಕ್ತ ಸಾಗರ

ಮಂಟೇಸ್ವಾಮಿ, ಸಿದ್ದಪ್ಪಾಜಿ ನೀಲಗಾರರು, ವಿಶ್ವಕರ್ಮ ಕುಲಬಾಂಧವರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಹೂ ಹೊಂಬಾಳೆ ಸಂದರ್ಭದಲ್ಲಿ ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿಗೆ ಉಘೇ ಎಂಬ ಕೂಗಿಗೆ ಭಕ್ತಗಣ ಸಾಕ್ಷಿಯಾಯಿತು.

ಮಂಟೇಸ್ವಾಮಿ ಜಾನಪದ ಕಲಾವಿದ ಮೈಸೂರು ಗುರುರಾಜ್ ಅವರಿಂದ ಧರೆಗೆ ದೊಡ್ಡವರು ಶ್ರೀ ಮಂಟೇಸ್ವಾಮಿ ಕಥೆ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜೊತೆಯಲ್ಲಿ ಸೋಬಾನೆ, ತತ್ವಪದ ಸೇರಿದಂತೆ ಹಲವು ಜಾನಪದ ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಜಾತ್ರೆಗೆ ಅಗಮಿಸಿ ಕಲೆಯನ್ನು ಪ್ರಸ್ತುತ ಪಡಿಸಿದ ಕಲಾವಿದರಿಗೆ ಎಂ.ಎಲ್.ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸು ಅವರು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಜಾತ್ರೆಗೆ ಬಂದ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿತ್ತು.

ವಿದ್ಯುತ್ ದೀಪಾಲಂಕಾರ

ವಿವಿಧ ಬಗೆಯ ಹೂವು ಮತ್ತು ವಿದ್ಯುತ್ ದೀಪಗಳಿಂದ ಮಠವನ್ನು ಶೃಂಗರಿಸಲಾಗಿತ್ತು. ಮಠದ ಹೊನ್ನಾಯಕನಹಳ್ಳಿ, ಪುಟ್ಟೇಗೌಡನದೊಡ್ಡಿ ಯಜಮಾನರು ಮತ್ತು ಯುವ ಮಿತ್ರ ಮಂಡಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿತ್ತು.

ಕಲಾವಿದರಿಗೆ ಬಟ್ಟೆ ವಿತರಣೆ

ಮಂಟೇಸ್ವಾಮಿ ಕಥೆ ಪ್ರಸ್ತುತ ಪಡಿಸಿದ ಜಾನಪದ ಕಲಾವಿದರಿಗೆ ದೀಪಾವಳಿ ಹಬ್ಬದ ಅಂಗವಾಗಿ ಮಠಾಧಿಪತಿ ಎಂ.ಎಲ್.ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸು ಅವರು ರೇಷ್ಮೆ ಬಟ್ಟೆ ನೀಡಿ ಗೌರವಿಸಿದರು.
ವರ್ಷಕ್ಕೊಮ್ಮೆ ನಡೆಯುವ ದೀಪಾವಳಿ ಮಂಟೇಸ್ವಾಮಿ ಜಾತ್ರಾ ಮಹೋತ್ಸವದ ಯಶಸ್ವಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಶ್ರೀ ಮಂಟೇಸ್ವಾಮಿ ಮಠದ ಆಡಳಿತ ಮಂಡಳಿಯ ಸದಸ್ಯರು ಕೃತಜ್ಞತೆ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!