Thursday, September 19, 2024

ಪ್ರಾಯೋಗಿಕ ಆವೃತ್ತಿ

ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ : ಸಿಎಂ ಸಿದ್ದರಾಮಯ್ಯ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಮ ಚಾಮುಂಡೇಶ್ವರಿ ಪ್ರಾಧಿಕಾರವನ್ನು ಸರ್ಕಾರ ರಚಿಸಿದ್ದು, ಹಿಂದೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯಡಿ ಕಾರ್ಯನಿರ್ವಾಹಕ ಅಧಿಕಾರಿಗಳು ದೇವಸ್ಥಾನದ ಅಭಿವೃದ್ಧಿ ಮತ್ತು ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದರು. ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವೂ ರಚನೆಯಾಗಿದೆ. ಹುಲಿಗೆಮ್ಮ ದೇವಸ್ಥಾನ ಮಹದೇಶ್ವರ ದೇವಸ್ಥಾನ, ಸವದತ್ತಿಯ ಎಲ್ಲಮ್ಮ, ಘಾಟಿ ಸುಬ್ಮಣ್ಯ ದೇವಸ್ಥಾನಕ್ಕೂ ಪ್ರಾಧಿಕಾರವನ್ನು ಸರ್ಕಾರ ರಚಿಸಿದೆ. ವಿಶ್ವವಿಖ್ಯಾತ ದಸರಾ ಹಬ್ಬದ ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಾವಿರಾರು ಜನ ಭಕ್ತಾದಿಗಳು ಶುಕ್ತವಾರ, ಶನಿವಾರ ಭಾನುವಾರಗಳಂದು ಬಹಳ ಭಕ್ತಾದಿಗಳು ಭೇಟಿ ನೀಡುತ್ತಾರೆ. ಶ್ರೀಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಅವುಗಳ ಪೈಕಿ ಕೆಲವು ಪೂರ್ಣಗೊಂಡಿದ್ದರೆ ಕೆಲವು ಪೂರ್ಣಗೊಂಡಿಲ್ಲ ಎಂದರು.

23 ದೇವಾಲಯಗಳ ಅಭಿವೃದ್ದಿ

ಪ್ರಾಧಿಕಾರವು ಚಾಮುಂಡಿ ಕ್ಷೇತ್ರ ಮತ್ತು ಬೆಟ್ಟಕ್ಕೆ ಸೇರಿದ 23 ದೇವಾಲಯಗಳ ಅಭಿವೃದ್ಧಿ, ಹಾಗೂ ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂಬ ಉದ್ದೇಶದಿಂದ ಪ್ರಾಧಿಕಾರ ರಚನೆಯಾಗಿದೆ. ಹಿಂದೆ ಬಸ್ ನಿಲ್ದಾಣ, ವಾಹನ ನಿಲುಗಡೆ ಮತ್ತು ಮಳಿಗೆಗಳ ನಿರ್ಮಾಣವಾಗಿದೆ. ಹಿಂದೆ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳನ್ನು ಕೂಡಲೇ ಪೂಣಗೊಳಿಸಲು ಸೂಚನೆ ನೀಡಲಾಗಿದೆ. 2018 ರಲ್ಲಿ ಕುಡಿಯುವ ನೀರಿನ ಕಾಮಗಾರಿ ಮಂಜೂರಾಗಿದ್ದರೂ ಇನ್ನೂ ಪೂರ್ಣವಾಗಿಲ್ಲ. ಅದನ್ನು ಕೂಡಲೇ ಪೂರ್ಣಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರದವರಿಗೆ ಸೂಚನೆ ನೀಡಲಾಗಿದೆ. ಕಸ ವಿಲೇವಾರಿ ಕಾಮಗಾರಿಯ ಸಿವಿಲ್ ಕಾಮಗಾರಿಗಳು ಪೂರ್ಣವಾಗಿದ್ದು, ಈ ತಿಂಗಳೊಳಗೆ ವಿದ್ಯುದ್ದೀಕರಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸವೇಕು. ಸ್ವಚ್ಛತೆಗೆ ಗಮನ ಹರಿಸಬೇಕೆಂದು ಸೂಚಿಸಲಾಗಿದೆ ಚಾಮುಂಡಿ ದೇವಸ್ಥಾನ ಮಾತ್ರವಲ್ಲದೇ ಎಲ್ಲಾ ದೇವಸ್ಥಾನಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.

ಪ್ರತಿ ವರ್ಷ ದೇವಾಲಯಯದ ಆದಾಯ ಹೆಚ್ಚಳ

ಪ್ರಾಧಿಕಾರದಲ್ಲಿ ಒಟ್ಟು 169.22 ಕೋಟಿ ¯ಭ್ಯವಿದ್ದು, ದೇವಾಲಯದ ಉಳಿತಾಯ ಖಾತೆಯಲ್ಲಿ 20.24 ಕೋಟಿ ರೂ.ಗಳು ಲಭ್ಯವಿದೆ. 2023-24 ರಲ್ಲಿ 49.64 ಕೋಟಿ ರೂ.ಗಳ ಆದಾಯ 28.18 ಕೋಟಿ ನಿವ್ವಳ ಆದಾಯ ಬಂದಿದೆ. ಜುಲೈ ಕೊನೆಯವರೆಗೆ 17.4 ಕೋಟಿ ಆದಾಯ ಬಂದಿದ್ದು, 6.97 ಕೋಟಿ ವೆಚ್ಚವಾಗಿದೆ. ಪ್ರತಿ ವರ್ಷ ಆದಾಯ ಹೆಚ್ಚಾಗುತ್ತಿದೆ. ಅಂದರೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿರುವ ದೇವಿಕೆರೆ, ನಂದಿ ಪ್ರತಿಮೆ ಅಭಿವೃದ್ಧಿಗೆ ತೀರ್ಮಾನ ಮಾಡಲಾಗಿದೆ. ಶಾಸಕರು ಹಾಗೂ ಸಚಿವರು ವ್ಯಕ್ತ ಮಾಡಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ರೋಪ್ ವೇ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ. ಪರಿಸರವಾದಿಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಹಿಂದೆಯೇ ಸ್ಥಗಿತಗೊಳಿಸಲಾಗಿದೆ ಎಂದರು.

ವಸ್ತ್ರ ಸಂಹಿತೆ ಇಲ್ಲ

ಬೆಟ್ಟಕ್ಕೆ ಬರುವ ಮೆಟ್ಟಿಲುಗಳನ್ನು ಅಭಿವೃದ್ಧಿಪಡಿಲಾಗುವುದು ಎಂದ ಮುಖ್ಯಮಂತ್ರಿಗಳು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಯಾವುದೇ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿಲ್ಲ. ಎಲ್ಲಾ ಜಾತಿ , ಧರ್ಮದವರು ದೇವಸ್ಥಾನಕ್ಕೆ ಬರಬಹುದು ಎಂದರು.

ಅಪರಾಧ ತಡೆಗೆ ಟಾಸ್ಕ್ ಫೋರ್ಸ್ ರಚನೆ

ದೇವಾಲಯಗಳಲ್ಲಿ ಅಗತ್ಯವಿರುವೆಡೆ ಸಿಸಿಟಿವಿ ಅಳವಡಿಸಬೇಕೆಂದು ತೀರ್ಮಾನಿಸಿ, ಯೂನಿಯನ್ ಬ್ಯಾಂಕ್ ನವರು ಸಿಎಸ್ ಆರ್ ನಿಧಿಯಿಂದ ಸಿಸಿಟಿವಿಗಳನ್ನು ಅಳವಡಿಕೆಗೆ ಸಹಕಾರ ನೀಡಲಿದ್ದಾರೆ. ದೇವಸ್ಥಾನದ ಸುತ್ತಮುತ್ತಲಿನ ದೀಪದ ವ್ಯವಸ್ಥೆಗೊಳಿಸುವ ಜೊತೆಗೆ ಈ ಪ್ರದೇಶದಲ್ಲಿ ಅಪರಾಧಗಳನ್ನು ನಿಗ್ರಹಿಸಲು ಒಂದು ಟಾಸ್ಕ್ ಫೋರ್ಸ್ ನ್ನು ರಚನೆ ಮಾಡಲಾಗುವುದು ಎಂದರು.

ಪ್ಲಾಸ್ಟಿಕ್ ಮುಕ್ತಗೊಳಿಸಲು ಕ್ರಮ

ಚಾಮುಂಡಿ ಬೆಟ್ಟದ ಮೇಲೆ ಧೂಮಪಾನ, ಮದ್ಯಪಾನ, ಗುಟ್ಕಾ ಪಾನ್ ಗಳನ್ನು ಸಂಪೂರ್ಣ ನಿಷೇದಿಸಲಾಗಿದೆ. ಬೆಟ್ಟದ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ತೀರ್ಮಾನಿಸಲಾಗಿದೆ. ಪ್ರಸಾದ ಯೋಜನೆಯನ್ನು ಕೇಂದ್ರ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಜಾರಿಗೊಳಿಸಲು ಅನುಮೋದನೆ ನೀಡಲಾಗಿದ್ದು, ಈ ಯೋಜನೆಗೆ ಹೆಚ್ಚುವರಿಯಾಗಿ ಬೇಕಾಗುವ 11 ಕೋಟಿ ರೂ.ಗಳನ್ನು ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದಿಂದ ಭರಿಸಲಾಗುವುದು. ದೇವಾಲಯದ ಒಳಗೆ ಛಾಯಾಗ್ರಹಣವನ್ನು ನಿಷೇದಿಸಲಾಗಿದ್ದು, ಮೊಬೈಲ್ ಗಳನ್ನು ಬಂದ್ ಮಾಡಿಕೊಳ್ಳುವ ಆದೇಶ ನೀಡಲಾಗುವುದು ಎಂದರು.

ಐದು ದೇವಾಲಯ ಸಮೂಹದ ಜೀರ್ಣೋದ್ಧಾರ

ಪ್ರಸನ್ನ ಕೃಷ್ಣ ಸ್ವಾಮಿ ದೇವಾಲಯ,ಗಾಯತ್ರಿಯಮ್ಮನವರ ದೇವಾಲಯ,ಭುವನೇಶ್ವರಿ ಅಮ್ಮನವರ ದೇವಾಲಯ , ಕೋಟೆ ಆಂಜನೀಯದೇವಾಲಯ, ವರಾಹ ಸ್ವಾಮಿ ದೇವಾಲಯಗಳ ಐದು ದೇವಾಲಯಗಳ ಸಮೂಹವನ್ನು ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳಲಾಗುವುದು. ಇಲ್ಲಿ ಕರ್ತವ್ಯನಿರ್ವಹಿಸುವ ಖಾಯಂ ಸಿಬ್ಬಂದಿಗಳಿಗೆ ವೈದ್ಯಕೀಯ ಸೌಲಭ್ಯ ಹಾಗೂಅವರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದರು.

ಹೆಚ್ಚು ಸವಲತ್ತು ನೀಡಲು ತೀರ್ಮಾನ

ಚಾಮುಂಡಿಬೆಟ್ಟ ಕ್ಷೇತ್ರವನ್ನು ಹೆಚ್ಚು ಆಕರ್ಷಣೀಯವಾಗಿ ಮಾಡುವ ಜೊತೆಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಇಲ್ಲಿನ ದಾಸೋಹ ಭವನದ ವ್ಯವಸ್ಥೆಗಳನ್ನು ಸುಧಾರಿಸಿ, ಭಕ್ತಾದಿಗಳಿಗೆ ಶುಚಿ ರುಚಿಯಿರುವಂತಹ ಊಟವ್ಯವಸ್ಥೆಗಳನ್ನು ಮಾಡಲು ವ್ಯವಸ್ಥೆಗೊಳಿಸಲು ತೀರ್ಮಾನಿಸಲಾಗಿದೆ. ಚಾಮುಂಡಿಕ್ಷೇತ್ರದ ಪ್ರಾದಿಕಾರದಲ್ಲಿ 169 ಕೋಟಿ ಖಾಯಂ ಠೇವಣಿ ಇದ್ದು, ಇದರ ಆದಾಯದಲ್ಲಿ ಈ ಎಲ್ಲ ವೆಚ್ಚಗಳನ್ನು ಭರಿಸಬಹುದಾಗಿದೆ ಎಂದರು.

ದೇವಸ್ಥಾನದ ಆಸ್ತಿಗಳ ಸರ್ವೆ

ದೇವಸ್ಥಾನದ ಆಸ್ತಿಯಾಗಿರುವ ಭೂಮಿ ಒತ್ತುವರಿ ಆಗಿರುವ ಸಾಧ್ಯತೆಯಿರುವುದರಿಂದ, ಅವುಗಳ ಸರ್ವೇ ಮಾಡಲು ತಿಳಿಸಲಾಗಿದ್ದು, ಸರ್ವೆ ನಡೆಸಿದ ವರದಿಯನ್ನು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮಂಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಆರ್ ಎಸ್ ಎಸ್ ನವರು ಜಾತಿ ಜನಗಣತಿ ವರದಿ ದುರ್ಬಳಕೆಯಾಗಬಾರದು ಎಂದು ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜಾತಿ ಜನಗಣತಿ ವರದಿಯನ್ನು ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಗಳಿಗಾಗಿ ಮಾತ್ರ ಬಳಕೆಯಾಗಬೇಕೆಂಬ ಷರತ್ತಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!