Thursday, September 19, 2024

ಪ್ರಾಯೋಗಿಕ ಆವೃತ್ತಿ

ಗಣಿ ಇಲಾಖೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಶಾಸಕ: ಕ್ರಮಕ್ಕೆ ಆಗ್ರಹ

ಪಾಂಡವಪುರ ತಾಲೂಕಿನ ಕಟ್ಟೇರಿ ಬಳಿ ಗಣಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಸಿ‌.ಎಸ್. ಪುಟ್ಟರಾಜು ಬೆದರಿಕೆ ಹಾಕಿ ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಲಾರಿಗಳನ್ನು ಬಿಡಿಸಿಕೊಂಡು ಹೋಗಿದ್ದರೂ, ಯಾವುದೇ ಕ್ರಮ ವಹಿಸದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ರೈತಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.

ಮಂಡ್ಯದ ವಿದ್ಯಾ ನಗರದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ ಎದುರು ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಾಂಡವಪುರದಲ್ಲಿ ಗಣಿಗಾರಿಕೆ ನಿಷೇಧ ಇದ್ದರೂ ಸಹ ಇಂದು ನೂರು ಟಿಪ್ಪರ್ ಲಾರಿಗಳಲ್ಲಿ ಅಕ್ರಮವಾಗಿ ಕಲ್ಲುಗಳನ್ನು ಸಾಕಾಣಿಕೆ ಮಾಡಲಾಗುತ್ತಿತ್ತು. ಇದನ್ನು ತಿಳಿದ ಗಣಿ ಇಲಾಖೆಯ ಅಧಿಕಾರಿಗಳು ಕಟ್ಟೇರಿ ಬಳಿ ಲಾರಿಗಳನ್ನು ತಡೆದಿದ್ದಾರೆ.

ಈ ವೇಳೆ ಶಾಸಕ ಸಿ.ಎಸ್. ಪುಟ್ಟರಾಜು ಸ್ಥಳಕ್ಕಾಗಮಿಸಿ ಗಣಿ ಇಲಾಖೆಯ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿ ಕಲ್ಲು ತುಂಬಿದ್ದ ಲಾರಿಗಳನ್ನು ಬಿಡಿಸಿಕೊಂಡು ಹೋಗಿದ್ದಾರೆ.ಅಧಿಕಾರಿಗಳಕರ್ತವ್ಯಕ್ಕೆ ಅಡ್ಡಿಪಡಿಸಿದ ಶಾಸಕರ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂದು ಕಿಡಿಕಾರಿದರು.

ನಾಲ್ಕು ವಾಹನಗಳಿಗೆ ಕಲ್ಲು ಸಾಗಾಣಿಕೆ ಪರವಾನಿಗೆ ಇದ್ದು, ಅವುಗಳನ್ನು ಬಿಡುಗಡೆ ಮಾಡಿ ಇನ್ನುಳಿದ 14 ವಾಹನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದೇವೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಅಲ್ಲಿ ನೂರರ ಸಮೀಪದಲ್ಲಿ ವಾಹನಗಳು ಇದ್ದವು, ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡುವುದು ಅಪರಾಧವಾಗಿದ್ದು ಅವರ ವಿರುದ್ಧ ಕ್ರಮಕ್ಕೆ ಮುಂದಾಗದೆ ನೋಟಿಸ್ ಜಾರಿ ಮಾಡಿದ್ದೇವೆ ಎಂದು ನೆಪ ಹೇಳುವ ಮೂಲಕ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಈ ಕೂಡಲೇ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಶಾಸಕ ಪುಟ್ಟರಾಜು ವಿರುದ್ಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಬೇಕು, ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಅಕ್ರಮ ಗಣಿಗಾರಿಕೆಯಿಂದ ಮಂಡ್ಯ ಜಿಲ್ಲೆ ಗೂಂಡಾಗಳ ಜಿಲ್ಲೆಯಾಗಿ ಮಾರ್ಪಟ್ಟಿದೆ. ಒಬ್ಬ ಜನಪ್ರತಿನಿಧಿಯೇ ಅಧಿಕಾರಿಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕಿ ಅಕ್ರಮ ಕಲ್ಲು ಸಾಗಾಣಿಕೆ ಲಾರಿಗಳನ್ನು ಬಿಡಿಸಿಕೊಂಡು ಹೋಗಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡದ ಅಧಿಕಾರಿಗಳು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು.

ಜಿಲ್ಲಾಡಳಿತದ ಅಧಿಕಾರಿಗಳು ನರಸತ್ತ ವರಾಗಿದ್ದಾರೆ, ಅಕ್ರಮ ಕಣ್ಣೆದುರೇ ನಡೆಯುತ್ತಿದ್ದರೂ ಕ್ರಮ ವಹಿಸುತ್ತಿಲ್ಲ. ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಅಕ್ರಮ ಗಣಿಗಾರಿಕೆಯನ್ನು ತಡೆಯಲು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ಚಿಕ್ಕಾಡೆ ಹರೀಶ್, ಪ್ರಸನ್ನ ಗೌಡ, ಕೆ.ಟಿ. ಗೋವಿಂದೇಗೌಡ, ಸ್ವಾಮಿಗೌಡ,ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ, ಕರವೇ ಜಯರಾಮ್ ಮತ್ತಿತರರು ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!