ಹಾಲು ಉತ್ಪಾದಕರಿಗೆ ನನ್ನ ಅವಧಿಯಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೆಎಂಎಫ್ ಮತ್ತು ಮನ್ಮುಲ್ ನಿರ್ದೇಶಕ ವಿ. ಎಂ.ವಿಶ್ವನಾಥ್ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ವಡ್ಡರಹಳ್ಳಿಯ ತೋಟದ ಮನೆಯಲ್ಲಿ ತಮ್ಮ 42ನೇ ಜನ್ಮದಿನದ ಪ್ರಯುಕ್ತ ಜೆಡಿಎಸ್ ಕಾರ್ಯಕರ್ತರು, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು, ಅಭಿಮಾನಿಗಳು ಹಾಗೂ ಸ್ನೇಹಿತರು ಹಮ್ಮಿಕೊಂಡಿದ್ದ ಜನ್ಮದಿನದ ಕಾರ್ಯಕ್ರಮದಲ್ಲಿ ಶುಭಾಶಯ ಸ್ವೀಕರಿಸಿ ಅವರು ಮಾತನಾಡಿದರು.
ಅಪಾರ ಸಂಖ್ಯೆಯಲ್ಲಿ ನನ್ನ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ ಪ್ರತಿಯೊಬ್ಬರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಜನರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುತ್ತೇನೆ. ಇಂದು ಹೈನುಗಾರಿಕೆಯಿಂದ ಹಲವಾರು ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ.ನಾನು ಕೆಎಂಎಫ್ ನಿರ್ದೇಶಕನಾಗಿ ಹಾಲು ಉತ್ಪಾದಕರಿಗೆ ಹತ್ತಾರು ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಮಳವಳ್ಳಿ ಪಟ್ಟಣದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ವಿಶ್ವನಾಥ್ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದರು.
ನೂರಾರು ಸಂಖ್ಯೆಯಲ್ಲಿ ಜನರು ದೇವಸ್ಥಾನ ಮತ್ತು ತಾಲ್ಲೂಕಿನ ವಡ್ಡರಹಳ್ಳಿ ತೋಟದ ಮನೆಗೆ ಆಗಮಿಸಿ ವಿಶ್ವನಾಥ್ ಅವರಿಗೆ ಬೃಹತ್ ಗಾತ್ರದ ಹೂವು ಮತ್ತು ಸೇಬಿನ ಹಾರ ಹಾಕಿ ಅಭಿನಂದಿಸಿದರು.
ದೇವರು ಆಯಸ್ಸು, ಆರೋಗ್ಯದ ಜೊತೆಗೆ ಇನ್ನೂ ಹೆಚ್ಚಿನ ಅಧಿಕಾರ ಕೊಡುವಂತಾಗಲಿ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು, ಅಭಿಮಾನಿಗಳು ಶುಭಕೋರಿದರು.
ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು- ಹಂಪಲು ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಂಸಾಗರ ವೆಂಕಟೇಶ್, ಗಾಜನೂರು ಮಹೇಶ್, ಮಂಜು, ನಂಜುಂಡ ಸ್ವಾಮಿ, ಬಸವಣ್ಣ, ಸಿ.ಕೆ. ಸಿದ್ದೇಗೌಡ, ಮಹೇಶ್, ಲೋಕೇಶ್, ಸಿದ್ದಯ್ಯ, ಸಮಾಜ ಸೇವಕ ತಳಗವಾದಿ ಪ್ರಕಾಶ್, ನಾರಾಯಣ್, ಶಿವಕುಮಾರ್, ಬಸವರಾಜು ಸೇರಿದಂತೆ ಹಲವರಿದ್ದರು.