Friday, September 20, 2024

ಪ್ರಾಯೋಗಿಕ ಆವೃತ್ತಿ

ಹಿಂದಿನ ಬಿಜೆಪಿ ಸರ್ಕಾರದ ಬಾಕಿ 669.59 ಕೋಟಿ ರೂ. ಹಾಲು ಪ್ರೋತ್ಸಾಹಧನ ಬಿಡುಗಡೆ ಮಾಡಿ : ಸಿಎಂ-ಡಿಸಿಎಂಗೆ ಶಾಸಕ ದಿನೇಶ್‌ ಗೂಳಿಗೌಡ ಮನವಿ

  • ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ ಮನವಿ
  • ಕಳೆದ 7 ತಿಂಗಳಿಂದ ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದ್ದ ಹಿಂದಿನ ಸರ್ಕಾರ
  • ತುರ್ತು ಹಣ ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಶಾಸಕರ ಮನವಿ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಸುಮಾರು 669.59 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನವು ಬಾಕಿ ಇದ್ದು, ಇದನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಮೂಲಕ ರೈತರ ತುರ್ತು ಅವಶ್ಯಕತೆಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಮಾಡಿದರು.

ಇದು ಕೃಷಿ ಚಟುವಟಿಕೆಯ ಕಾಲವಾಗಿದ್ದು, ರೈತರಿಗೆ ಅನೇಕ ಖರ್ಚುಗಳು ಇರುತ್ತವೆ. ಮಕ್ಕಳ ಶೈಕ್ಷಣಿಕ ವರ್ಷವೂ ಆರಂಭವಾಗಿರುವುದರಿಂದ ಅವರ ಶೈಕ್ಷಣಿಕ ಶುಲ್ಕ, ಪುಸ್ತಕ ಇನ್ನಿತರ ಖರ್ಚುಗಳು ಇರುತ್ತವೆ. ಇನ್ನು ಮೇವು, ಪಶು ಆಹಾರ ಕೊಳ್ಳಬೇಕಿರುತ್ತದೆ. ಹೀಗಾಗಿ ತುರ್ತಾಗಿ ಈ ಹಣವನ್ನು ಬಿಡುಗಡೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.

ಮನವಿ ಪತ್ರದಲ್ಲೇನಿದೆ?
ರಾಜ್ಯ ಸರ್ಕಾರ ಹೈನುಗಾರರಿಗೆ ಅನುಕೂಲವಾಗಲು ರೈತರಿಗೆ ಪ್ರತಿ ಲೀಟರ್‌ ಹಾಲಿಗೆ 05 ರೂ. ಪ್ರೋತ್ಸಾಹಧನ ನೀಡುತ್ತಾ ಬಂದಿದೆ. ಇದರಿಂದ ಹೈನುಗಾರರು ಉತ್ಪಾದನೆ ಮಾಡಿದ ಹಾಲಿಗೆ ಲಾಭದಾಯಕ ದರ ಸಿಕ್ಕಿದಂತಾಗುತ್ತದೆ. ಅಲ್ಲದೆ, ನೇರವಾಗಿ ರೈತರ ಖಾತೆಗಳಿಗೆ ಹಣ ಜಮಾ ಆಗುವುದರಿಂದ ಮೇವು, ಪಶು ಆಹಾರ ಕೊಳ್ಳಲು ಈ ಪ್ರೋತ್ಸಾಹಧನವು ಅನುಕೂಲವಾಗುತ್ತದೆ. ಆದರೆ, ಹಿಂದಿನ ಸರ್ಕಾರ ಕಳೆದ 07 ತಿಂಗಳುಗಳಿಂದ ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿರುವುದಿಲ್ಲ. ಇದರಿಂದಾಗಿ ಹೈನುಗಾರರಿಗೆ ತೊಂದರೆಯಾಗುತ್ತಿದೆ.

ಈಗ ಸುಮಾರು 669.59 ಕೋಟಿ ರೂ. ಪ್ರೋತ್ಸಾಹಧನವನ್ನು ಸರ್ಕಾರ ಹೈನುಗಾರರಿಗೆ ವಿತರಿಸಲು ಬಾಕಿ ಇದೆ. ಪ್ರತಿ ಹೈನುಗಾರರಿಗೆ ಕನಿಷ್ಠ 5 ಸಾವಿರದಿಂದ 30 ಸಾವಿರವರೆಗೂ ಪ್ರೋತ್ಸಾಹಧನ ಬರುವುದು ಬಾಕಿ ಉಳಿದುಕೊಂಡಿದೆ. ಪ್ರತಿ ತಿಂಗಳು ಸರ್ಕಾರ ರಾಜ್ಯದ ಎಲ್ಲ ಹೈನುಗಾರರಿಗೆ ಸುಮಾರು 109 ಕೋಟಿ ರೂ. ಹಾಲಿನ ಪ್ರೋತ್ಸಾಹಧನ ನೀಡಬೇಕಿದೆ.

ಸಾಮಾನ್ಯ ವರ್ಗದ ಹೈನುಗಾರರಿಗೆ 2022 ರ ನವೆಂಬರ್‌ನಲ್ಲಿ 109.90 ಕೋಟಿ ರೂ, ಡಿಸೆಂಬರ್‌-109.81 ಕೋಟಿ, 2023ರ ಜನವರಿಯಲ್ಲಿ 107.89 ಕೋಟಿ, ಫೆಬ್ರವರಿ-93.56, ಮಾರ್ಚ್‌-93.89 ಕೋಟಿ, ಏಪ್ರಿಲ್‌-93.67 ಕೋಟಿ ರೂಪಾಯಿಗಳನ್ನು ನೀಡುವುದು ಬಾಕಿ ಇದೆ. ಎಸ್‌ಸಿ ವರ್ಗಕ್ಕೆ 2023ರ ಮಾರ್ಚ್‌ರಲ್ಲಿ-3.08 ಕೋಟಿ ರೂ, ಏಪ್ರಿಲ್‌-3.17 ಕೋಟಿ ರೂ. ಸಹಾಯಧನ ವಿತರಣೆ ಬಾಕಿ ಇದೆ. ಹಾಗೆಯೇ ಕಳೆದ ಹಿಂದಿನ ವರ್ಷಗಳ ಪೈಕಿ ಸಾಮಾನ್ಯ ವರ್ಗದವರಿಗೆ 2019-20 ನೇ ಸಾಲಿನಲ್ಲಿ 12.51 ಕೋಟಿ ರೂ, 2020-21 ನೇ ಸಾಲಿನಲ್ಲಿ 9.64 ಕೋಟಿ ರೂ. 2021-22 ನೇ ಸಾಲಿನಲ್ಲಿ-22.37 ಕೋಟಿ ರೂ. ಸೇರಿದಂತೆ ಒಟ್ಟಾರೆ ಕಳೆದ ಆರ್ಥಿಕ ವರ್ಷದಲ್ಲಿ 624.06 ಕೋಟಿ ರೂ ಹಾಗೂ ಹಿಂದಿನ ವರ್ಷಗಳ ಬಾಕಿ 45.53 ಕೋಟಿ ರೂ. ಸೇರಿ ಒಟ್ಟು 669.59 ಕೋಟಿ ರೂಪಾಯಿಯಷ್ಟು ಸರ್ಕಾರದಿಂದ ಹೈನುಗಾರರಿಗೆ ಸಂದಾಯವಾಗಬೇಕಿದೆ.

ಇದರಲ್ಲಿ ಮಂಡ್ಯ ಜಿಲ್ಲೆಗೆ ಒಟ್ಟು 72.34 ಕೋಟಿ ರೂಗಳು ಹೈನುಗಾರರಿಗೆ ಸಂದಾಯವಾಗುವುದು ಬಾಕಿ ಇದೆ. 2022ರ ನವೆಂಬರ್‌ನಲ್ಲಿ 12.40 ಕೋಟಿ ರೂ, ಡಿಸೆಂಬರ್‌-12.88 ಕೋಟಿ ರೂ, 2023 ಜನವರಿಯಲ್ಲಿ-12.68 ಕೋಟಿ ರೂ, ಫೆಬ್ರವರಿ-10.90 ಕೋಟಿ ರೂ., ಮಾರ್ಚ್‌-11.92 ಕೋಟಿ ರೂ., ಏಪ್ರಿಲ್‌-11.56 ಕೋಟಿ ರೂ. ಪ್ರೋತ್ಸಾಹಧನ ನೀಡುವುದು ಬಾಕಿ ಇದೆ.

ವಿವಿಧ ಕಾರಣಗಳಿಂದ ಪಶು ಆಹಾರ, ಮೇವಿನ ದರ ಏರಿಕೆಯಾಗಿದೆ. ಕೆಲವೆಡೆ ಗಂಟು ರೋಗ ಜಾನುವಾರುಗಳಿಗೆ ಬಾಧಿಸಿ, ಹಾಲಿನ ಇಳುವರಿ ಕೂಡ ಕಡಿಮೆಯಾಗಿದೆ, ಕೆಲವು ಜಾನುವಾರುಗಳು ಮೃತಪಟ್ಟಿವೆ. ಇದರಿಂದ ಹೈನುಗಾರರು ತೀರ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಬಾಕಿ ಇರುವ ಪ್ರೋತ್ಸಾಹಧನವನ್ನು ಸರ್ಕಾರ ಬಿಡುಗಡೆ ಮಾಡಿದಲ್ಲಿ ಹೈನುಗಾರರಿಗೆ ನೆರವಾಗುವುದು. ಮಳೆಗಾಲದಲ್ಲಿ ಪಶು ಆಹಾರ ಖರೀದಿಸಿ ದಾಸ್ತಾನು ಮಾಡಲು, ಅಲ್ಲದೆ, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಪಾವತಿಗೆ, ಅಥವಾ ದೈನಂದಿನ ಇತರ ಖರ್ಚುಗಳಿಗೆ ಅನುಕೂಲವಾಗಲಿದೆ. ರಾಜ್ಯದ ಹೈನುಗಾರರ ಹಿತ ದೃಷ್ಟಿಯಿಂದ ಈ ಪ್ರೋತ್ಸಹಧನವನ್ನು ಅತಿ ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ರೈತ ಸಮೂಹದ ಪರವಾಗಿ ಶಾಸಕ ದಿನೇಶ್‌ ಗೂಳಿಗೌಡ ಅವರು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!