Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಚಿವ ನಾರಾಯಣಗೌಡ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ಕೆ.ಬಿ.ಚಂದ್ರಶೇಖರ್

ಸಚಿವ ನಾರಾಯಣಗೌಡನಿಗೆ ಸ್ವಲ್ಪವೂ ಮಾನ ಮರ್ಯಾದೆಯಿಲ್ಲ, ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡದ ನಾರಾಯಣಗೌಡ ಕೆ.ಆರ್.ಪೇಟೆ ಜನರು ರೊಚ್ಚಿಗೇಳುವ ಮೊದಲು ಶಾಸಕ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಲಿ. ಆತ ಕಮಿಷನ್ ದಂಧೆ ನಡೆಸಲು ಮುಂಬೈನಿಂದ ಬಂದಿರುವ ಗಿರಾಕಿ ಎಂದು ಸಚಿವ ನಾರಾಯಣಗೌಡ ವಿರುದ್ದ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು ಸಚಿವ ನಾರಾಯಣಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೆಸಿಎನ್‌ ಕೆ.ಆರ್.ಪೇಟೆ ಕ್ಷೇತ್ರದ ಜನತೆಗೆ ಮಂಕುಬೂದಿ ಎರಚಿ ವಾಮಮಾರ್ಗದಲ್ಲಿ ಶಾಸಕನಾಗಿದ್ದಾನೆ. ತಾಲ್ಲೂಕಿನ ಅಭಿವೃದ್ಧಿಗೆ ಈತನ ಕೊಡುಗೆ ಶೂನ್ಯವಾಗಿದೆ‌. ಈತ ತಾಲ್ಲೂಕಿನ ಅಭಿವೃದ್ಧಿಗೆ ಗುರುತು ಮಾಡಿರುವ ಒಂದೇ ಒಂದು ಕೆಲಸ ಹೇಳಲಿ ಎಂದು ಕೆ.ಬಿ.ಚಂದ್ರಶೇಖರ್ ಸವಾಲ್ ಹಾಕಿದರು.

ಕಳೆದ 10 ವರ್ಷಗಳಿಂದ ಕ್ಷೇತ್ರದ ಶಾಸಕನಾಗಿ, ರಾಜ್ಯದ ಸಚಿವನಾಗಿರುವ ನಾರಾಯಣಗೌಡ ಒಬ್ಬ ಬೇಜವಾಬ್ಧಾರಿ ಸಚಿವನಾಗಿದ್ದಾನೆ. ಅನುದಾನ ತಂದು ಅಭಿವೃದ್ಧಿ ಮಾಡಲು ಸಂಪೂರ್ಣ ವಿಫಲನಾಗಿದ್ದಾನೆ ಕೆಸಿಎನ್ ವಿರುದ್ಧ ಎಂದು ಹರಿಹಾಯ್ದರು. ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ಈತನ ಕೊಡುಗೆ ಶೂನ್ಯ. ಕೇವಲ ಕಮಿಷನ್ ದಂಧೆ ಮಾಡಿಕೊಂಡು, ಶೋಕಿ ಮಾಡುತ್ತಿರುವ ಈ ಸೋಮಾರಿ ಸಚಿವನಿಗೆ ತಾಲ್ಲೂಕಿನ ಪ್ರಜ್ಞಾವಂತ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಗೌಡ ಗುದ್ದಲಿಪೂಜೆ ಮಾಡುವ ನಾಟಕವಾಡುತ್ತಿದ್ದಾನೆ. ಈತನ ವಿರುದ್ಧ ಕಾಂಗ್ರೆಸ್ ಪಕ್ಷವು ಜನಾಂದೋಲನ ರೂಪಿಸಿ ಹೋರಾಟ ನಡೆಸಲಿದೆ. ತಾಲ್ಲೂಕಿನ ಜನತೆಗೆ ಮಂಕುಬೂದಿ ಎರಚಿ ಒಂದಲ್ಲಾ, ಎರಡಲ್ಲ ಮೂರು ಅವಧಿಗೆ ಶಾಸಕನಾಗಿ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿರುವ ನಾರಾಯಣಗೌಡನ ಜನವಿರೋಧಿ ಆಡಳಿತದ ವಿರುದ್ಧ ಜನತೆ ಭ್ರಮನಿರಸನಗೊಂಡಿದ್ದಾರೆ ಎಂದು ಆರೋಪಿಸಿದರು.

ಕೆ.ಆರ್.ಪೇಟೆ ತಾಲ್ಲೂಕು ಕಛೇರಿಯು ಭ್ರಷ್ಠಾಚಾರದ ಕೊಂಪೆಯಾಗಿದೆ. ಕ್ಷೇತ್ರದ ಬಡಜನತೆಗೆ ಅಕ್ರಮ-ಸಕ್ರಮ ಯೋಜನಾ ಸಮಿತಿ ಸಭೆ ನಡೆಸಿ ಕೃಷಿ ಭೂಮಿಯನ್ನು ವಿತರಿಸಲು ಮುಂದಾಗದ ಈತ ತಾಲ್ಲೂಕು ಕಂಡ ಅತ್ಯಂತ ಕೆಟ್ಟ ಹಾಗೂ ಭ್ರಷ್ಟ ಶಾಸಕನಾಗಿದ್ದಾನೆ. ಈತನಿಗೆ ಕಿಂಚಿತ್ತೂ ಮಾನ ಮರ್ಯಾದೆಯೇ ಇಲ್ಲ. ಕೆ.ಆರ್.ಪೇಟೆ ಶಾಸಕನಾಗಿ ತಾಲ್ಲೂಕಿನ ಅಭಿವೃದ್ಧಿಯನ್ನು ಕಡೆಗಣಿಸಿ ಮುಂಬೈನಿಂದ ಬಂದು ಕಮಿಷನ್ ದಂಧೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾನೆ. ಕೆಟ್ಟು ಕೆರ ಹಿಡಿದಿರುವ ಶ್ರೀರಂಗಪಟ್ಟಣ ಅರಸೀಕೆರೆ ರಾಜ್ಯ ಹೆದ್ದಾರಿಯಲ್ಲಿ ಮಾರುದ್ದ ಬಿದ್ದಿರುವ ಗುಂಡಿಗಳೇ ಈತನ ಆಡಳಿತದ ಕಾರ್ಯವೈಖರಿಗೆ ಜೀವಂತ ಸಾಕ್ಷಿಯಾಗಿವೆ ಎಂದರು.

ಒಬ್ಬ ಶಾಸಕನಾಗಿ, ರಾಜ್ಯದ ಸಚಿವನಾಗಿ ನೀನು ತಾಲ್ಲೂಕಿನ ಅಭಿವೃದ್ಧಿಗೆ ಕೈಗೊಂಡಿರುವ ಒಂದೇ ಒಂದು ಕೊಡುಗೆ, ಮಾಡಿರುವ ಕೆಲಸ ಏನೆಂದು ಹೇಳು. ತಾಲ್ಲೂಕಿನ ಜನತೆ ನಿನ್ನನ್ನು ಎಂದೂ ಕ್ಷಮಿಸುವುದಿಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಕನ್ನಡ ರಾಜ್ಯೋತ್ಸವ ಅನ್ನಲು ಕರ್ನಾಟಕ ರಾಜ್ಯ ಶವ ಎಂದೇಳುವ ಸಚಿವ 

ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ಶೇ.100ರಷ್ಟು ಕನ್ನಡ ಮಾತನಾಡುವ ಮಂಡ್ಯ ಜಿಲ್ಲೆಯ ಸಚಿವನಾಗಿರುವ ಕೆಸಿಎನ್ ಗೆ ಕನ್ನಡ ಭಾಷೆಯೇ ಸರಿಯಾಗಿ ಮಾತನಾಡುವ ಬರುವುದಿಲ್ಲ. ಕನ್ನಡ ರಾಜ್ಯೋತ್ಸವ ಅನ್ನಲು ಕರ್ನಾಟಕ ರಾಜ್ಯ ಶವ ಎಂದೇಳುವ ಮೂಲಕ ಜಿಲ್ಲೆಯ ಮಾನ ಕಳೆಯುತ್ತಿದ್ದಾರೆ. ಇವರು ಯಾರಾದರೂ ಕನ್ನಡ ಶಿಕ್ಷಕರ ಬಳಿ ಪಾಠ ಕಲಿತುಕೊಂಡು ಕನ್ನಡ ಭಾಷೆಯನ್ನು ಉತ್ತಮವಾಗಿ ಮಾತನಾಡುವುದನ್ನು ಕಲಿಯಲಿ ಎಂದು ಛೇಡಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಎಸ್.ಎಂ.ಲಿಂಗಪ್ಪ, ಎಂ.ಕೆ.ಬೊಮ್ಮೇಗೌಡ, ಮಾಜಿ ಸ್ಪೀಕರ್ ಕೃಷ್ಣ ಅವರಂತಹ ಸರಳ ಸಜ್ಜನ ವ್ಯಕ್ತಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ತಾಲ್ಲೂಕಿನ ಜನತೆ ಕಡು ಭ್ರಷ್ಢ, ಕಮಿಷನ್ ದಂಧೆಯ ಜನಕ, ಮುಂಬೈ ವಾಲ ನಾರಾಯಣಗೌಡ ಅವರನ್ನು ಆಯ್ಕೆ ಮಾಡಿದ ಪಶ್ಚಾತ್ತಾಪಪಡುತ್ತಿದ್ದಾರೆ. ಶಾಸಕನಾಗಿ, ಸಚಿವರಾಗಿ ನಾರಾಯಣಗೌಡರ ಕೊಡುಗೆ ಶೂನ್ಯ ಎಂದು ಕಿಡಿಕಾರಿದರು.

ಕೆ.ಆರ್.ಪೇಟೆಗೆ ಸೀಮಿತವಾಗಿರುವ ಮಂತ್ರಿ

ಕೇವಲ ಕೆ.ಆರ್.ಪೇಟೆಗೆ ಸೀಮಿತವಾಗಿ ಮಂತ್ರಿಯಾಗಿರುವ ನಾರಾಯಣಗೌಡ ಕಮಿಷನ್ ದಂಧೆ ನಡೆಸುತ್ತಿರುವುದನ್ನು ಬಿಟ್ಟರೆ ಬೇರೇನೂ ಅಭಿವೃದ್ಧಿ ಮಾಡಿಲ್ಲ. ಕ್ಷೇತ್ರದ ಜನತೆ ಜನವಿರೋಧಿ ಶಾಸಕರಾದ ನಾರಾಯಣಗೌಡ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮಂಡ್ಯದ ಮೈಷುಗರ್ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಹಾಳು ಮಾಡಿದ ಕೀರ್ತಿಯು ನಾರಾಯಣಗೌಡ ಅವರಿಗೆ ಸಲ್ಲುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರಕುಮಾರ್, ಕಾಂಗ್ರೆಸ್ ನಾಯಕ ಬೂಕನಕೆರೆ ವಿಜಯರಾಮೇಗೌಡ, ಕೆಯುಐಡಿಎಫ್ ಸಿ ಮಾಜಿ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಮಾಜಿ ಶಾಸಕ ಬಿ.ಪ್ರಕಾಶ್ ಇತರರು ಸಚಿವ ನಾರಾಯಣಗೌಡ ಅವರ ಕಾರ್ಯವೈಖರಿ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಜಿ.ಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ, ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ರಮೇಶ್, ಮುಖಂಡರಾದ ಡಾ.ರಾಮಕೃಷ್ಣೇಗೌಡ, ರುಕ್ಮಾಂಗದ, ವೆಂಕಟಪ್ಪ, ಚೇತನಾ ಮಹೇಶ್, ಬಸ್ತಿರಂಗಪ್ಪ, ರವೀಂದ್ರಬಾಬು, ಮಹದೇವಪ್ರಸಾದ್, ಶಿವಣ್ಣ, ರಾಜಯ್ಯ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!