ನೀವು ಕುಂಭಮೇಳನಾದ್ರೂ ಮಾಡ್ಕೊಳಿ…ಏನಾದ್ರೂ ಮಾಡ್ಕೊಳಿ…ಅದ್ರ ಜೊತೆಗೆ ಮೊದ್ಲು ಕೆ.ಆರ್.ಪೇಟೆ ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಸೇರಿದಂತೆ ರಸ್ತೆಗಳ ಗುಂಡಿ ಮುಚ್ಚಿಸಿ ಡಾಂಬರೀಕರಣ ಮಾಡ್ಸಿ ಸಚಿವ ನಾರಾಯಣ ಗೌಡ್ರೇ ಎಂದು ಪಟ್ಟಣದ ಜನರು ಗೋಳಾಡುತ್ತಿದ್ದಾರೆ.
ಕುಂಭಮೇಳಕ್ಕೆ ರಾಜ್ಯ ಸರ್ಕಾರ ಎರಡು ಕೋಟಿ ಬಿಡುಗಡೆ ಮಾಡಿದ್ದು, ಇನ್ನೂ ಎರಡು ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಅಂತ ರೇಷ್ಮೆ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಹೇಳುತ್ತಾರೆ. ಆದರೆ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲವೆಂದು ಜನ ಅಲವತ್ತು ಕೊಂಡಿದ್ದಾರೆ. ಪ್ರತಿ ಮಳೆಯಲ್ಲೂ ತುಂಬಿ ಕೆರೆಯಂತಾಗುವ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಐದಾರು ಲಕ್ಷ ಹಣ ಹಾಕಿ ನೀರು ನಿಲ್ಲದಂತೆ ಮಾಡಿಸುವುದಕ್ಕೆ ಇವರ ಕೈಲಿ ಆಗಿಲ್ಲವೆಂದರೆ, ಸಚಿವರಾಗಿರೋದು ಏಕೆ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಬಸ್ ನಿಲ್ದಾಣ ಜಲಾವೃತ
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕೆ.ಆರ್.ಪೇಟೆ ಬಸ್ ನಿಲ್ದಾಣವು ಕೆರೆಯಂತಾಗಿದೆ. ಬಸ್ ನಿಲ್ದಾಣದಲ್ಲಿರುವ ಅಂಗಡಿ- ಮುಂಗಟ್ಟುಗಳು ಹಾಗೂ ಸ್ಕೂಟರ್ ಸ್ಟ್ಯಾಂಡ್ ಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಇದನ್ನೂ ಓದಿ : ಕುಂಭಮೇಳಕ್ಕೆ ಯೋಗಿ ಆದಿತ್ಯನಾಥ್: ಹಿಂದಿನ ಲೆಕ್ಕಾಚಾರಗಳೇನು?
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವನ್ನು ಚನ್ನಪ್ಪನ ಕಟ್ಟೆಯೆಂಬ ಕೆರೆಯೊಳಗೆ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಪ್ರತೀ ಭಾರಿಯೂ ಮಳೆ ಬಂದಾಗ ಬಸ್ ನಿಲ್ದಾಣದ ಆವರಣದಲ್ಲಿ ಕೆರೆಯಂತೆ ನೀರು ನಿಲ್ಲುವುದರಿಂದ ಜನಸಾಮಾನ್ಯರು ಹಾಗೂ ಪ್ರಯಾಣಿಕರ ಪರದಾಟ ಹೇಳ ತೀರದಂತಾಗಿದೆ.
ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಬಸ್ ನಿಲ್ದಾಣದಿಂದ, ಪಟ್ಟಣದಲ್ಲಿ ನೀರು ಸರಾಗವಾಗಿ ಹರಿದುಹೋಗಲು ನಿರ್ಮಿಸಿದ್ದ ರಾಜ ಕಾಲುವೆಯನ್ನು ಮುಚ್ಚಿರುವುದರಿಂದ ನೀರು ಬಸ್ ನಿಲ್ದಾಣದ ಒಳಗೆ ನಿಲ್ಲುತ್ತಿದೆ.
ಕೂಡಲೇ ಕೆ.ಆರ್.ಪೇಟೆ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಕ್ಷೇತ್ರದ ಶಾಸಕ,ಸಚಿವ ನಾರಾಯಣ ಗೌಡ ಸರಿಪಡಿಸಲಿ ಎನ್ನುವುದು ಜನರ ಆಗ್ರಹ.