ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿದ್ದ ವಕೀಲೆ ಮೀರಾ ರಾಘವೇಂದ್ರ ಅವರನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಲಾಗಿದೆ.
ಈ ಹಿಂದೆ ಬೆಂಗಳೂರು ನ್ಯಾಯಾಲಯದ ಆವರಣದಲ್ಲಿ ಮೀರಾ, ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದ್ದರು. ಮಸಿ ಬಳಿಯುತ್ತಿರುವ ದೃಶ್ಯಗಳು ಹಾಗೂ ವರದಿಗಳು 05/02/2021 ರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ವಕೀಲೆಯ ವರ್ತನೆ ವಿರುದ್ದ ಕೆ.ಎಸ್. ಭಗವಾನ್ ಕರ್ನಾಟಕ ಬಾರ್ ಕೌನ್ಸಿಲ್ ನಲ್ಲಿ ದೂರು ದಾಖಲಿಸಿದ್ದರು.
ಈ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮೀರಾ ರಾಘವೇಂದ್ರ ಅವರಿಗೆ ಕಳುಹಿಸಿದ್ದ ನೋಟಿಸನ್ನು ಮೀರಾ ಸ್ವೀಕರಿಸಿರಲಿಲ್ಲ. ಹಾಗಾಗಿ ಅವರ ಅನುಪಸ್ಥಿತಿಯಲ್ಲಿ ದೂರಿನ ವಿಚಾರಣೆ ನಡೆಸಿದ ಬಾರ್ ಕೌನ್ಸಿಲ್ ಸಮಿತಿಯು, ವಕೀಲೆಯಾಗಿ ವೃತ್ತಿಪರರಾಗಿ ಕೆಲಸ ಮಾಡುವ ಮೀರಾ ರಾಘವೇಂದ್ರ ದೂರಿನ ಬಗ್ಗೆ ವಿಚಾರಣೆಗೆ ಹಾಜರಾಗದೇ, ನೋಟಿಸನ್ನು ಸ್ವೀಕರಿಸದೇ ಇರುವುದು ಬಾರ್ ಕೌನ್ಸಿಲ್ ನ ನಿಯಮಗಳಿಗೆ ವಿರುದ್ಧವಾಗಿದೆ. ನ್ಯಾಯಾಲಯದ ಆವರಣದಲ್ಲಿ ವಕೀಲರ ಸಮವಸ್ತ್ರದಲ್ಲಿದ್ದು ದೂರುದಾರರ ಮುಖಕ್ಕೆ ಮಸಿ ಬಳಿಯುವುದು ಅವರ ದುರ್ನಡತೆಯನ್ನು ತೋರಿಸುತ್ತದೆ. ತಮ್ಮ ವೃತ್ತಿಗೆ ಬದ್ಧರಾಗಿರದೆ ಅವರು ನಡೆದುಕೊಂಡಿರುವ ರೀತಿ, ವೃತ್ತಿಯ ಶಿಷ್ಟಾಚಾರಕ್ಕೆ ಅಪಮಾನ ಮಾಡಿದಂತಾಗಿದ್ದು, ಅವರು ಮೂರು ತಿಂಗಳ ಕಾಲ ಕರ್ನಾಟಕ ಸೇರಿದಂತೆ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಕೀಲಿ ವೃತ್ತಿಯನ್ನು ಮಾಡಬಾರದು ಎಂದು ನಿರ್ಧಾರ ಕೈಗೊಂಡಿದ್ದು, ಮೂರು ತಿಂಗಳ ಕಾಲ ಅಮಾನತ್ತಿನಲ್ಲಿಡುವಂತೆ ಕರ್ನಾಟಕ ಬಾರ್ ಕೌನ್ಸಿಲ್ ದಿ. 20/11/2024 ರಂದು ಆದೇಶಿಸಿದೆ.




