ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಶ್ರೇಷ್ಠ ಸಂವಿಧಾನವನ್ನು ಕೋಮುವಾದಿಗಳು ಬದಲಾಯಿಸುವುದಕ್ಕಾಗಿ ಧರ್ಮ ಹಾಗೂ ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೀರ್ ಸಾಧಿಕ್ ಕೆಲಸವನ್ನು ಮಾಡುತ್ತಿದ್ದಾರೆ, ಅಂತವರ ಬಗ್ಗೆ ಸಾರ್ವಜನಿಕರು ಹಾಗೂ ಯುವಕರು ಎಚ್ಚರ ವಹಿಸಬೇಕೆಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರಗೋಡು ಹೋಬಳಿ ಕೇಂದ್ರದಲ್ಲಿ ಭಾನುವಾರ ಸಂಜೆ ನಡೆದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ತಿರುಚುವ ಕೆಲಸಕ್ಕೆ ಕೈ ಹಾಕಿರುವ ಕೋಮುವಾದಿಗಳು ಜಾತಿ ಜಾತಿಗಳ ನಡುವೆ ಗಲಭೆಯೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ನಾವೇ ಹೊಡೆದಾಡಿಕೊಳ್ಳುವಂತೆ ಮಾಡುತ್ತಿದ್ದಾರೆ, ಇಂತಹ ಸಮಾಜಘಾತುಕರ ಬಗ್ಗೆ ಎಚ್ಚರವಹಿಸಬೇಕೆಂದು ತಿಳಿಸಿದರು.
ಅಂಬೇಡ್ಕರ್ ಅವರನ್ನು ಅರ್ಥೈಸಿಕೊಂಡು ಯುವ ಜನರು ಇಂದು ಐಎಎಸ್, ಐಪಿಎಸ್ ಹಾಗೂ ಐಆರ್’ಎಸ್ ನಂತರ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ಧಾರೆ. ಪಕ್ಕದ ಕೊಮ್ಮೇರಹಳ್ಳಿಯ ಯುವಕರೊಬ್ಬರು ಐಆರ್’ಎಸ್ ಹುದ್ದೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದರು.

ಅಂಬೇಡ್ಕರ್ ಅವರು ಎಲ್ಲ ಧರ್ಮಿಯರಿಗೆ ಅನ್ವಯವಾಗುವಂತೆ ಸಂವಿಧಾನ ರಚಿಸಿ ಕೊಟ್ಟಿದ್ಧಾರೆ. ಅವರಿಗೆ ಹಿಂದೂ, ಮುಸ್ಲಿಂ, ಸಿಖ್, ಪಾರ್ಸಿ, ಜೈನ್, ಬೌದ್ದ ಎನ್ನದೇ ಎಲ್ಲ ಧರ್ಮಿಯರು ಗೌರವ ಸಲ್ಲಿಸಬೇಕು, ಅಂಬೇಡ್ಕರ್ ಜಯಂತಿ ಕೇಂದ್ರ ಏ.14ಕ್ಕೆ ಮಾತ್ರ ಸೀಮಿತವಾಗಬಾರದು, ವರ್ಷದ ಎಲ್ಲ ದಿನವು ಆಚರಣೆಯಾಗಬೆಕೆಂದು ತಿಳಿಸಿದರು.
ಕೆರಗೋಡಿನ ಕಾಲೋನಿ ಅಭಿವೃದ್ದಿ ಇದುವರೆಗೆ ಒಂದೂವರೆ ಕೋಟಿ ರೂ. ವೆಚ್ಚ ಮಾಡಲಾಗಿದೆ, ಕೆರಗೋಡಿನ ಅಂಬೇಡ್ಕರ್ ಭವನದ ಕಾಮಗಾರಿ ಸ್ಥಗಿತವಾಗಿದ್ದು, ಅದರ ಮುಂದವರಿಗೆ ಕಾಮಗಾರಿಗೆ 1 ವರ್ಷದಲ್ಲಿ ಅಗತ್ಯ ಅನುದಾನ ಒದಗಿಸುತ್ತೇವೆ. ಅಲ್ಲದೇ ಪಂಚಲಿಂಗೇಶ್ವರ ದೇವಾಲಯದ ಅಭಿವೃದ್ದಿ 3 ವರ್ಷಗಳಲ್ಲಿ 5 ಕೋಟಿ ರೂ. ವೆಚ್ಚ ಮಾಡಿ, ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಲಾಗುವುದು ಎಂದರು.
ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾಧಿಕಾರಿ ಡಾ.ಕುಮಾರ್, ಮೈಷುಗರ್ ಎಂ.ಡಿ. ಮಂಗಲ್ ದಾಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು. ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ಮುದ್ದನಘಟ ಮಹಾಲಿಂಗೇಗೌಡ, ಮಂಡ್ಯ ಜಿಲ್ಲಾ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಕೆ ನಾಗೇಶ್, ಎಸ್ ಪಿ ನಾಗರಾಜು, ಮದನ್, ಪ್ರಸನ್ನ ಕುಮಾರ್ ಸೇರಿದಂತೆ ಗ್ರಾಮಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಕೆರೆಗೋಡು ಸೋಮಶೇಖರ್ ಸ್ವಾಗತಿಸಿದರು.




