ಜೂನ್.20 ರಂದು ಮಂಡ್ಯ ಸರ್ಕಾರಿ ಐಟಿಐ ಕಾಲೇಜಿನ ಉದ್ಘಾಟನೆಯ ಸಂದರ್ಭದಲ್ಲಿ ಪ್ರಾಂಶುಪಾಲ ನಾಗಾನಂದ್ ಅವರ ಮೇಲೆ ನಡೆದ ಹಲ್ಲೆ ಘಟನೆಯು ನನ್ನ ಮನಸ್ಸಿಗೆ ನೋವು ತಂದಿದ್ದು, ಇದಕ್ಕಾಗಿ ವಿಷಾದ ವ್ಯಕ್ತಪಡಿಸುವುದಾಗಿ ಶಾಸಕ ಎಂ.ಶ್ರೀನಿವಾಸ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಂಡ್ಯದ ಅಭಿವೃದ್ಧಿ ಮಾತ್ರವೇ ನನ್ನ ಮನದಲ್ಲಿದ್ದು ನನಗೆ ಯಾರ ಮೇಲೂ ದ್ವೇಷ ಇರುವುದಿಲ್ಲ. ಅಲ್ಲದೇ ನಾಗಾನಂದರವರು ನನಗೆ ಬಹಳ ಆತ್ಮೀಯರಾಗಿದ್ದು ನನ್ನ ಅವರ ನಡುವೆ ಯಾವುದೇ ವೈಮನಸ್ಸಿಲ್ಲ.
ಅವರನ್ನು ನಾಗಮಂಗಲದಿಂದ ಮಂಡ್ಯಕ್ಕೆ ನಾನೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವರ್ಗಾಯಿಸಿಕೊಂಡಿದ್ದು ನಮ್ಮಿಬ್ಬರ ನಡುವೆ ಯಾವುದೇ ಬಿನ್ನಾಭಿಪ್ರಾಯ, ವೈಯಕ್ತಿಕ ದ್ವೇಷಗಳು ಇರುವುದಿಲ್ಲ. ನಾನು ಘಟನೆ ನಡೆದ ಅಂದೇ ನಾಗಾನಂದರವರ ಜೊತೆ ಸಾಮರಸ್ಯದಿಂದ ಮಾತನಾಡಿದ್ದು, ಆದಿನ ಕಾರ್ಯಕ್ರಮ ಮುಗಿದ ನಂತರ ಇಬ್ಬರೂ ಒಟ್ಟಿಗೆ ಮನೆಗೆ ತೆರಳಿದ್ದೇವೆ. ಈ ವಿಚಾರದ ಕುರಿತು ಅವರಿಗೆ ನೋವಾಗಿದ್ದಲ್ಲಿ ನಾನು ವಿಷಾದಿಸುತ್ತೇನೆ.
ನನಗೆ ಸರ್ಕಾರಿ ನೌಕರರ ಮೇಲಾಗಲೀ, ಶಿಕಕರ ಮೇಲಾಗಲೀ ಯಾವುದೇ ಅಸಡ್ಡೆ ಇಲ್ಲ. ಬದಲಿಗೆ ಅಪಾರ ಗೌರವವಿರುತ್ತದೆ. ನಾನು 3 ಬಾರಿ ಶಾಸಕನಾಗಿದ್ದು,ಸರ್ಕಾರಿ ಹಾಗೂ ಇತರ ನೌಕರರುಗಳನ್ನು ಕುಟುಂಬದವರಂತೆಯೇ ಬೆಂಬಲಿಸಿಕೊಂಡು ಪ್ರೋತ್ಸಾಹಿಸಿಕೊಂಡು ಬರುತ್ತಿದ್ದೇನೆಂಬ ಅಂಶವನ್ನು ಜನತೆಯ ಗಮನಕ್ಕೆ ತರುತ್ತಿದ್ದೇನೆ.ಅಂದಿನ ಘಟನೆಯಿಂದ ನನಗೂ ನೋವಾಗಿದ್ದು,ನಾಗಾನಂದ್ ಅವರ ನೋವಿಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.