Tuesday, May 14, 2024

ಪ್ರಾಯೋಗಿಕ ಆವೃತ್ತಿ

ಸಕ್ಕರೆ ಜಿಲ್ಲೆಯ ಶ್ರಮಿಕ ಜನರಿಗೆ ಸಂಸದರು ನೀಡಿದ ಕೊಡುಗೆ ಏನು…?

ಮಂಡ್ಯ ಜಿಲ್ಲೆಯ ಜನತೆಯ ಮುಂದೆ ಸೆರಗೊಡ್ಡಿ ಸ್ವಾಭಿಮಾನ ಮತ ಬೇಡಿ, ಸಂಸದರಾಗಿ ಗೆದ್ದ ನಂತರ ಮಂಡ್ಯ ಜಿಲ್ಲೆಗೆ ಸಂಸದೆ ಸುಮಲತಾ ಅವರು ನೀಡಿರುವ ಕೊಡುಗೆ ಏನು ಎಂಬುದನ್ನು ಶ್ರಮಿಕ ಜನರು ಪ್ರಶ್ನಿಸುವಂತಾಗಿದೆ.

ಮಂಡ್ಯ ನಗರದಲ್ಲಿ 24 ಶ್ರಮಿಕ ನಗರ ಪ್ರದೇಶಗಳಿದ್ದು, ಕೆಲವು ಶ್ರಮಿಕನಗರಗಳು ತಕ್ಕ ಮಟ್ಟಿಗೆ ಇವೆಯಾದರೂ 15ಕ್ಕೂ ಹೆಚ್ಚು ಶ್ರಮಿಕ ನಗರಗಳ ಪರಿಸ್ಥಿತಿ ಹೇಳಲು ಅಸಾಧ್ಯ ಪರಿಸ್ಥಿತಿಯಲ್ಲಿವೆ. ಈ ಬಗ್ಗೆ ಸುಮಲತಾ ಅವರು ಸಂಸದರಾಗಿ ಗೆದ್ದ ಮೇಲೆ ಒಂದು ಬಾರಿಯಾದರೂ ಸಮಸ್ಯೆಗಳ ಕುರಿತು ಒಂದು ಸಭೆಯನ್ನಾಗಲಿ, ಚರ್ಚೆಯನ್ನಾಗಿಲಿ ಮಾಡಿದ ಒಂದು ಸಣ್ಣ ಉದಾಹರಣೆಯೂ ಸಿಗುವುದಿಲ್ಲ.

ಮಂಡ್ಯ ನಗರದ ಹಾಲಹಳ್ಳಿ ಸ್ಲಂನಲ್ಲಿ ನಾನೇ ಹಕ್ಕುಪತ್ರ ಕೊಡಿಸಿರುವೆ ಎಂದು ಹೇಳುವ ಸಂಸದರಿಗೆ, ಈ ಸ್ಲಂ ಹೋರಾಟದ ಬಗ್ಗೆ ತಿಳಿದಿಲ್ಲವೆಂದೇ ಹೇಳಬಹುದು. 2012ರಿಂದ ಈ ಹಾಲಹಳ್ಳಿ ಸ್ಲಂನಲ್ಲಿ, ಜನರು ಮನೆಗಳು ಬಿದ್ದು ಹೋಗಬಹುದೆಂಬ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ. ಅದೆಷ್ಟೋ ಜೀವಗಳು ರಾತ್ರಿ ಮಲಗಿ, ಬೆಳಿಗ್ಗೆ ಎದ್ದರೆ ನಾವು ಬದುಕಿರುತ್ತೇವೆಯೇ ಎಂಬ ಆತಂಕದಲ್ಲೇ ಜೀವನ ದೂಡುತ್ತಿದ್ದಾರೆ. ಇಲ್ಲಿನ ಜನರು ತಿನ್ನುವ ತಟ್ಟೆಗೆ  ಮೇಲ್ಚಾವಣಿಯ ಮರಳು ಬೀಳುತ್ತಿದೆ. ಅದೆಷ್ಟೊ ಮನೆಗಳಲ್ಲಿ ನಿದ್ರಿಸುವ ಸಮಯದಲ್ಲಿ ಚಾವಣಿಗಳು ಕುಸಿದು ಬಿದ್ದು ಪ್ರಾಣಪಾಯದಿಂದ ಪಾರಾದ ಉದಾಹರಣೆಗಳಿವೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಹಕ್ಕುಪತ್ರದ ವಿಷಯವಾಗಿ ಅಂದಿನ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತ, ಕೊಳಚೆ ಅಭಿವೃದ್ಧಿ ಮಂಡಳಿ ವಿರುದ್ದ ಗಟ್ಟಿಯಾದ ಹೋರಾಟ ರೂಪಿಸಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಮಳೆ ಚಳಿಯನ್ನೂ ಲೆಕ್ಕಿಸದೇ ಹಗಲು ರಾತ್ರಿ ಹೋರಾಟ ರೂಪಿಸಿ ತಕ್ಕಮಟ್ಟಿ ಸವಲತ್ತು ದಕ್ಕಿಸಿಕೊಂಡಿದ್ದು ಕರ್ನಾಟಕ ಜನಶಕ್ತಿ ಸಂಘಟನೆ ಮತ್ತು ಶ್ರಮಿಕ ನಿವಾಸಿಗಳ ಒಕ್ಕೂಟಕ್ಕೆ ಸಲ್ಲುತ್ತದೆ.

2018ರ ನಂತರ ನೀವು ಸಂಸದರಾಗಿ ಮಂಡ್ಯದ ಸ್ಲಂಗಳಿಗೆ ಏನು ಅಭಿವೃದ್ಧಿ ಮಾಡಿದ್ದೀರಿ ? ಮಂಡ್ಯ ಜಿಲ್ಲಾಸ್ಪತ್ರೆ ಪಕ್ಕದ ತಮಿಳು ಕಾಲೋನಿಯ ಸ್ಲಂ ಜನರನ್ನು ಒಕ್ಕಲೆಬ್ಬಿಸದೇ ಅದೇ ಸ್ಥಳದಲ್ಲಿ ಮನೆ ನಿರ್ಮಿಸಿ ಹಕ್ಕುಪತ್ರ ನೀಡಿದರೆ ಅದು ನಿಮ್ಮ ಸಾಧನೆಯಾಗುತ್ತಿತ್ತು ಅಲ್ಲವೇ ?

ಮಂಡ್ಯದ ಸ್ಲಂ ಜನರು ನೀವು ಗೆದ್ದ ನಂತರ ಹಲವು ನಿರಂತರ ಹೋರಾಟಗಳನ್ನು ನಡೆಸಿದ್ದಾರೆ. ಹಿಂದಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿರವರು ಕೆ.ಆರ್.ಎಸ್ ಅಣೆಕಟ್ಟಿಗೆ ಬಾಗಿನಿ ಅರ್ಪಿಸಲು ಬಂದಾಗ ಕಪ್ಪು ಬಾವುಟ ತೋರಲು ಹೆಣ್ಣುಮಕ್ಕಳು ಮಂಡ್ಯದಿಂದ ಕಾಲ್ನಡಿಗೆಯಲ್ಲಿ ಪಾಂಡವಪುರ ತಾಲ್ಲೂಕಿನವರೆಗೂ ನಡೆದು ಸಾಗಿದಾಗ, ಕನಿಷ್ಟ ಮಾನವೀಯತೆಯಿಂದದಾರೂ ನೀವು ತಿರುಗಿ ನೋಡಲಿಲ್ಲ. ಇನ್ನೂ ಮಂಡ್ಯ ಜಿಲ್ಲಾಸ್ಪತ್ರೆ ಪಕ್ಕ ಇರುವ ತಮಿಳು ಕಾಲೋನಿ ಜನರಿಗೆ ಕೆರೆಯಂಗಳದಲ್ಲಿ ಇಟ್ಟಿಗೆ ಗೂಡುಗಳಂತೆ ಮನೆಗಳನ್ನು ಕಟ್ಟಿ , ಜನರ ಅಭಿಪ್ರಾಯವನ್ನು ಪಡೆಯದೆ ಅಲ್ಲಿಗೆ ಜನರನ್ನು ಕೋಳಿ, ಕುರಿಗಳನ್ನು ತುಂಬುವಂತೆ ಜನರನ್ನು ತುಂಬಲು ಜಿಲ್ಲಾಡಳಿತ ಸಜ್ಜಾಗಿರುವಾಗ… ಈ ಬಗ್ಗೆ ನೀವು ಮಧ್ಯ ಪ್ರವೇಶ ಮಾಡಿ, ಶ್ರಮಿಕರಿಗೆ ನ್ಯಾಯ ದೊರಕಿಸಿ ಕೊಡಬಹುದಿತ್ತಲ್ಲವೇ ?

ಸಂಸದರೇ ಅಷ್ಟಕ್ಕೂ ಅ ಮನೆಗಳು ಯಾವ ಸರ್ಕಾರ ಇದ್ದಾಗ ಯಾವ ಯೋಜನೆ ಆಡಿಯಲ್ಲಿ ಜಾರಿಯಾಗಿದೆ ಎಂಬ ಮಾಹಿತಿ ಇದೆಯೇ ? ಬಿಜೆಪಿ ಸರ್ಕಾರ ಬಂದ ನಂತರ ಬಡಜನರಿಗೆ ಸಿಗುವ ಒಳ್ಳೆಯ ಮನೆಗಳ ಯೋಜನೆಯನ್ನೇ ಕಿತ್ತು ಹಾಕಿ ಬಿಟ್ಟಿತ್ತು. ನೀವು ಬಿಜೆಪಿ ಸರ್ಕಾರದ ಸಾಧನೆಗಳನ್ನು ಈಗ ಹೇಳುತ್ತಿದ್ದೀರಾ ಅಲ್ಲವೇ?

ಇದೇ ಮಂಡ್ಯ ಕೆರೆಯಂಗಳದಲ್ಲಿ ಕಟ್ಟಿರುವ ಮನೆಗಳನ್ನು ಚುನಾವಣೆ ಸಂದರ್ಭದಲ್ಲಿ ಫಲಾನುಭವಿಗಳೇ ಇಲ್ಲದೆ ಪಕ್ಕದ ಶ್ರಮಿಕ ನಗರಗಳ ಜನರನ್ನು ಕರೆಸಿ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಯಾರಿಗೂ ತಿಳಿಯದ ವಿಚಾರವಲ್ಲ ಅಲ್ಲವೇ ? ಮಂಡ್ಯದಲ್ಲಿ ಪ್ರತಿಯೊಬ್ಬ ನಾಗರೀಕರಿಗೆ ರೈತರಿಗೆ, ಮಹಿಳೆಯರಿಗೆ ಹಾಗೂ ಕಾರ್ಮಿಕರಿಗೆ ಒಂದಿಷ್ಟಾದರೂ ಹಕ್ಕುಗಳು ದೊರೆತಿವೆ ಎಂದರೆ, ಅದು ಅವರು ನಡೆಸಿದ ಹೋರಾಟದ ಫಲವೇ ಹೊರತು, ನಿಮ್ಮ ಸಾಧನೆಯಲ್ಲ ಅಲ್ಲವೇ ?

ಯಾವುದೇ ಸರ್ಕಾರವಾಗಲಿ ಜನರಿಗೆ ನ್ಯಾಯಯುತವಾಗಿ ಕೊಡಬೇಕಿರುವ ಹಕ್ಕನ್ನು ಕೊಡಬೇಕಿದೆ, ಇಲ್ಲಿ ಜನಪ್ರತಿನಿಧಿಗಳು ಜನರ ಸೇವೆಗೆ ತಮ್ಮ ಸಮರ್ಪಿಸಿಕೊಂಡು ಒಂದಷ್ಟು ಉತ್ತಮ ಕೆಲಸ ಮಾಡಿದರೆ, ಜನತೆಯ ನೆನಪಿನಲ್ಲಿ ಉಳಿಯುತ್ತಾರೆ. ಆದರೆ ಎಂದಾದರೂ ನೀವು ಅಂತಹ ಪ್ರಯತ್ನ ಮಾಡಿದ್ದೀರಾ ? ಈ ಬಗ್ಗೆ ನಿಮ್ಮ ಆತ್ಮಸಾಕ್ಷಿಯನ್ನೇ ಪ್ರಶ್ನಿಸಿಕೊಳ್ಳುವುದು ಒಳ್ಳೆಯದು….

ಮಂಡ್ಯ ಜಿಲ್ಲೆಯಲ್ಲಿ‌ 2018ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಅಂದಿನ ಚುನಾವಣಾ ಅಭ್ಯರ್ಥಿಗಳಾಗಿದ್ದ ತಮ್ಮನ್ನು ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೂ ಬಹಿರಂಗ ಆಹ್ವಾನ ನೀಡಿತ್ತು. ಆದರೆ ಇಂತಹ ಉತ್ತಮವಾದ ಚರ್ಚೆಗೆ ನೀವು ಬರಲಿಲ್ಲ, ನಿಖಿಲ್ ಕುಮಾರಸ್ವಾಮಿ ಅವರೂ ಬರಲಿಲ್ಲ ಎಂಬುದು ನಮ್ಮ ನೆನಪಿನಲ್ಲಿದೆ.

ಈಗ 2024 ರ ಲೋಕಸಭೆಯ ಚುನಾವಣೆ ಬಂದಿದೆ, ಈಗಲೂ ಬಹಿರಂಗ ಚರ್ಚೆ ಬನ್ನಿ, ಮಂಡ್ಯ ಜಿಲ್ಲೆಯ ಶ್ರಮಿಕರ ಜನರಿಗೆ ಹಾಗೂ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂಬುದನ್ನು ಎಂಬುದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿ, ಅದು ಕ್ಷೇತ್ರ ಜನರ ಗಮನಕ್ಕೂ ಬರಲಿ. ಅದನ್ನು ಬಿಟ್ಟು ಅನವಶ್ಯಕ ಚರ್ಚೆ ಹಾಗೂ ಕೆಸರೆರಾಚಾಟದಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ…. ನೀವು ಸಾಧಿಸಿದ್ದು ನಿಜವಾಗಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಮತ್ತೊಮ್ಮೆ ಆಹ್ವಾನಿಸುತ್ತೇವೆ….

ಸಿದ್ದರಾಜು ಎಂ
ಜಿಲ್ಲಾ ಕಾರ್ಯದರ್ಶಿ,
ಕರ್ನಾಟಕ ಜನಶಕ್ತಿ ಸಂಘಟನೆ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!