Friday, September 20, 2024

ಪ್ರಾಯೋಗಿಕ ಆವೃತ್ತಿ

ಆಧುನಿಕ ಜೀವನ ಶೈಲಿಯೇ ಕಾಯಿಲೆಗಳ ಹೆಚ್ಚಳ ಕಾರಣ: ಡಾ. ಸಿ.ಎನ್ ಮಂಜುನಾಥ್

ಇಂದಿನ ದಿನಗಳಲ್ಲಿ ಹೃದಯ ಮತ್ತು ಮಧುಮೇಹದಂತಹ ಕಾಯಿಲೆಗಳು ಹೆಚ್ಚಾಗಲು ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಯೇ ಕಾರಣವಾಗಿದೆ. ಭಾರತ ದೇಶವು ಹೃದಯ ಮತ್ತು ಮಧುಮೇಹ ರೋಗದ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದು ಖ್ಯಾತ ಹೃದಯ ತಜ್ಞರೂ ಆದ ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ಮಂಡ್ಯನಗರದ ಸ್ಪಂದನ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕ್ಯಾತ್‌ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು,  ಹಿಂದೆಲ್ಲ ಶ್ರಮದಾನದ ಮೂಲಕ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದರು. ಅದೇ ರೀತಿ ಒಳ್ಳೆಯ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಅಂದು ಪಟೇಲರು, ಶ್ಯಾನುಬೋಗರು ಸೇರಿದಂತೆ ಸಿರಿವಂತರ ಕಾಯಿಲೆ ಎನ್ನುತ್ತಿದ್ದರು. ಆದರೆ ಇಂದು ಬಡವರು, ಕೂಲಿ ಕಾರ್ಮಿಕರಿಗೂ ಈ ರೋಗ ಬರುತ್ತಿದ್ದು, ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬರೂ ಕೆಲಸ ಮಾಡುವ ಮೂಲಕ ಇಂತಹ ರೋಗಗಳಿಂದ ದೂರ ಇರಬೇಕು. ನಡಿಗೆಯನ್ನು ರೂಢಿಸಿಕೊಳ್ಳಬೇಕು. ಸಂಗಾತಿ ಎಂದರೆ ಜೀವನ ಸಂಗಾತಿಯಲ್ಲ. ಸಂಗಾತಿ ಎಂದರೆ ನಮ್ಮ ದೇಹ. ಅದು ನಮ್ಮ ಉಸಿರು ಇರುವವರೆಗೂ ನಮ್ಮ ಜೊತೆಯೇ ಇರುತ್ತದೆ. ಇಂತಹ ಸಂಗಾತಿಯನ್ನು ಅಚ್ಚುಕಟ್ಟಾಗಿ ಯಾವುದೇ ರೋಗಗಳಿಲ್ಲದಂತೆ ಕಾಪಾಡಿಕೊಳ್ಳುವುದು ಅಗತ್ಯ. ಪ್ರತಿದಿನ ಒಂದು ಗಂಟೆಯಾದರೂ ನಡಿಗೆಯನ್ನು ಮಾಡು. ನಾನು ನಿನಗಾಗಿ ಜೀವನ ಪರ್‍ಯಂತ ಇರುತ್ತೇನೆ ಎನ್ನುವ ರೀತಿ ಹೃದಯ ಕೆಲಸ ಮಾಡುತ್ತದೆ. ಅದನ್ನು ಮನವರಿಕೆ ಮಾಡಿಕೊಂಡು ಪ್ರತಿನಿತ್ಯ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಹೃದಯ ಸಮಸ್ಯೆಯಿಂದ ಸ್ವಲ್ಪವಾದರೂ ದೂರ ಇರಬಹುದು ಎಂದರು.

ಹೃದಯಾಘಾತವಾದಲ್ಲಿ ತಕ್ಷಣ ಅವರಿಗೆ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಕನಿಷ್ಟ 3 ರಿಂದ 6 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಅವರು ಬದುಕುವ ಸಾಧ್ಯತೆಗಳಿವೆ. 12 ಗಂಟೆಯಾದಲ್ಲಿ ಶೇ. 7ರಷ್ಟು ಮಾತ್ರ ಬದುಕುವ ಸಾಧ್ಯತೆಗಳಿರುತ್ತವೆ. ಚಿಕಿತ್ಸೆ ದೊರೆಯುವುದು ವಿಳಂಬವಾದಲ್ಲಿ ಸಾವಿನ ಸಾಧ್ಯತೆಯೂ ಹೆಚ್ಚಾಗುತ್ತದೆ. ಇದನ್ನು ಮನಗಂಡು ನಾನು ಇತ್ತೀಚೆಗೆ ಸಂಸತ್ತಿನಲ್ಲಿ ಪ್ರತೀ 50 ಕಿ.ಮೀ.ಗೊಂದರಂತೆ ಹೃದಯ ಚಿಕಿತ್ಸೆ ನೀಡುವಂತಹ ಆಸ್ಪತ್ರೆಗಳನ್ನು ತೆರೆಯುವುದು ಅಗತ್ಯ ದು ಪ್ರತಿಪಾದಿಸಿದ್ದೇನೆ ಎಂದರು.

ಮಂಡ್ಯದಂತಹ ನಗರಕ್ಕೆ ಹೃದಯ ಚಿಕಿತ್ಸೆ ನೀಡುವಂತಹ ಆಸ್ಪತ್ರೆಯ ಆಗತ್ಯತೆ ಇದೆ. ಕಾರ್ಡಿಯಾಕ್ ಕ್ಯಾತ್‌ಲಾಗ್ ಬೇಕಾಗಿದೆ. ನಮ್ಮ ದೇಶದಲ್ಲಿ ಮೂರೂವರೆ ಸಾವಿರ ಇಂತಹ ಘಟಕಗಳಿವೆ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಟ ಆರೂವರೆ ಸಾವಿರ ಕಾರ್ಡಿಯಾಕ್ ಕ್ಯಾತ್‌ಲಾಗ್ ಆಸ್ಪತ್ರೆಗಳ ಅಗತ್ಯತೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸಳೆಯುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ನಾವು ಮೈಸೂರಿನಲ್ಲಿ ಜಯದೇವ ಕೇಂದ್ರವನ್ನು ತೆರೆದಿದ್ದೆವು. ಇದರೊಂದಿಗೆ 45 ಕಡೆಗಳಲ್ಲಿ ಇಂತಹ ವ್ಯವಸ್ಥೆ ರೂಪಿಸಿದ್ದು, ಮೈಸೂರು ವಿಭಾಗದಲ್ಲಿ 15, ಬೆಂಗಳೂರು ವಿಭಾಗದಲ್ಲಿ 15 ಹಾಗೂ ಗುಲ್ಬರ್ಗಾ ವಿಭಾಗದಲ್ಲಿ 15 ಆಸ್ಪತ್ರೆಗಳಲ್ಲಿ ಹೃದಯ ತಪಾಸಣಾ ಘಟಕಗಳನ್ನು ಸ್ಥಾಪಿಸಿದ್ದೇವೆ ಎಂದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಆದಿತ್ಯ, ಹೃದ್ರೋಗ ತಜ್ಞೆ ಡಾ.ದೀಪ್ತಿ ಮಂಗೇಶ್, ಸ್ತ್ರೀ ರೋಗತಜ್ಞೆ ಡಾ. ಶ್ರೀಕಲಾ, ಡಾ. ರವೀಂದ್ರನಾಥ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!