Saturday, May 18, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕದ 18,000 ಕೆರೆಗಳಲ್ಲಿ 36,000 ಎಕರೆ ಒತ್ತುವರಿ


  • 30-40% ಕೆರೆಭೂಮಿ ಸರ್ಕಾರಿ ಸಂಸ್ಥೆಗಳಿಂದ ಒತ್ತುವರಿ

  • ಬೆಂಗಳೂರಿನಲ್ಲಿ 80% ಕ್ಕಿಂತ ಹೆಚ್ಚು ಜಲಮೂಲಗಳ ಒತ್ತುವರಿ

ರಾಜ್ಯದಲ್ಲಿ ಸಾವಿರಾರು ಕೆರೆಗಳ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಹಲವಾರು ಕೆರೆಗಳ ಜಲಮೂಲಗಳು ಕುಗ್ಗಿವೆ. ರಾಜ್ಯ ಸರ್ಕಾರದ ಲೆಕ್ಕ ಪರಿಶೋಧನೆಯ ಪ್ರಕಾರ, ಸರ್ವೇ ಮಾಡಲಾಗಿರುವ 18,885 ಕೆರೆಗಳ ಒಟ್ಟು 36,102 ಎಕರೆ ಒತ್ತುವರಿಯಾಗಿದೆ. ಇನ್ನೂ 21,598 ಕೆರೆಗಳ ಸರ್ವೆ ಮಾಡುವುದು ಬಾಕಿ ಇದ್ದು, ಒತ್ತುವರಿ ಪ್ರಮಾಣ ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 2021ರಲ್ಲಿ ಕರ್ನಾಟಕ ಸಾರ್ವಜನಿಕ ಭೂ ನಿಗಮ (ಕೆಪಿಎಲ್‌ಸಿ) ಹಾಗೂ ಕರ್ನಾಟಕ ಟ್ಯಾಂಕ್ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಟಿಸಿಡಿಎ) ಸಮೀಕ್ಷೆಯನ್ನು ನಡೆಸಿವೆ. ಒತ್ತುವರಿ ಮಾಡಿಕೊಂಡಿರುವ ಒಟ್ಟು ಭೂಮಿಯಲ್ಲಿ 30-40% ಕೆರೆಭೂಮಿಯನ್ನು ಸರ್ಕಾರಿ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿವೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಸಮೀಕ್ಷೆಗೆ ಒಳಪಟ್ಟಿರುವ 18,885 ಕೆರೆಗಳಲ್ಲಿ 7,600ಕ್ಕೂ ಹೆಚ್ಚು ಕೆರೆಗಳು ಒತ್ತುವರಿಗೆ ತುತ್ತಾಗಿವೆ. ಅವುಗಳಲ್ಲಿ ಬೆಂಗಳೂರಿನ 734 ಕೆರೆಗಳು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 643 ಕೆರೆಗಳು ಸೇರಿವೆ.

ಶೇಕಡಾವಾರು ಒತ್ತುವರಿಯನ್ನು ನೋಡಿದರೆ, ಬೆಂಗಳೂರಿನಲ್ಲಿ 80% ಕ್ಕಿಂತ ಹೆಚ್ಚು ಜಲಮೂಲಗಳು ಒತ್ತುವರಿಯಾಗಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಿಸ್ತೀರ್ಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಒತ್ತುವರಿಯಾಗಿದೆ (ಸಮೀಕ್ಷೆಗೊಳಪಟ್ಟ 710 ಕೆರೆಗಳಲ್ಲಿ 643 ಕೆರೆಗಳ 6,000ಕ್ಕೂ ಹೆಚ್ಚು ಎಕರೆ). ಒತ್ತುವರಿಯನ್ನು ತೆರವುಗೊಳಿಸಿದ ಜಾಗದ ಸುತ್ತ ಬೇಲಿ ಹಾಕುವ ಮೂಲಕ ಭೂಮಿಯನ್ನು ನಿರ್ವಹಣೆ ಮಾಡುವುದಾಗಿ ಕೆಪಿಎಲ್‌ಸಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

“ಲೋಕಾಯುಕ್ತದ ಸೂಚನೆಯಂತೆ 2022ರ ಜನವರಿವರೆಗೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೆವು. ಬಳಿಕ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಲ್ಲೂ ಕೆರೆ ಸಂರಕ್ಷಣಾ ಸಮಿತಿಗಳನ್ನು ರಚಿಸಿಲಾಗಿತ್ತು. ಸಮಿತಿಗಳು ತ್ವರಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಾಸಿಕ ಗುರಿಗಳನ್ನು ತಲುಪಲು ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ನಡೆದಿದೆ” ಎಂದು ಕೆಟಿಸಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

“7,663 ಕೆರೆಗಳು ಒತ್ತುವರಿಯಾಗಿದ್ದು, 3,494 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. 36 ಸಾವಿರಕ್ಕೂ ಹೆಚ್ಚು ಎಕರೆ ಒತ್ತುವರಿಯಾಗಿದ್ದು, 19,471 ಎಕರೆಯನ್ನು ವಶಕ್ಕೆ ಪಡೆದು, ತಂತಿ ಬೇಲಿ ಹಾಕಿದ್ದೇವೆ. ಶೀಘ್ರದಲ್ಲೇ 4 ಸಾವಿರಕ್ಕೂ ಹೆಚ್ಚು ಕೆರೆಗಳ ಒತ್ತುವರಿ ತೆರವುಗೊಳಿಸಲಾಗುವುದು,’’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸರ್ವೇಯರ್‌ಗಳ ಕೊರತೆಯಿಂದ 21,598 ಕೆರೆಗಳ ಒತ್ತುವರಿ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದು, ಅದನ್ನು ಆದ್ಯತೆ ಮೇಲೆ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಜಲಾನಯನ ಒತ್ತುವರಿ ಕುರಿತು ಚರ್ಚೆ ನಡೆದಾಗಲೆಲ್ಲ ಬೆಂಗಳೂರು ಕೇಂದ್ರ ಸ್ಥಾನ ಪಡೆಯುತ್ತಿದ್ದರೂ, ಮೈಸೂರಿನಲ್ಲಿ ಅತಿ ಹೆಚ್ಚು ಕೆರೆಗಳು ಒತ್ತುವರಿಯಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಮೈಸೂರು ಜಿಲ್ಲೆಯ 2,991 ಕೆರೆಗಳ ಪೈಕಿ 1,334 ಕೆರೆಗಳು ಒತ್ತುವರಿಯಾಗಿವೆ. ನಂತರದ ಸ್ಥಾನದಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿವೆ ಎಂದು ಸಮೀಕ್ಷೆ ಹೇಳಿದೆ.

ಖಾಸಗಿ ಬಡಾವಣೆಗಳು, ಖಾಸಗಿ ಕಟ್ಟಡಗಳು, ಕೃಷಿ ಕ್ಷೇತ್ರಗಳು, ಸ್ಮಶಾನಗಳು, ರಸ್ತೆಗಳು, ಆಟದ ಮೈದಾನಗಳು ಮತ್ತು ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕಾಗಿ ಕೆರೆ ಭೂಮಿ ಒತ್ತುವರಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!