Friday, September 20, 2024

ಪ್ರಾಯೋಗಿಕ ಆವೃತ್ತಿ

ಕುಡಿಯುವ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ: ಡಾ.ಕುಮಾರ

ಮಂಡ್ಯ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳಿಗೆ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್.ಡಿ.ಆರ್.ಎಫ್ ಖಾತೆಯಲ್ಲಿ ಅನುದಾನದ ಕೊರತೆ ಇಲ್ಲ. ಈ ಅನುದಾನದಲ್ಲಿ ಖಾಸಗಿ ಬೋರ್ ವೆಲ್ ನಿಂದ ನೀರು ಪಡೆಯಲು ಹಾಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲು ಮಾತ್ರ ಸಾಧ್ಯ. ಇದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಟ್ಯಾಂಕರ್ ಮೂಲಕ ನೀರು ಪಡೆಯಲು ಸರ್ಕಾರ ನೀಡಿರುವ ಸೂಚನೆಯಂತೆ ಹೋಬಳಿ ಅಥವಾ ತಾಲ್ಲೂಕು ಮಟ್ಟದಲ್ಲಿ ಟೆಂಡರ್ ಆಹ್ವಾನಿಸಿ ತಾಲ್ಲೂಕು ಟಾಸ್ಕ್ ಫೋಸ್೯ ಸಮಿತಿಯಲ್ಲಿ ಅನುಮೋದನೆ ಪಡೆದು ದರ ನಿಗದಿ ಮಾಡಿಕೊಳ್ಳಬೇಕು. ಇದರಿಂದ ಕುಡಿಯುವ ನೀರು ತೊಂದರೆಯಾದಲ್ಲಿ ತಕ್ಷಣ ಕ್ರಮ ವಹಿಸಬಹುದು ಎಂದರು.

ಕುಡಿಯುವ ನೀರಿನ ಕೃತಕ ಅಭಾವ ಸೃಷ್ಟಿಸಿ ಟ್ಯಾಂಕರ್ ಮೂಲಕ ನೀರು ಪಡೆದು ಹಣ ವ್ಯರ್ಥ ಮಾಡುವ ಸಾಧ್ಯತೆ ಇರುತ್ತದೆ. ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ನೀಡುವ ಗ್ರಾಮಗಳಲ್ಲಿ ಯಾವುದೇ ಮೂಲಗಳಿಂದ ನೀರು ನೀಡಲು ಸಾಧ್ಯವಿಲ್ಲವೆಂದು ದೃಢೀಕರಿಸಬೇಕು ಎಂದರು.

ಜಿಲ್ಲೆಯ 7 ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಿದ್ದು, ಪ್ರತಿ ದಿನ ಕುಡಿಯುವ ನೀರು, ಕೃಷಿ, ಮೇವಿಗೆ ಸಂಬಂಧಿಸಿದಂತೆ ಚಿತ್ರಣಗಳು ಬದಲಾಗುತ್ತಿರುತ್ತದೆ. ಪ್ರತಿ ವಾರ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ಪಿ.ಡಿ.ಒ ಗಳ ಜೊತೆ ಸಭೆ ನಡೆಸಿ ಸದಾ ನಿಮ್ಮೊಂದಿಗೆ ನಿಖರ ಮಾಹಿತಿ ಇಟ್ಟುಕೊಂಡು ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ಪ್ರಸ್ತುತದಲ್ಲಿ ಕೆ.ಆರ್ ಪೇಟೆ ತಾಲ್ಲೂಕಿನ 3 ಗ್ರಾಮಗಳಲ್ಲಿ, ನಾಗಮಂಗಲ ತಾಲ್ಲೂಕಿನ 3 ಗ್ರಾಮಗಳಲ್ಲಿ ಮತ್ತು ಮಳವಳ್ಳಿ ತಾಲ್ಲೂಕಿನ 1 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಅದಕ್ಕೆ ಸಮರ್ಪಕವಾಗಿ ಆ ಗ್ರಾಮಗಳಿಗೆ ನೀರನ್ನು ಒದಗಿಸಲಾಗುತ್ತಿದೆ ಎಂದರು.

ಈ ಮೊದಲು ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಯಲ್ಲಿ ಬರದಿಂದ ಉಂಟಾದ ಬೆಳೆ ನಷ್ಟದ ವಿವರವನ್ನು ಕ್ರೋಡೀಕರಿಸಿ ಆ್ಯಪ್ ಮೂಲಕ ಕಳುಸುತ್ತಿದ್ದರು. ರೈತರಿಗೆ ಬರ ಪರಿಹಾರ ಹಣ ಪಾವತಿಯಾಗುತ್ತಿತ್ತು. ಆದರೇ ಈ ಬಾರಿ ಫ್ರೂಟ್ಸ್ ಐ.ಡಿಯಲ್ಲಿ ಹೆಸರು ನೊಂದಾಯಿಸಿಕೊಂಡು ವಿವರ ಅಪ್ ಲೋಡ್ ಮಾಡಿದರೆ ಮತ್ರ ಬರ ಪರಿಹಾರ ಹಣ ಪಾವತಿಸಲು ಸಾಧ್ಯ ಇದನ್ನು ರೈತರಿಗೆ ಮನವರಿಕೆ ಮಾಡಿ ಫ್ರೂಟ್ಸ್ ಐ.ಡಿ ಯಲ್ಲಿ ಹೆಸರು ನೊಂದಾಯಿಸಿ ಎಂದರು.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇಲ್ಲ. ಆದರೂ ವಿ.ಸಿ.ಫಾರಂ, ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿರುವ ಜಮೀನನ್ನು ಗುರುತಿಸಿ ಮೇವು ಬೆಳೆ ಬೆಳೆಯಲು ಯೋಜನೆ ಸಿದ್ಧಪಡಿಸಿ ಎಂದರು.

ತಾಲ್ಲೂಕುವಾರು ಟಾಸ್ಕ್ ಫೋಸ್೯ ಸಮಿತಿಯನ್ನು ಈಗಾಗಲೇ ರಚಿಸಿದ್ದು ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಬೇಕು ಹಾಗೂ ಟಾಸ್ಕ್ ಫೋಸ್೯ ಸಮಿತಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಎಸ್.ಡಿ.ಆರ್.ಎಫ್ ಅನುದಾನದಲ್ಲಿ ಬೋರ್ ವೆಲ್ ಕೊರೆಯಲು, ಪೈಪ್ ಲೈನ್ ವಿಸ್ತರಣೆ ಮುಂತಾದ ಕೆಲಸಗಳಿಗೆ ಹಣ ಪಾವತಿಸಲು ಅವಕಾಶವಿರುವುದಿಲ್ಲ. ಈ ಹಿನ್ನಲೆಯಲ್ಲಿ ಸದರಿ ಕೆಲಸಗಳಿಗೆ 15ನೇ ಹಣಕಾಸು ಯೋಜನೆಯಡಿ ಹಣ ಮೀಸಲಿಡುವುದು ಉತ್ತಮ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರು ಮಾತನಾಡಿ ಟ್ಯಾಂಕರ್ ಹಾಗೂ ಕೃತಕ ಬೋರ್ ವೆಲ್ ಮೂಲಕ ನೀರು ಒದಗಿಸಿದ ಸಂದರ್ಭದಲ್ಲಿ 15 ದಿನದೊಳಗಾಗಿ ಬಿಲ್ ಸಲ್ಲಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!