Friday, October 18, 2024

ಪ್ರಾಯೋಗಿಕ ಆವೃತ್ತಿ

ಹಣತೆ ಮತ್ತು ನೇಸರನ ಚಿತ್ರಪಟ

ಗವ್ವೆನ್ನುವ ಕಾರ್ಗತ್ತಲೆಯ
ಭೀಕರತೆಯಲಿ
ನಡಿಗೆಯ ದಾರಿ
ಯಾವುದೆಂಬುದೇ
ತಿಳಿಯುತಿಲ್ಲ

ಆಸರೆಗೆ
ಸಣ್ಣದೊಂದು
ಹಣತೆಯ
ಹಚ್ಚಿಟ್ಟುಕೊಂಡು
ಕತ್ತಲಿನೆದುರು
ಸೆಣೆಸಲು
ಹಂಬಲಿಸಿದಾಗಲೆಲ್ಲ
ಬುದ್ದಿವಂತರು ಬಂದು
ಬೆದರಿಸುತ್ತಾರೆ
“ಜೋಕೆ,
ಅದು ಬೆಳಕಷ್ಟೇ ಅಲ್ಲ
ದೀಪದ ಜ್ವಾಲೆ!
ನಾಳೆ, ಬೆಂಕಿಯಾಗಿ
ನಿನ್ನನ್ನೇ ಸುಟ್ಟೀತು
ಎಚ್ಚರ.. ಎಚ್ಚರ.. ಎಚ್ಚರ”
ಎಂದು.

ಮುಂದೆಂದೋ ಹುಟ್ಟುವ
ನೇಸರನೇ
ಶಾಶ್ವತ ಸತ್ಯವಂತೆ,
ಅದು ಮಾತ್ರವೇ
ದಿಟದ ಬೆಳಕಂತೆ,
ಸರಿ, ಬುದ್ದಿವಂತರೇ
ಅದನ್ನೂ ನಂಬುತ್ತೇವೆ;
ಆದರೆ,
ಯಥಾಪ್ರಕಾರ
ಸಂಧ್ಯಾಕಾಲಕ್ಕೆ ಸರಿಯಾಗಿ
ಮತ್ತೆ ಪತನಗೊಂಡು
ಕಾರ್ಗತ್ತಲ
ಕವುಚಿಹೋಗುವ
ನೇಸರನ ಆಟದಲಿ
ಹಣತೆಗಳ ಆಸರೆಯೇ
ನಮಗೆ ಬೇಡವೇ?

ನೀವು ಹುಟ್ಟಿಸುವ
ಜ್ವಾಲೆಯ ಭೀತಿಯಲಿ
ಮಿಣುಕು ಜ್ಯೋತಿಗಳನೂ
ನಂದಿಸಿಟ್ಟು
ಕಾರ್ಗತ್ತಲ ತೊತ್ತುಗಳಾಗಿ
ಸವೆದು ಹೋಗೋಣವೇ?
ಯಾರಿಗೆ ಗೊತ್ತು,
ಮುಂದೆ ಹುಟ್ಟುವ
ನೇಸರನನು
ಮುಗಿಲ
ಕಡು ಕಾರ್ಮೋಡಗಳು
ಅಡ್ಡಗಟ್ಟಿ
ಮತ್ತೆ ಮುಸುಗುಗತ್ತಲೆಯ
ತಂದೊಡ್ಡುವುದಿಲ್ಲವೆಂದು?
ಆಗಲೂ ಇರುವುದೇ
ಈ ನಿಮ್ಮ
ಹಣತೆಯ ನಿರಾಕರಣೆ

ಈ ರಾತ್ರಿಯ
ಕಗ್ಗತ್ತಲ ಗೋಡೆಗೆ
ನೀವು ಅಂಟಿಸಿದ
ನೇಸರನ ಚಿತ್ರಪಟ
ಎಷ್ಟು ಚೆಂದವಿದ್ದರೇನು,
ಅಂಗೈ ಹಣತೆ ಮಾಡುವ
ತತ್ಕಾಲದ ಕಾಯಕವನು
ಚಿತ್ರಪಟದೊಳಗಿನ
ನೇಸರ ಮಾಡಿಯಾನೆ?

ಸಾಲು ಹಣತೆಯ
ಮೆರವಣಿಗೆ
ಹೊರಟಿದ್ದೇವೆ ನಾವು
ಕಗ್ಗತ್ತಲ ಸೀಳಿ
ದಾರಿ ಹುಡುಕಲೆಂದು,
ತೊತ್ತಾಗುವುದಕಿಂತ
ಸುಟ್ಟು ಹೋಗುವುದೇ
ಸ್ವಾಭಿಮಾನವೆಂದು;
ಇದು
ಅಪರಾಧವಾಗಿದ್ದರೆ
ದಯವಿಟ್ಟು
ಮನ್ನಿಸಿಬಿಡಿ,
ಈ ಮುಠ್ಠಾಳರಿಗೆ
ಯಾವತ್ತೂ
ಬುದ್ದಿ ಬರುವುದೇ
ಇಲ್ಲವೆಂದುಕೊಂಡು.

ಅಂದಹಾಗೆ,
ನಮಗೂ ಇದೆ
ನಾಳೆಯ
ಆ ನೇಸರನ ಹಂಬಲ;
ಆದರೆ, ಬುದ್ದಿವಂತರೇ
ನಿಮಗ್ಯಾಕೆ
ಅರ್ಥವಾಗುತ್ತಿಲ್ಲ,
ಕಾರ್ಗತ್ತಲೆಯ
ಈ ಹೊತ್ತಿನ
ನಮ್ಮ ತಳಮಳ!

✍🏿 ಗಿರೀಶ್ ತಾಳಿಕಟ್ಟೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!