Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆರಗೋಡು ಧ್ವಜ ವಿವಾದದಲ್ಲಿ ಶಾಸಕರ ಪಾತ್ರವಿಲ್ಲ: ನವೀನ್

ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರದಲ್ಲಿ ಶಾಸಕ ರವಿಕುಮಾರ್ ಪಾತ್ರವಿಲ್ಲ. ಕೇವಲ ರಾಜಕೀಯ ಹಿತಾಸಕ್ತಿಗಾಗಿ ಬಿಜೆಪಿ-ಜೆಡಿಎಸ್ ನಾಯಕರು ವಿವಾದ ಸೃಷ್ಟಿಸಿದರು ಎಂದು ಕೆರಗೋಡು ಗ್ರಾ.ಪಂ. ಅಧ್ಯಕ್ಷ ನವೀನ್ ತಿಳಿಸಿದರು.

ಮಂಡ್ಯದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ನವೆಂಬರ್ 28ರಂದು ಶ್ರೀರಾಮ ಭಜನಾ ಮಂಡಳಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂಡಳಿ ಶ್ರೀ ಆಂಜನೇಯಸ್ವಾಮಿ ದೇವಾಲಯದ ಎದುರು ಧ್ವಜಸ್ತಂಭ ಸ್ಥಾಪನೆಗೆ ಪಂಚಾಯಿತಿಗೆ ಅನುಮತಿ ಕೋರಿದ್ದರು. ಡಿ. 29 ರಂದು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ನವರು ಹಾಗೂ ಯೋಗೇಶ್ ಅವರು ಅರ್ಜುನ ಧ್ವಜ ಸ್ತಂಭ ನಿರ್ಮಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಗ್ರಾಮ ಪಂಚಾಯಿತಿ ಸಭೆ ಕರೆದು ಸಭೆಯಲ್ಲಿ ಶ್ರೀಗೌರಿಶಂಕರ ಸೇವಾ ಟ್ರಸ್ಟ್‌ ನೀಡಿದ ಧ್ವಜಸ್ತಂಭಸ್ಥಾಪನೆ ಕುರಿತಂತೆ ಚರ್ಚೆ ನಡೆಸಲಾಯಿತು. 21 ಮಂದಿ ಸಭೆಗೆ ಹಾಜರಾಗಿದ್ದರು. ಇದರಲ್ಲಿ ಇಬ್ಬರು ತಟಸ್ಥ ನಿಲುವು ತಾಳಿದರೆ, ಓರ್ವ ಸದಸ್ಯ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ 18 ಮಂದಿ ಸದಸ್ಯರು ಧ್ವಜ ಸ್ತಂಭದ ಸ್ಥಾಪನೆ ಪರವಾಗಿ ಸಹಿ ಹಾಕಿ ಸಮ್ಮತಿ ಸೂಚಿಸಿದರು. ಸಭಾ ನಿರ್ಣಯದಂತೆ ಜ. 5ರಂದು ನಾನು ಮತ್ತು ಪಿಡಿಓ ಸ್ಥಳ ಪರಿಶೀಲನೆ ನಡೆಸಿ ಧ್ವಜಸ್ತಂಭ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಾಯಿತು.

ಧ್ವಜಸ್ತಂಭದಲ್ಲಿ ತ್ರಿವರ್ಣಧ್ವಜ ಹಾಗೂ ಕನ್ನಡ ಧ್ವಜ ಹಾರಿಸುವುದಾಗಿ ಟ್ರಸ್ಟ್‌ನವರು ಒಪ್ಪಿಗೆ ಸೂಚಿಸಿದ್ದರು.
ಈ ಮಧ್ಯೆ ಜ.20ರಂದು ಧ್ವಜ ಸ್ತಂಭ ದಲ್ಲಿ ಹನುಮಧ್ವಜ ಹಾರಿಸಿದ್ದರು. ಮರುದಿನವೇ ಗ್ರಾಮದ ಕೆಲವರು ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಟಕ್ಕೆ ಕಾನೂನಾತ್ಮಕವಾಗಿ ಅನುಮತಿ ನೀಡಲಾಗಿದೆಯೇ ಎಂದು 30 ರಿಂದ 40 ಜನರು ಪಂಚಾಯಿತಿ ಕಚೇರಿಗೆ ಆಗಮಿಸಿ ಪಿಡಿಒ ಅವರನ್ನು ಪ್ರಶ್ನಿಸಿದರು ಎಂದು ತಿಳಿಸಿದರು.

ಜ.22ರಂದು ಶ್ರೀರಾಮಮಂದಿರ ಉದ್ಘಾಟನೆ ಇರುವುದರಿಂದ ಯಥಾಸ್ಥಿತಿ ಕಾಪಾಡುವ ನಿರ್ಧಾರ ಕೈಗೊಳ್ಳಲಾಯಿತು. ಜ. 22ರಂದು ರಾಮಮಂದಿರ ಉದ್ಘಾಟನೆ ಇರುವ ಕಾರಣ ಜ.21ರಿಂದ 25ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು. ಸೆ.25ರಂದು ಸಾಮಾನ್ಯ ಸಭೆ ಸೇರಿ ಹನುಮ ಧ್ವಜವನ್ನು ಇಳಿಸುವ ನಿರ್ಧಾರ ಮಾಡಲಾಗಿತ್ತು ಎಂದರು.

ಗಣರಾಜ್ಯೋತ್ಸವ ದಿನ ರಾಷ್ಟ್ರಧ್ವಜ ಹಾರಿಸಿ ಮತ್ತೆ ಸಂಜೆ ವೇಳೆಗೆ ರಾಷ್ಟ್ರಧ್ವಜ ಕೆಳಗಿಳಿಸಿ ನಂತರ ಟ್ರಸ್ಟ್‌ನವರು ಹನುಮಧ್ವಜವನ್ನು ಮತ್ತೆ ಹಾರಿಸಿದ್ದರು. ಈ ವಿಷಯ ತಿಳಿದು ನಾವು ಸ್ಥಳಕ್ಕೆ ತೆರಳಿ ಅವರಿಗೆ ತೆರವಿಗೆ ಸೂಚನೆ ನೀಡಿದೆವು. ಈ ವಿಷಯ ತಿಳಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಪಿಡಿಓ ಜೀವನ್ ಅವರನ್ನು ಜಿಲ್ಲಾಡಳಿತದ ಗಮನಕ್ಕೆ ತರದೆ ಅನುಮತಿ ನೀಡಿದ್ದೀರಿ.ನಿಮಗೆ ಕಾನೂನು ಗೊತ್ತಿದೆಯಾ ಎಂದು ತರಾಟೆಗೆ ತೆಗೆದುಕೊಂಡು ಇದಕ್ಕೆ ನೀವೇ ಹೊಣೆ ಎಂದರು.

ಜ.27ರಂದು ತಾಪಂ ಇಒ ವೀಣಾ ಇತರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಧ್ವಜ ತೆರವುಗೊಳಿಸುವಂತೆ ಸೂಚಿಸಿದ್ದರು. ಮರುದಿನ ಬೆಳಗ್ಗೆಯೇ ಪೊಲೀಸ್ ಭದ್ರತೆಯೊಂದಿಗೆ ಅಧಿಕಾರಿಗಳು ಧ್ವಜ ತೆರವುಗೊಳಿಸುವುದಕ್ಕೆ ಬಂದಿರುವ ವಿಚಾರ ನಮಗೆ ತಿಳಿಯಿತು ಎಂಬುದಾಗಿ ಗ್ರಾಪಂ ಅಧ್ಯಕ್ಷ ನವೀನ್ ತಿಳಿಸಿದರು. ನಂತರ ಧ್ವಜ ತೆರವು ವಿವಾದ ಬೃಹದಾಕಾರವಾಗಿ ಹುಟ್ಟಿಕೊಂಡು ಅಹಿತರ ಘಟನೆಗೆ ಕಾರಣವಾಯಿತು. ಇದರಲ್ಲಿ ನಮ್ಮ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗೋ‍ಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್,ನಗರಸಭಾ ಸದಸ್ಯ ಶ್ರೀಧರ್, ಕಾ.ಪೂ. ರಮೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!