Monday, May 20, 2024

ಪ್ರಾಯೋಗಿಕ ಆವೃತ್ತಿ

ಕೃಷಿ-ಕೈಗಾರಿಕೆಗೆ ಹೆಚ್ಚು ಒತ್ತು ನೀಡಿದ ನಾಲ್ವಡಿ

ಕೃಷಿ ಮತ್ತು ಕೈಗಾರಿಕೆ ಯಿಂದ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಮೈಸೂರು ಸಂಸ್ಥಾನದ ಉದ್ದಗಲಕ್ಕೂ ಕೃಷಿ ಮತ್ತು ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆಯ ಅಧ್ಯಕ್ಷ ಪ್ರೊ.ಆಲಕೆರೆ ಸಿದ್ದರಾಜು ಬಣ್ಣಿಸಿದರು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಉದ್ಯಾನವದಲ್ಲಿ ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆ ವತಿಯಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ಬಾರಿಗೆ ಶಿವನಸಮುದ್ರದಲ್ಲಿ ಜಲ ವಿದ್ಯುತ್ತನ್ನು ಕಂಡುಹಿಡಿದು, ನಾಡಿಗೆ ವಿದ್ಯುತ್ ಒದಗಿಸಿದವರು. ಮೊಟ್ಟ ಮೊದಲ ಬಾರಿಗೆ ಗ್ರಾಮೀಣ ಪ್ರದೇಶಕ್ಕೂ ಸರಬರಾಜು ಮಾಡಿದ ಕೀರ್ತಿ ನಾಲ್ವಡಿ ಅವರದ್ದು ಎಂದು ಹೇಳಿದರು.

ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಪ್ರತೀ ಹಳ್ಳಿ ಹಳ್ಳಿಗಳಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನವನ್ನು ಹಬ್ಬದ ಮಾದರಿಯಲ್ಲಿ ಆಚರಿಸುವಂತಾಗಬೇಕು. ಅದು ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ತಿಳಿಸಿದರು.

ನಾಲ್ವಡಿಯವರ ಈ ಎಲ್ಲ ಅಭಿವೃದ್ಧಿ ಕಾರ‍್ಯಗಳನ್ನು ಖುದ್ದು ವೀಕ್ಷಿಸಿದ್ದ ಮಹಾತ್ಮಗಾಂಧಿಜೀಯವರು ನಾನು ಕಂಡ ರಾಮರಾಜ್ಯ ಮೈಸೂರು ಸಂಸ್ಥಾನದಲ್ಲಿ ಸಾಕಾರಗೊಂಡಿದೆ ಎಂದು ನಾಲ್ವಡಿಯವರಿಗೆ ರಾಜರ್ಷಿ ಬಿರುದನ್ನು ನೀಡಿದರು ಎಂದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನವನ್ನು ಎಲ್ಲರೂ ನೆನೆಯುವಂತಾಗಬೇಕು. ಅವರ ಜೀವಿತ ಅವಧಿಯಲ್ಲಿ ಮಹಾರಾಜರ ಮನೆತನದ ಎಲ್ಲ ನೀತಿಗೊಳಪಟ್ಟು ಸಾಮಾನ್ಯ ಜನರ, ದೀನ ದಲಿತರ ಬಗ್ಗೆ ಪ್ರಜ್ಞೆ ಇಟ್ಟುಕೊಂಡು ಅವರಿಗೆ ಸಾಮಾಜಿಕ ಮೀಸಲಾತಿ ಜಾರಿಗೆ ತಂದ ಮಹಾನ್ ವ್ಯಕ್ತಿ ಎಂದು ಗುಣಗಾನ ಮಾಡಿದರು.

ಬಾಲ್ಯವಿವಾಹ, ದೇವದಾಸಿ ಪದ್ಧತಿಯನ್ನು ರದ್ದು ಮಾಡಿದರಲ್ಲದೆ, ವೇಶ್ಯಾವಾಟಿಕೆ ನಿಯಂತ್ರಣ ಕಾಯಿದೆಯನ್ನು ಜಾರಿಗೊಳಿಸಿದ ಕೀರ್ತಿ ನಾಲ್ವಡಿ ಅವರಿಗೆ ಸಲ್ಲುತ್ತದೆ ಎಂದರು.

ಕೃಷ್ಣರಾಜಸಾಗರ ಜಲಾಶಯ ನಿರ್ಮಿಸುವ ಸಂದರ್ಭದಲ್ಲಿ ರಾಜಮನೆತನದ ಎಲ್ಲ ಚಿನ್ನಾಭರಣಗಳನ್ನು ಗಿರವಿ ಇಟ್ಟಿದ್ದರು. ಮೈಷುಗರ್ ಪ್ರಾರಂಭವಾಗಲು ಕಾರಣರಾದರು. ಇದರೊಂದಿಗೆ ಜಿಲ್ಲೆಯ ಆರ್ಥಿಕಾಭಿವೃದ್ಧಿ ಹೆಚ್ಚಾಗಲು ಅವಕಾಶ ಮಾಡಿಕೊಟ್ಟರು ಎಂದು ಹೇಳಿದರು.

ಸಾಹಿತಿ ತೈಲೂರು ವೆಂಕಟಕೃಷ್ಣ, ನಿವೃತ್ತ ಪ್ರಾಂಶುಪಾಲ ತೂಬಿನಕೆರೆ ಲಿಂಗರಾಜು, ಮುಖಂಡರಾದ ಕೆ. ಬೋರಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!