Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆರಗೋಡು|ವಿವಿಧ ದೇವಾಲಯಗಳಿಗೆ ಅನುದಾನ ನೀಡಿದ ಶಾಸಕ ಗಣಿಗ ರವಿಕುಮಾರ್: ಗ್ರಾಮಸ್ಥರಿಂದ ಶಾಸಕರಿಗೆ ಅದ್ದೂರಿ ಸ್ವಾಗತ

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ವಿವಿಧ ದೇವಸ್ಥಾನಗಳಿಗೆ ಅನುದಾನ ವಿತರಿಸುವ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಗಣಿಗ ರವಿಕುಮಾರ್ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು.

ಹನುಮ ಧ್ವಜದ ವಿವಾದದ ಹಿನ್ನಲೆಯಲ್ಲಿ ಕೆರಗೋಡು ಗ್ರಾಮಕ್ಕೆ ಒಂದು ತಿಂಗಳ ನಂತರ ಕಾಲಿಟ್ಟ ಶಾಸಕ ಗಣಿಗ ರವಿಕುಮಾರ್ ಅವರಿಗೆ ಕೆರಗೋಡು ಸುತ್ತಮುತ್ತಲ ಗ್ರಾಮದ ಜನರು ಬೃಹತ್ ಹೂವಿನ ಹಾರ ಹಾಕಿ ಅಭೂತಪೂರ್ವ ಸ್ವಾಗತ ನೀಡಿದರು.ರವಿಕುಮಾರ್ ಅವರನ್ನು ಹೆಗಲ ಮೇಲೆ ಹೊತ್ತು ಸಾಗಿದ ಅವರ ಬೆಂಬಲಿಗರು ಜೈಕಾರ ಹಾಕಿದರು.

ಇನ್ನೊಂದು ಕಡೆ ಬಿಜೆಪಿ, ಸಂಘ ಪರಿವಾರದ ಬೆರಳೆಣಿಕೆಯ ಕಾರ್ಯಕರ್ತರು ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ಗಣಿಗ ರವಿಕುಮಾರ್ ಅವರು, ಪ್ರತಿಭಟನಾ ನಿರತರ ಬಳಿ ತೆರಳಿ ಅವರನ್ನು ಸಮಾಧಾನ ಪಡಿಸಿ ಮಾತನಾಡಿ, ನಾನು ಹನುಮ ಧ್ವಜ ಹಾರಿಸುವುದಕ್ಕೆ ವಿರೋಧ ಮಾಡಿಲ್ಲ.ಮುಂದೆಯೂ ಮಾಡುವುದಿಲ್ಲ.ಆದರೆ ಸರ್ಕಾರದ ಜಾಗದಲ್ಲಿ ಧ್ವಜ ಹಾರಿಸಿದ್ದರಿಂದ ಜಿಲ್ಲಾಡಳಿತ ತೆರವು ಗೊಳಿಸಿದೆ.ಇದರಲ್ಲಿ ನನ್ನ ಪಾತ್ರವಿರಲಿಲ್ಲ. ಕೆಲವರು ರಾಜಕೀಯಕ್ಕೆ ಪ್ರಕರಣ ಬಳಸಿಕೊಂಡು ನನ್ನ ಮೇಲೆ ಜನರನ್ನು ಎತ್ತಿ ಕಟ್ಟಿದರು.ಹನುಮ ಧ್ವಜವನ್ನು ಯಾವುದಾದರೂ ದೇವಸ್ಥಾನದ ಬಳಿ ಹಾರಿಸೋಣ ಎಂದು ಸಮಾಧಾನ ಪಡಿಸಿದರು.ಅಲ್ಲದೆ ಹನುಮ ಶ್ಲೋಕವನ್ನು ಪಠಿಸಿ,ತಾವೂ ಸಹ ಶ್ಲೋಕ ಹೇಳಿ ಎಂದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ,ಸಂಘಪರಿವಾರದ ಕಾರ್ಯಕರ್ತರಿಗೆ ಹೇಳಿದರು.

ಈ ಸಂದರ್ಭದಲ್ಲಿ ಕೆರಗೋಡು ಗ್ರಾಮಸ್ಥರು ಕೆಲವರು ದಿಕ್ಕು ತಪ್ಪಿಸಿದ ಕಾರಣಕ್ಕಾಗಿ ವಿವಾದ ಸೃಷ್ಟಿಯಾಯಿತು.ಈಗ ನಮಗೆ ಇದರ ಹಿಂದಿರುವ ರಾಜಕೀಯ ಅರ್ಥವಾಗಿದೆ ಎಂದು ತಿಳಿಸಿ,ಶಾಸಕ ರವಿಕುಮಾರ್ ಅವರಿಗೆ ಜೈಕಾರ ಹಾಕುತ್ತಾ ವೇದಿಕೆಗೆ ಕರೆತಂದರು.

ನಂತರ ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ದೇವಾಲಯದ ಆವರಣದಲ್ಲಿ ಕೆರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2023-24ನೇ ಸಾಲಿನ ವಿವಿಧ ದೇವಾಲಯಗಳಿಗೆ ಶಾಸಕ ಪಿ. ರವಿಕುಮಾರ್ ಗೌಡ ಅನುದಾನ ವಿತರಿಸಿ ಮಾತನಾಡಿದರು.

ನಾನು ಕೂಡ ಹಿಂದೂ ಧರ್ಮಕ್ಕೆ ಸೇರಿದವನು. ಹನುಮ ಧ್ವಜ ಸರ್ಕಾರಿ ಜಾಗದಲ್ಲಿ ಹಾರಿಸಿರುವುದು ಸರಿಯಲ್ಲ. ಗ್ರಾಮದ ಯಾವುದಾದರೂ ದೇವಸ್ಥಾನ ಮುಂದೆ ಮತ್ತೆ ಹಾರಿಸೋಣ.ಧ್ವಜ ವಿವಾದವನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಗಳು ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ.ಕೆರಗೋಡು ಜನರು ಸೌಹಾರ್ದತೆಯಿಂದ ಬಾಳುತ್ತಿರುವವರು.ಅವರ ದಿಕ್ಕು ತಪ್ಪಿಸಬೇಡಿ.ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಾ ಪಕ್ಷದ ಮುಖಂಡರು ಸಹಕಾರ ನೀಡಲಿ ಎಂದು ಮನವಿ ಮಾಡಿದರು.

ಕೆರಗೋಡು ಗ್ರಾಮದ ದೇವೀರಮ್ಮ ದೇವಾಲಯಕ್ಕೆ 4 ಲಕ್ಷ ರೂ, ಆಂಜನೇಯ ಸ್ವಾಮಿ ದೇವಸ್ಥಾನ, ಲಕ್ಷ,ಹೊನ್ನಮ್ಮ ದೇವಿ ದೇವಸ್ಥಾನ, ಚನ್ನಕೇಶವ ದೇವಸ್ಥಾನ, ದೊಡ್ಡಮ್ಮತಾಯಿ ದೇವಸ್ಥಾನಕ್ಜೆ ತಲಾ 1.50 ಲಕ್ಷ ಹಾಗೂ ಮರಲಿಂಗನದೊಡ್ಡಿ ಗ್ರಾಮದ ಶ್ರೀರಾಮ ದೇವಸ್ಥಾನಕ್ಕೆ 2 ಲಕ್ಷ ರೂ.ಗಳ ಅನುದಾನವನ್ನು ವಿತರಿಸಿದರು.

ಕೋಡಿ ದೊಡ್ಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಗಣಿಗ ರವಿಕುಮಾರ್ ಗುದ್ದಲಿ ಪೂಜೆ ನೆರವೇರಿಸಿದರು.

ವೇದಿಕೆಯಲ್ಲಿ ತಾ.ಪಂ.ಮಾಜಿ ಸದಸ್ಯ ಪ್ರಶಾಂತ್ ಬಾಬು,ಕೆರಗೋಡು ಗ್ರಾ.ಪಂ.ಅಧ್ಯಕ್ಷ ನವೀನ್,ಮಾಜಿ ಅಧ್ಯಕ್ಷ ಶಿವಾನಂದ,ಮಾಜಿ ಸದಸ್ಯ ಶ್ರೀಕಾಂತ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!