Friday, September 20, 2024

ಪ್ರಾಯೋಗಿಕ ಆವೃತ್ತಿ

ಭವಿಷ್ಯದ ರಾಜಕಾರಣಕ್ಕಾಗಿ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿ – ಎಂ.ಬಿ.ಪಾಟೀಲ

ಬಿಜೆಪಿ ಪಕ್ಷವು ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಲಾಗುತ್ತಿದ್ದು, ನಮ್ಮ ಸಮುದಾಯದ ಭವಿಷ್ಯದ ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮನವಿ ಮಾಡಿದರು.

ಮಳವಳ್ಳಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಲಿಂಗಾಯತ ಸಮುದಾಯದ ಮುಖಂಡರನ್ನು ತುಳಿಯಲು ಅದೇ ಪಕ್ಷದ ನಾಯಕರನ್ನು ಬಳಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಿದ್ದಾರೆಂದು ಭವಿಷ್ಯ ನುಡಿದರು.

ವೀರೇಂದ್ರ ಪಾಟೀಲ್ ಅವರು ಆರೋಗ್ಯ ಸಮಸ್ಯೆಯಿಂದಾಗಿ ಮುಖ್ಯಮಂತ್ರಿಸ್ಥಾನದಿಂದ ಕೆಳಗಿಸಲಾಗಿತ್ತೆ ಹೊರತು ಬೇರೆ ಕಾರಣ ಇರಲ್ಲಿಲ್ಲ, ಆದರೇ ಬಿಜೆಪಿ ಪಕ್ಷವು ಯಡಿಯೂರಪ್ಪ, ಜಗದೀಶ್‌ಶೆಟ್ಟರಂತಹ ನಾಯಕರು ಆರೋಗ್ಯವಾಗಿದ್ದರೂ ಅಧಿಕಾರದಿಂದ ದೂರವಿಟ್ಟುವುದನ್ನು ವೀರಶೈವ ಸಮುದಾಯ ಗಮನಿಸಬೇಕಿದೆ, ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹಾಗೂ ವೀರಶೈವ ಲಿಂಗಾಯಿತ ಸಮುದಾಯವನ್ನು ಅಧಿಕಾರದಿಂದ ದೂರವಿಡಲು ಸಂಚು ರೂಪಿಸಲಾಗಿದ್ದು, ವೀರಶೈವ ಲಿಂಗಾಯಿತ ಸಮುದಾಯ ಎಚ್ಚರಿಕೆ ವಹಿಸಿ ಬಸವ ತತ್ವ ಆಧಾರದಲ್ಲಿ ಅಧಿಕಾರ ನೀಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.

ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಪಕ್ಷವು ವಯಸ್ಸಿನ ಕಾರಣ ನೀಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿತ್ತು, ಸಮುದಾಯದ ಸ್ವಾಮಿಜಿಗಳ ಜೊತೆಗೂಡಿ ಶಾಮನೂರು ಶಿವಶಂಕರಪ್ಪ ತೀವ್ರವಾಗಿ ವಿರೋಧಿಸಿದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಲೋಕಸಭೆ ಚುನಾವಣೆ ನಂತರ ಬಿಜೆಪಿ ಪಕ್ಷವು ಮೂಲೆ ಗುಂಪಾಗುವುದು ಖಚಿತವಾಗಿದ್ದು, ಹೀಗಾಗಿ ಲಿಂಗಾಯತ ಸಮುದಾಯ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಮಳವಳ್ಳಿ ತಾಲ್ಲೂಕಿನಲ್ಲಿ ಸಾವಿರಾರು ಕೋಟಿ ಅನುದಾನದಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಹಾಗೂ ಜಾತ್ಯಾತೀತ ಮನೋಭಾವ ಹೊಂದಿರುವ ಹಾಗೂ ಬಸವ ತತ್ವ ಆಧಾರದಲ್ಲಿ ಎಲ್ಲಾ ಸಮುದಾಯಕ್ಕೂ ಅಧಿಕಾರ ನೀಡಿರುವ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಬೇಕು, ಮಳವಳ್ಳಿ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ತಿಳಿದು ಪಿ.ಎಂ ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಲು ಪ್ರತಿಯೊಬ್ಬರು ತಮ್ಮ ಮತವನ್ನು ಹಾಕುವುದರ ಜೊತೆಗೆ ಹೆಚ್ಚಿನ ಮತವನ್ನು ಹಾಕಿಸಬೇಕೆಂದು ಕೋರಿದರು.

ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಮಳವಳ್ಳಿ ತಾಲ್ಲೂಕಿಗೆ ಸಾವಿರಾರು ಕೋಟಿ ಅನುದಾನವನ್ನು ನೀರಾವರಿ ಕ್ಷೇತ್ರಕ್ಕೆ ಕೊಡುಗೆಯಾಗಿ ಕೊಟ್ಟ ಎಂ.ಬಿ ಪಾಟೀಲ್ ಅವರು ನೀರಾವರಿ ಕ್ಷೇತ್ರವು ಸುಧಾರಣೆಯಾಗಲು ಕಾರಣರಾಗಿದ್ದಾರೆ. ಏತ ನೀರಾವರಿ, ನಾಲಾ ಆಧುನೀಕರಣ, ಹನಿ ನೀರಾವರಿ ಯೋಜನೆಯನ್ನು ಕೊಟ್ಟು ಕಾಮಗಾರಿಯನ್ನು ಆರಂಭಿಸಲಾಗಿತ್ತು, ಬದಲಾದ ರಾಜಕೀಯ ವ್ಯವಸ್ಥೆಯಿಂದಾಗಿ ಕಾಮಗಾರಿಗಳು ಸತ್ತು ಬಿದ್ದಿವೆ, ಕಾಮಗಾರಿ ಪೂರ್ಣಗೊಳಿಸಿ ಬಿಜಿಪುರ ಹೋಬಳಿಯ ಭೂಮಿಯನ್ನು ಹಚ್ಚ ಹಸಿರಾಗಿಸಲು ನಿಮ್ಮ ಮನೆ ಮಗನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಮುಖಂಡರಾದ ಆರ್.ಎನ್ ಚಂದ್ರಶೇಖರ್ ಮೂರ್ತಿ, ಕುಂದೂರು ಪ್ರಕಾಶ್, ನಟರಾಜ್, ದಯಾಶಂಕರ್, ದೇವರಾಜು, ಸುಂದರ್‌ರಾಜ್, ವಿಶ್ವಾಸ್, ಪರಶಿವಮೂರ್ತಿ, ಬಾಬಣ್ಣ, ಸುರೇಶ್, ಜಯಣ್ಣ, ಅಮೃತ್ ಕಂಟೇಶ್, ಅಶ್ವೀನ್, ಸಂಗಮೇಶ್, ನಾಗಮಹದೇವ, ಪುಟ್ಟಮಾದು, ಪ್ರಹ್ಲಾದ್, ಪುಟ್ಟಣ್ಣ, ಅಂಬರೀಷ್, ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!