Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಿ.30 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ಮೆಗಾ ಡೈರಿ ಉದ್ಘಾಟನೆ

ಡಿ.30ರಂದು ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾರವರು ಮೆಗಾ ಡೈರಿ ಉದ್ಘಾಟನೆ ಮಾಡಲಿದ್ದಾರೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಡಿಸೆಂಬರ್ 30ರಂದು ಬೆಳಿಗ್ಗೆ 10.30 ಕ್ಕೆ ಗೆಜ್ಜಲಗೆರೆಯ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ ಮೆಗಾ ಡೈರಿ ಉದ್ಘಾಟನೆ ಮಾಡಲಿದ್ದಾರೆ. 12 ಗಂಟೆಗೆ  ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ ಎಂದರು.

ಸ್ವಾತಂತ್ರ್ಯ ಬಂದು 75 ವರ್ಷ ಆಗಿರುವ ಸಂದರ್ಭದಲ್ಲಿ ರೈತರ ಖಾತೆಗೆ ನೇರವಾಗಿ ಹಣ ಹಾಕುವ ಯೋಜನೆ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯದ ಸುಮಾರು 2,60,000ಕ್ಕೂ ಹೆಚ್ಚು ಕುಟುಂಬಗಳ ಖಾತೆಗೆ ಹಣ ಹಾಕುವ ಯೋಜನೆ ಜಾರಿಗೊಳಿಸಿದ್ದಾರೆ.

ದೇಶದ ಸುಮಾರು 80 ಕೋಟಿಗೂ ಹೆಚ್ಚು ಜನರಿಗೆ ಆಹಾರದ ಕೊರತೆ ಉಂಟಾಗಬಾರದೆಂದು ಪ್ರತಿ ತಿಂಗಳು 5 ಕೆಜಿ ಅಕ್ಕಿ ನೀಡುವ ಕಾರ್ಯಕ್ರಮವನ್ನು 2020ರ ಏಪ್ರಿಲ್ ನಿಂದ ಇದುವರೆಗೂ ನೀಡುತ್ತಾ ಬಂದಿದೆ. ಈ ಯೋಜನೆಯನ್ನು ಜನವರಿ 2023 ರಿಂದ ಡಿಸೆಂಬರ್ 2023 ರವರೆಗೆ ಮತ್ತೆ ಪ್ರಧಾನಮಂತ್ರಿ ಮೋದಿಯವರು ವಿಸ್ತರಿಸಿರುವುದು ಸಂತಸದ ಸಂಗತಿ ಎಂದರು.

ಕರ್ನಾಟಕದಲ್ಲಿ ಸುಮಾರು 4.30 ಕೋಟಿ ಜನರಿಗೆ ಆಹಾರ ನೀಡಲಾಗುತ್ತಿದೆ. ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 5 ಲಕ್ಷ ರೂ.ಗಳವರೆಗೆ ಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರಿಗೆ 1.50 ಲಕ್ಷದವರೆಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಜಲಜೀವನ್ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ನೀರು ಸಿಗಲಿದ್ದು, ಸುಮಾರು 30 ಲಕ್ಷ ಕುಟುಂಬಗಳಿಗೆ ಅನಿಲ ಸಿಲಿಂಡರ್ ನೀಡಲಾಗಿದೆ ಎಂದರು.

ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಇಂದು ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳಿದ್ದಾರೆ. ಎಲ್ಲಾ ತಾಲೂಕುಗಳಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪೈಪೋಟಿ ನೀಡುವ ಮಟ್ಟಕ್ಕೆ ಬಿಜೆಪಿ ಬೆಳೆದಿದೆ. ಈ ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯ ನಗರಕ್ಕೆ ಆಗಮಿಸಿ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲಿದ್ದಾರೆ ಎಂದು ತಿಳಿಸಿದರು.

ಕಬ್ಬು ಬೆಲೆ ನಿಗದಿ ಹಾಗೂ ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ, ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರನ್ನು ಬಂಧಿಸಿ ಹಲ್ಲೆ ಮಾಡಿ, ಅಮಿತ್ ಶಾ ಅವರಿಗಾಗಿ ಪೆಂಡಾಲ್ ನಾಶ ಮಾಡಿದ್ದು ಎಷ್ಟು ಸರಿ ಎಂದು ಪತ್ರಕರ್ತರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕೆ. ಗೋಪಾಲಯ್ಯ ಒಂದು ಟನ್ ಕಬ್ಬಿಗೆ 50 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.

ಕಬ್ಬಿನ ಬೆಲೆ ಹೆಚ್ಚಳ ಮಾಡುವ ಸಂಬಂಧ ಡಿಸೆಂಬರ್ 30ರಂದು ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತನಾಡುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ್,ರಾಜ್ಯ ವಕ್ತಾರ ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್,  ಕೆ. ಕಾಳೇಗೌಡ, ಸಿ.ಟಿ. ಮಂಜುನಾಥ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!