Thursday, September 19, 2024

ಪ್ರಾಯೋಗಿಕ ಆವೃತ್ತಿ

ಅನೇಕಲ್ : ಕಾಣೆಯಾದ ಮಹಿಳೆ ಬೀರುವಿನಲ್ಲಿ ಶವವಾಗಿ ಪತ್ತೆ

ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಪಕ್ಕದ ಮನೆಯ ಬೀರುವಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ ತಾಲೂಕಿನಲ್ಲಿ ನಡೆದಿದೆ.

ಮೃತ ಮಹಿಳೆ ಪಾರ್ವತಮ್ಮ(80) ಎಂಬವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮೂಸಗೊಲ್ಲಹಟ್ಟಿ ಹಳ್ಳಿಯ ನಿವಾಸಿ. ಇವರು ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ನೆರಳೂರಿನ ಮೊದಲ ಅಡ್ಡರಸ್ತೆಯಲ್ಲಿ ಪುತ್ರ ರಮೇಶ್‌ ಕುಟುಂಬದ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೆ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು.

“ಪಾರ್ವತಮ್ಮ ವಾಸವಿದ್ದ ಬಾಡಿಗೆ ಮನೆಯ ಮೂರನೇ ಮಹಡಿಯಲ್ಲಿರುವ ಮನೆಯ ಕೋಣೆಯೊಂದರ ಬೀರುವಿನಲ್ಲಿ ಅವರ ಮೃತದೇಹ, ಬಟ್ಟೆ ಇಡುವ ಬೀರುವಿನಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಅವರು ಧರಿಸಿದ್ದ ಚಿನ್ನಾಭರಣಗಳು ನಾಪತ್ತೆಯಾಗಿವೆ” ಎಂದು ಪ್ರಕರಣ ದಾಖಲಿಸಿಕೊಂಡಿರುವ ಅತ್ತಿಬೆಲೆ ಪೊಲೀಸರು ತಿಳಿಸಿದ್ದಾರೆ.

“ಮೂರನೇ ಮಹಡಿ ಮನೆಯಲ್ಲಿ ವಾಸವಿದ್ದ ಪಾಯಲ್ ಖಾನ್ ಎಂಬಾಕೆ ಇದೇ ವೇಳೆ ಕಾಣೆಯಾಗಿದ್ದು, ಆಕೆ ಪಾರ್ವತಮ್ಮನನ್ನು ಕೊಲೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ” ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಅತ್ತಿಬೆಲೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವಿಶ್ವನಾಥ್, “ಮೃತಪಟ್ಟ ಮಹಿಳೆಯು ಪಾರ್ವತಮ್ಮನವರ ಮಗ ರಮೇಶ್ ಅವರು ಬೊಮ್ಮಸಂದ್ರದಲ್ಲಿರುವ ಅರವಿಂದ್ ಗಾರ್ಮೆಂಟ್ಸ್‌ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ಘಟನೆ ನಡೆದ ವಸತಿ ಕಟ್ಟಡದ ಎರಡನೇ ಮಹಡಿಯಲ್ಲಿ ಬಾಡಿಗೆ ಮನೆ ಮಾಡಿ, ಕುಟುಂಬದೊಂದಿಗೆ ವಾಸವಿದ್ದರು.

ಕಳೆದ ಒಂಬತ್ತು ತಿಂಗಳಿನಿಂದ ಇವರ ಜೊತೆಗೆ ಇದ್ದ ಪಾರ್ವತಮ್ಮನವರು ದಿಡೀರಾಗಿ ಕಳೆದ ಮೂರು ದಿನದ ಹಿಂದೆ ನಾಪತ್ತೆಯಾಗಿದ್ದರು. ಮೂರನೇ ಮಹಡಿಯಲ್ಲಿರುವ ಸಿಂಗಲ್ ಬೆಡ್‌ರೂಮಿನಲ್ಲಿ ಪಾಯಲ್ ಖಾನ್ ಎಂಬಾಕೆ ವಾಸವಿದ್ದವಳು, ಪಾರ್ವತಮ್ಮನವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ 100 ಗ್ರಾಂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ. ಆಕೆಯ ಬಂಧನಕ್ಕೆ ಬಲೆ ಬೀಸಿದ್ದೇವೆ” ಎಂದು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಮೂರು ದಿನಗಳ ಹಿಂದೆ ಪಾರ್ವತಮ್ಮ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅವರಿಗಾಗಿ ಮನೆಮಂದಿ ಎಲ್ಲ ಹುಡುಕಾಟ ನಡೆಸಿದ್ದರು. ಈ ವೇಳೆ ಅದೇ ಕಟ್ಟಡದ ಮೂರನೇ ಮಹಡಿ ಮನೆಯಲ್ಲಿ ವಾಸವಿದ್ದ ಪಾಯಲ್ ಖಾನ್ ಕೂಡಾ ಹುಡುಕಾಟದಲ್ಲಿ ಪಾಲ್ಗೊಂಡಿದ್ದಳು. ಬಳಿಕ ಪಾರ್ವತಮ್ಮರ ಪುತ್ರ ಅತ್ತಿಬೆಲೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ದೂರು ದಾಖಲಾಗುತ್ತಿದ್ದಂತೆ ಪಾಯಲ್ ನಾಪತ್ತೆಯಾಗಿದ್ದಳೆ ಎನ್ನಲಾಗಿದೆ.

ಪಾಯಲ್‌ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶಂಕೆಗೊಂಡ ಅತ್ತಿಬೆಲೆ ಪೊಲೀಸರು, ಪಾಯಲ್ ವಾಸವಿದ್ದ ಮನೆಯನ್ನು ಪರಿಶೀಲಿಸಿದಾಗ ಪಾರ್ವತಮ್ಮರ ಮೃತದೇಹ ಕೋಣೆಯೊಂದರ ಬೀರುವಿನಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಾರ್ವತಮ್ಮರ ಕತ್ತಿನಲ್ಲಿದ್ದ ಮಾಂಗಲ್ಯ ಸರ, ಕಿವಿಯೋಲೆ ಸೇರಿದಂತೆ ಮೈಮೇಲಿದ್ದ ಇತರ ಆಭರಣಗಳು ಕೂಡ ನಾಪತ್ತೆಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಘಟನಾ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!