ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದು, ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವುದಾಗಿ ಸುಧಾಕರ್ ಹೊಸಳ್ಳಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದ ಮೂಲಕ ಸ್ಪಷ್ಟೀಕರಣ ನೀಡಿದ್ದಕ್ಕೆ ಮೈಸೂರಿನ ಸತೀಶ್‌ಗೌಡ ಬೀಡನಹಳ್ಳಿ ಎಂಬ ವ್ಯಕ್ತಿ ಅನಗತ್ಯವಾಗಿ ಕರೆ ಮಾಡಿ, ಕೆಟ್ಟದಾಗಿ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿರುವುದಲ್ಲದೆ 10 ಜನರನ್ನು ಕರೆದುಕೊಂಡು ಬಂದು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿದರು.
ಕಳೆದ ಎರಡು ದಿನಗಳಿಂದ ಮೆಸೇಜ್, ಪೋನ್ ಮಾಡುತ್ತಿದ್ದರಿಂದ, ನಾನೇ ಅವರಿಗೆ ಪೋನ್ ಮಾಡಿ ಮಾಧ್ಯಮದ ಮುಂದೆ ಬನ್ನಿ ಚರ್ಚೆ ಮಾಡೋಣ ಎಂದಾಗ, ಆತ ಮಾಧ್ಯಮದವರೆಲ್ಲ ಬ್ರಾಹ್ಮಣರೇ ಎಂದು ಅವಮಾನ ಮಾಡಿದ್ದಾನೆ. ಹುಡುಗರನ್ನು ಕರೆದುಕೊಂಡು ಬಂದು ಕೊಲೆ ಮಾಡುವುದಾಗಿ ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಿದ್ದಾರೆ.
ಹಾಗಾಗಿ ನನಗೆ ಸಂವಿಧಾನದ ಹಕ್ಕುಗಳ ಅನ್ವಯ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕೆಂದು ಎಸ್ಪಿ ಅವರಿಗೆ ದೂರಿನಲ್ಲಿ ಮನವಿ ಮಾಡಿರುವುದಾಗಿ ಹೇಳಿದರು.
ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸುವುದು ಸಾಂವಿಧಾನಿಕ ಹಕ್ಕು. ಅದನ್ನು ನಾನು ಮಾಡಿದ್ದೇನೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಕುವೆಂಪು ಅವರ ಬಗ್ಗೆ ಅಪಮಾನ ಮಾಡಿದ್ದರೆ ಅದನ್ನು ನಾನು ಖಂಡಿಸುತ್ತೇನೆ ಎಂದರು.