Friday, September 20, 2024

ಪ್ರಾಯೋಗಿಕ ಆವೃತ್ತಿ

16.77 ಲಕ್ಷ ರೈತರಿಗೆ ₹1,970 ಕೋಟಿ ಬೆಳೆ ವಿಮೆ ಪರಿಹಾರ: ಸಚಿವ ಚಲುವರಾಯಸ್ವಾಮಿ

ರಾಜ್ಯದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2023-24 ನೇ ಸಾಲಿನಲ್ಲಿ 16.77 ಲಕ್ಷ ರೈತರಿಗೆ 1970.39 ಕೋಟಿ ಬೆಳೆ ವಿಮಾ ಪರಿಹಾರ ಇತ್ಯರ್ಥ ಪಡಿಸಲಾಗಿದೆ. 2024-25ನೇ ಸಾಲಿಗೆ ಕಪ್ ಮತ್ತು ಕ್ಯಾಪ್ ಮಾದರಿ ಅಳವಡಿಸಿ ಟೆಂಡರ್ ಕರೆಯಲಾಗಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನ ಸಭೆಯಲ್ಲಿ ನವಲಗುಂದ ಕ್ಷೇತ್ರದ ಶಾಸಕರಾದ ಕೋನರೆಡ್ಡಿ ಎನ್ .ಹೆಚ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು 2016-17 ನೇ ಸಾಲಿನಿಂದ ಈವರಗೆ ಒಟ್ಟು 89.10 ಲಕ್ಷ ರೈತರಿಗೆ ರೂ.10854.74 ಕೋಟಿ ಬೆಳೆ ವಿಮೆಯನ್ನು ಇತ್ಯರ್ಥಪಡಿಸಲಾಗಿದೆ. ಕಳೆದ ವರ್ಷ ತೀವ್ರ ಬರ ಉಂಟಾದ ಹಿನ್ನಲೆಯಲ್ಲಿ ಹಿಂದೆಂದಿಗಿಂತ ಗರಿಷ್ಠ ಪ್ರಮಾಣದ ವಿಮಾ ಪರಿಹಾರ ಇತ್ಯರ್ಥಪಡಿಸಲಾಗಿದೆ ಎಂದು ಸಚಿವರು ಹೇಳಿದರು.

2016ರ ಹಿಂಗಾರು ಹಂಗಾಮಿನಿಂದ ಕ್ಷೇತ್ರಾಧಾರಿತ ಹಾಗೂ ಇಳುವರಿಯಾಧಾರಿತ ಪಿ.ಎಂ.ಎಫ್.ಬಿ.ವೈ ಯೋಜನೆ ಜಾರಿಯಲ್ಲಿದೆ. ಮಾರ್ಗಸೂಚಿಯ ಅನುಸಾರ ಹೋಬಳಿ / ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯವರು ಕೈಗೊಳ್ಳುವ ಬೆಳೆ ಕಟಾವು ಪ್ರಯೋಗಗಳಿಂದ ಬಂದ ವಾಸ್ತವಿಕ ಇಳುವರಿ ಪರಿಶೀಲಿಸಿ ಕೊರತೆಯ ಅನುಗುಣವಾಗಿ ಬೆಳೆ ವಿಮೆ ನಷ್ಟ ಪಾವತಿಸಲಾಗುತ್ತಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು.

ಪ್ರಕೃತಿ ವಿಕೋಪಗಳಾದ ಅಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘ ಸ್ಪೋಟ, ಗುಡುಗು, ಮಿಂಚುಗಳಿಂದಾಗುವ ಬೆಂಕಿ ಅವಗಡಗಳಿಂದ ಉಂಟಾಗುವ ನಷ್ಟವನ್ನು ನಿರ್ಧರಿಸಿ ಬೆಳೆ ವಿಮೆ ಪರಿಹಾರವನ್ನು ಇತ್ಯರ್ಥಪಡಿಸಿ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ಒದಗಿಸಲಾಗುವುದು ಎಂದು ಕೃಷಿ ಸಚಿವರು ವಿವರಿಸಿದರು.

2024-25 ಮತ್ತು 2025-26ನೇ ಸಾಲುಗಳಿಗೆ ಕರ್ನಾಟಕ ರೈತರ ಸುರಕ್ಷಾ ಪಸಲ್ ಭಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಮಾ ಸಂಸ್ಥೆಯನ್ನು ಆಯ್ಕೆ ಮಾಡುವ ಸಲುವಾಗಿ ಇ-ಟೆಂಡರ್ ಕರೆಯಲಾಗಿದ್ದು ಆರ್ಥಿಕ ಇಲಾಖೆಯ ಆದೇಶದಂತೆ 2024-25 ಹಾಗೂ 2025-26ನೇ ಸಾಲಿಗೆ ಮಾತ್ರ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕಪ್ ಅಂಡ್ ಕ್ಯಾಪ್ ಮಾದರಿ ಅಳವಡಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ.

ಕೇಂದ್ರ ಸರ್ಕಾರದಿಂದ ಒಟ್ಟು 18 ವಿಮಾ ಸಂಸ್ಥೆಗಳು ಎಂಪ್ಯಾನಲ್ ಆಗಿದ್ದು, ಇದರಲ್ಲಿ 5 ಸರ್ಕಾರಿ ಸಂಸ್ಥೆ ಹಾಗೂ 13 ಖಾಸಗಿ ಸಂಸ್ಥೆಗಳು ಒಳಗೊಂಡಿವೆ. ಮಾರ್ಗಸೂಚಿ ಅನ್ವಯ ಯೋಜನೆ ಅನುಷ್ಠಾನಕ್ಕೆ ಎಂಪ್ಯಾನಲ್ ಪಟ್ಟಿಯಲ್ಲಿರುವ ಎಲ್ಲಾ ವಿಮಾ ಸಂಸ್ಥೆಗಳಿಗೆ ಟೆಂಡರ್ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಟೆಂಡರ್ ಪ್ರಕ್ರಿಯೆಯಲ್ಲಿ ಅತೀ ಕಡಿಮೆ ಪ್ರೀಮಿಯಂ ದರದಲ್ಲಿ ಕ್ವೋಟ್ ಮಾಡಿರುವ ವಿಮಾ ಸಂಸ್ಥೆಯನ್ನು ಯೋಜನೆಯ ಅನುಷ್ಠಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ಮುಂದಿನ 2 ಸಾಲುಗಳಿಗೆ ರಾಜ್ಯದ 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಸರ್ಕಾರಿ ಸಂಸ್ಥೆಗಳಾದ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಹಾಗೂ ಓರಿಯಂಟಲ್ ಜನರಲ್ ಇನ್ಸೂರೆನ್ಸ್ ಸಂಸ್ಥೆಗಳು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ ಉಳಿದ 13 ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆಗಳು ಅನುಷ್ಠಾನಗೊಳಿಸುತ್ತವೆ ಎಂದು ಎನ್. ಚಲುವರಾಯಸ್ವಾಮಿ ಹೇಳಿದರು

80 : 110 ಮಾದರಿ ಅಳವಡಿಸುವುದರಿಂದ ವಿಮಾ ಸಂಸ್ಥೆಗಳು ನಿಗಧಿಪಡಿಸಿರುವ ಪ್ರೀಮಿಯಂ ದರಗಳು ಅತೀ ಕಡಿಮೆಯಾಗಿವೆ. ಹಿಂದಿನ ಸಾಲಿನಲ್ಲಿ ಇದ್ದ ಪ್ರೀಮಿಯಂ ಸರಾಸರಿ ಶೇಕಡಾ 19.41 ಇದ್ದು, ಪ್ರಸ್ತುತ ಶೇಕಡಾ 8.08ಕ್ಕೆ ಇಳಿಕೆಯಾಗಿದೆ ಎಂದು ಅವರು ಅಂಕಿ ಅಂಶ ನೀಡಿದರು

80: 110 (ಕಪ್ ಮತ್ತು ಕ್ಯಾಪ್ )ಮಾದರಿಯಲ್ಲಿ ಒಂದು ವರ್ಷ ಒಂದು ಹಂಗಾಮಿನಲ್ಲಿ ವಿಮಾ ಸಂಸ್ಥೆಯವರು ಪಡೆದು ಒಟ್ಟು ವಿಮಾ ಕಂತಿನ ಮೊತ್ತ ಇತ್ಯರ್ಥಪಡಿಸಿದ ಪರಿಹಾರದ ಅನುಪಾತದಲ್ಲಿ ಶೇಕಡಾ 80 ಕ್ಕಿಂತ ಕಡಿಮೆಯಿದ್ದಾಗ ವಿಮಾ ಸಂಸ್ಥೆಯವರು ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಬೇಕಾಗುತ್ತದೆ. ಅಂದರೆ ವಿಮಾ ಸಂಸ್ಥೆ ಶೇಕಡಾ 20 ರಷ್ಟು ಮಾತ್ರ ಲಾಭಾಂಶ ಹೊಂದಲು ಅವಕಾಶವಿದ್ದು, ಶೇಕಡಾ 110 ಕ್ಕಿಂತ ಹೆಚ್ಚು ಇದ್ದಾಗ ರಾಜ್ಯ ಸರ್ಕಾರವು ವಿಮಾ ಸಂಸ್ಥೆಯವರಿಗೆ ಹಣ ನೀಡಬೇಕಾಗುತ್ತದೆ. ಸದರಿಯವರ ಮಾದರಿಯಲ್ಲಿ ಲಾಭ ನಷ್ಟ ಸಂಪೂರ್ಣ ರಾಜ್ಯ ಸರ್ಕಾರದ್ದಾಗಿರುತ್ತದೆ ಎಂದು ಕೃಷಿ ಸಚಿವರು ಸಭೆಗೆ ವಿವರ ಒದಗಿಸಿದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!