Thursday, September 19, 2024

ಪ್ರಾಯೋಗಿಕ ಆವೃತ್ತಿ

ಇಸ್ರೋ ಸಾಧನೆಗೆ ದೇಶ ಹೆಮ್ಮೆ ಪಡುತ್ತದೆ, ನಿಮ್ಮ ಸಾಧನೆ ಏನೆಂದು ಹೇಳಿ ?: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

ನಮ್ಮ ಹೆಮ್ಮೆಯ ಇಸ್ರೋದ ಶ್ರೇಷ್ಠ ವಿಜ್ಞಾನಿಗಳ ಸಾಧನೆಯನ್ನು ತನ್ನ ಪಕ್ಷದ ಸಾಧನೆ ಎಂದು ಬಿಂಬಿಸಿಕೊಳ್ಳುವಷ್ಟು ಸಣ್ಣತನಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಇಳಿದಿರುವುದು ವಿಷಾದನೀಯ ಮಾತ್ರವಲ್ಲ ಖಂಡನೀಯ ಕೂಡಾ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

“>

ಸೌರಯಾನದ ಯಶಸ್ಸುಗಳಿಗೆ ನಮ್ಮ ವಿಜ್ಞಾನಿಗಳಷ್ಟೇ ಅರ್ಹರು. ಜಿ20 ಸಭೆಯ ಆಯೋಜನೆಯನ್ನೇ ತನ್ನ ಗೆಲುವು ಎಂದು ತೋರಿಸಿಕೊಳ್ಳುವ ಸಾಧನಾ ದಾರಿದ್ರ್ಯ ‘ಮೋದಿ & ಕಂಪೆನಿ’ಗೆ ಬಂದಿದೆ. ಚುನಾವಣೆ ಹೊಸ್ತಿಲಲ್ಲಿರುವಾಗ ‘ಏಕರೂಪ ನಾಗರಿಕ ಸಂಹಿತೆ’, ‘ಜನಸಂಖ್ಯಾ ನಿಯಂತ್ರಣ ಮಸೂದೆ’ ಮುಂತಾದವುಗಳ ಕುರಿತು ತನ್ನ ಸಂಘ ಪರಿವಾರದ ಮೂಲಕ ಹಿಂಬಾಗಿಲಿನ ಚರ್ಚೆಗಳಿಗೆ ಚಾಲನೆ ನೀಡಿದೆ ಎಂದು ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಬರೆದುಕೊಂಡಿದ್ದಾರೆ.

ಇಸ್ರೋ ಸಾಧನೆಯ ಬಗ್ಗೆ ದೇಶ ಸದಾ ಹೆಮ್ಮೆ ಪಡುತ್ತದೆ. ಆದರೆ, ಈಗ ನಿಮ್ಮ ಸಾಧನೆ ಏನೆಂದು ಹೇಳಿ ನರೇಂದ್ರಮೋದಿ ? ಇನ್ನು ‘ಮನ್‌ ಕೀ ಬಾತ್’ ಸಾಕು ಮಾಡಿ, ‘ಕಾಮ್‌ ಕೀ ಬಾತ್‌’ ಹೇಳಿ. ಒಂಭತ್ತು ವರ್ಷ ದೇಶವನ್ನಾಳಿರುವ ನೀವು ದೇಶಕ್ಕೆ ನೀಡಿದ ಕೊಡುಗೆಯಾದರೂ ಏನು? ಮಾಡಿರುವ ಸಾಧನೆಯಾದರೂ ಏನೆಂದು ಹೇಳಿ. ನೋಟು ರದ್ದತಿ, ನಿರುದ್ಯೋಗದ ಹೆಚ್ಚಳ, ಉದ್ಯಮಿಗಳ ವಂಚನೆಗೆ ನೆರವು, ಕೋಮುದ್ವೇಷ ಮತ್ತು ಜನಾಂಗೀಯ ಹಿಂಸಾಚಾರಗಳಿಗೆ ಕುಮ್ಮಕ್ಕು, ಶತ್ರು ದೇಶ ನಮ್ಮ ನೆಲವನ್ನು ಆಕ್ರಮಿಸುತ್ತಿದ್ದರೂ ಬಾಯಿ ಬಿಡಲಾರದ ಹೇಡಿತನ- ಯಾವುದು ನಿಮ್ಮ ಸಾಧನೆ? ಹೇಳಿ ಎಂದು ಅವರು ಪ್ರಶ್ನಿಸಿದ್ದಾರೆ.

ಅದಾನಿ ಸಂಸ್ಥೆಯ ಅಕ್ರಮಗಳ ತನಿಖೆಗೆ ಜಂಟಿ ಸದನ ಸಮಿತಿ ಮಾಡಬೇಕು ಎನ್ನುವ ವಿಪಕ್ಷಗಳ ಆಗ್ರಹಕ್ಕೆ ನರೇಂದ್ರ ಮೋದಿ ಅವರು ಜಾಣಕಿವುಡಾಗಿದ್ದಾರೆ. ಉದ್ಯಮಪತಿಗಳೊಂದಿಗಿನ ತಮ್ಮ ಅಪವಿತ್ರ ಮೈತ್ರಿ ಪುರಾವೆ ಸಹಿತ ಹೊರಬೀಳುವ ಭಯ ಮೋದಿಯವರನ್ನು ಕಾಡುತ್ತಿದೆ. ದೇಶದ ಜನರನ್ನು ಕಾಡುತ್ತಿರುವ ಬೆಲೆ ಏರಿಕೆ, ನಿರುದ್ಯೋಗ, ಸಾಲದ ಮೇಲಿನ ಬಡ್ಡಿದರದ ಹೆಚ್ಚಳ, ಹೆಚ್ಚುತ್ತಿರುವ ಜನಾಂಗೀಯ ದ್ವೇಷ, ಹಿಂಸಾಚಾರ, ಪ್ರಕೃತಿ ವಿಕೋಪ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಹಾರ ಹುಡುಕಲಾಗದ ‘ಮೋದಿ & ಕಂಪೆನಿ’ ತಮ್ಮ ಹುಳುಕು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ವಿಫಲಯತ್ನಗಳಿಗೆ ಕೈಹಾಕಿದೆ. ಅವಸರದಲ್ಲಿ ಕರೆಯಲಾದ ಸಂಸತ್ ನ ವಿಶೇಷ ಅಧಿವೇಶನ, ‘ಒಂದೇ ದೇಶ, ಒಂದೇ ಚುನಾವಣೆ’ಯ ಬಗ್ಗೆ ಅನವಶ್ಯಕ ಚರ್ಚೆಯ ಮೂಲಕ ಜ್ವಲಂತ ಸಮಸ್ಯೆಗಳನ್ನು ಜನರ ಕಣ್ಣುಗಳಿಂದ ಮರೆಮಾಚುವ ಹತಾಶ ಕೆಲಸಕ್ಕೆ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಪುಕ್ಕಟೆ ಪ್ರಚಾರ ಪಡೆಯುವುದು, ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸುವುದು, ಮತ್ತೊಬ್ಬರ ಸಾಧನೆಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವುದು, ಕೋಮು ವಿಷವನ್ನು ಸಮಾಜದಲ್ಲಿ ಸದಾಕಾಲ ಬಿತ್ತುವುದು, ದಿಟ್ಟ ಪ್ರಶ್ನೆಗಳನ್ನು ಕೇಳಿದಾಗ ಜಾಗ ಖಾಲಿ ಮಾಡುವುದು ಇವೆಲ್ಲಾ ಯಾರ ಗುಣಗಳು ಎನ್ನುವುದನ್ನು ದೇಶದ ಜನತೆ ಈ ಒಂಬತ್ತು ವರ್ಷಗಳಲ್ಲಿ ಚೆನ್ನಾಗಿ ಅರಿತಿದ್ದಾರೆ. ಇನ್ನು ನಿಮ್ಮ ಈ ಆಟಗಳು ನಡೆಯವುದಿಲ್ಲ ಮಿಸ್ಟರ್ ನರೇಂದ್ರ ಮೋದಿ ಅವರೇ ಎಂದು ಅವರು ತಿರುಗೇಟು ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!