ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿರುವುದು ಕಡಿಮೆಯಾದರೂ ಕೂಡ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಪಕ್ಷ ಮಾಡಿಕೊಂಡು ಬಂದಿದ್ದು, ಎಂದಿಗೂ ಮಂಡ್ಯಕ್ಕೆ ಮಲತಾಯಿ ಧೋರಣೆ ತೋರಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.
ಪಾಂಡವಪುರ ತಾಲ್ಲೂಕಿನ ಕೆನ್ನಾಳು ಗೇಟ್ ಬಳಿ ಇರುವ ಸಂಪ್ರದಾಯ ಸಮುದಾಯ ಭವನದಲ್ಲಿ ಬಿಜೆಪಿ ಏರ್ಪಡಿಸಿದ್ದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ದೇಶವೇ ನನ್ನ ಕುಟುಂಬ ಈ ದೇಶದಲ್ಲಿರುವ 135 ಕೋಟಿ ಜನರು ನನ್ನ ಕುಟುಂಬ ಸದಸ್ಯರು ಎಂದು ಹೇಳಿದ್ದಾರೆ. ನೀವೆಲ್ಲ ಇಂದು ತೀರ್ಮಾನ ಮಾಡಿ, ಮಂಡ್ಯ ಜಿಲ್ಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 4-5 ಶಾಸಕರನ್ನು ಗೆಲ್ಲಿಸಿ, ಆಮೇಲೆ ಮಂಡ್ಯ ಹೇಗಿರುತ್ತೆ ನೋಡಿ ಎಂದರು.
ಮಂಡ್ಯ ಜಿಲ್ಲೆ ಶ್ರಮಜೀವಿಗಳ ನಾಡು. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಇನ್ನಷ್ಟು ಗೌರವ ಸಿಗುತ್ತದೆ. ನಾರಾಯಣಗೌಡರ ಗೆಲ್ಲಿಸುವ ಮೂಲಕ ಬಿಜೆಪಿಯ ಜಯದ ಓಟವನ್ನು ಆರಂಭಿಸಿದ್ದೀರಿ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ನೋಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದರು.
ಕನ್ನಂಬಾಡಿ ಅಣೆಕಟ್ಟು ಸೋರಿಕೆ ಆಗುತ್ತಿದೆ ಎಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದವರು ಬಸವರಾಜ ಬೊಮ್ಮಾಯಿಯವರು. ಆ ಕ್ಷಣವೇ ಗೇಟು ರಿಪೇರಿ ಮಾಡಿಸಿದರು. ನಮ್ಮ ಪಕ್ಷ ಎಂದಿಗೂ ಮಂಡ್ಯ ಜಿಲ್ಲೆಗೆ ಮಲತಾಯಿ ಧೋರಣೆ ತೋರಿಸಿಲ್ಲ ಎಂದ ಅವರು ನಮ್ಮ ಪಕ್ಷದ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲಿಸಿ ಕೊಡಬೇಕೆಂದು ಮನವಿ ಮಾಡಿದರು.
ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎನ್ನುತ್ತಿದ್ದರು. ಕಾಂಗ್ರೆಸ್ ನಮ್ಮದು ಜಿಲ್ಲೆ ಎನ್ನುತ್ತಿದ್ದರು. ಆದರೆ ಯಾವ ಭದ್ರಕೋಟೆಯೂ ಇಲ್ಲವೇ ಇಲ್ಲ. ಇನ್ನೇನಿದ್ದರೂ ಬಿಜೆಪಿ ಜಿಲ್ಲೆಯಾಗಿ ಪರಿವರ್ತನೆ ಆಗಲಿದೆ ಎಂದರು.
ನಾನು ಶಿವಮೊಗ್ಗ ಉಸ್ತುವಾರಿ ಸಚಿವನಾಗಿದ್ದೇನೆ.ಮಂಡ್ಯ ಜಿಲ್ಲೆಯಲ್ಲಿ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಮಂಡ್ಯ ಜಿಲ್ಲೆಯಲ್ಲಿ ಜಾಸ್ತಿ ಇರುತ್ತೇನೆ ಎಂದು ಶಿವಮೊಗ್ಗ ಜನರಲ್ಲಿ ಕೋರಿಕೊಂಡಿದ್ದೇನೆ. ನನ್ನ ಮನಸ್ಸು ಮಂಡ್ಯ ಜಿಲ್ಲೆಯಲ್ಲಿ ಇದೆ. ಈ ಬಾರಿ ದಕ್ಷಿಣ ಪದವೀಧರ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರನ್ನು ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಮೇಲುಕೋಟೆ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮೈಷುಗರ್ ಅಧ್ಯಕ್ಷ ಶಿವಲಿಂಗೇಗೌಡ, ಕಿಯೋನಿಕ್ಸ್ ನಿರ್ದೇಶಕ ಹೆಚ್.ಎನ್.ಮಂಜುನಾಥ್, ಪಾಂಡವಪುರ ಬಿಜೆಪಿ ಅಧ್ಯಕ್ಷ ಅಶೋಕ್, ಹಿರಿಯ ಮುಖಂಡ ತಮ್ಮಣ್ಣಗೌಡ, ಮಂಗಳಮ್ಮ ಸೇರಿದಂತೆ ಪಕ್ಷದ ಅನೇಕ ಮುಖಂಡರಿದ್ದರು.