Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೊರಾಕೊದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 300 ಜನ ಸಾವು

ಉತ್ತರ ಆಫ್ರಿಕಾದ ಮೊರಾಕೊದಲ್ಲಿ ಸೆ.8ರ ತಡರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಅವಘಡದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 150 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರಾತ್ರಿ 11:11ಕ್ಕೆ 18.5 ಕಿಲೋ ಮೀಟರ್ ಆಳದಲ್ಲಿ ಮರ್ರಾಕೇಶ್‌ನ ನೈಋತ್ಯಕ್ಕೆ 71 ಕಿಲೋಮೀಟರ್‌ಗಳಷ್ಟು ಭೂಕಂಪ ಸಂಭವಿಸಿದೆ. ಕರಾವಳಿ ನಗರಗಳಾದ ರಬತ್, ಕಾಸಾಬ್ಲಾಂಕಾ ಮತ್ತು ಎಸ್ಸೌಯಿರಾಗಳಲ್ಲೂ ಭೂಕಂಪನದ ಅನುಭವವಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

“>

ವರದಿಗಳ ಪ್ರಕಾರ, ಭೂಕಂಪದಿಂದ ಅಲ್-ಹೌಜ್, ಮರ್ರಾಕೇಶ್, ಔರ್ಜಾಜೆಟ್, ಅಜಿಲಾಲ್, ಚಿಚೌವಾ ಮತ್ತು ತಾರೌಡಾಂಟ್ ಪ್ರಾಂತ್ಯಗಳು ಮತ್ತು ಪುರಸಭೆ ಪ್ರದೇಶಗಳಲ್ಲಿ 296 ಜನರು ಸಾವನ್ನಪ್ಪಿದ್ದಾರೆ. 153 ಜನರು ಗಾಯಗೊಂಡಿದ್ದಾರೆ ಎಂದು ಮೊರಾಕೊದ ಆಂತರಿಕ ಸಚಿವಾಲಯ ತಿಳಿಸಿದೆ.

ಭೂಕಂಪದ ವೇಳೆ ಒಂದು ಕಡೆಯಲ್ಲಿ ಕಟ್ಟಡಗಳು ನೆಲಸಮವಾಗುತ್ತಿದ್ದರೆ, ಇನ್ನೊಂದು ಕಡೆ ಜನರೆಲ್ಲ ಮನೆಯ ಹೊರಗಡೆ ಬಂದು ಚೀರಾಡುತ್ತಿದ್ದರು. ಮಕ್ಕಳು ಅಳುತ್ತಿದ್ದರು. ಭೂಕಂಪದಿಂದ 10 ನಿಮಿಷಗಳ ಕಾಲ ವಿದ್ಯುತ್​​ ಮತ್ತು ನೆಟ್‌ವರ್ಕ್ ಸ್ಥಗಿತಗೊಂಡಿತ್ತು. ಈಗ ತಾತ್ಕಾಲಿಕ ನೆಟ್‍ವರ್ಕ್ ವ್ಯವಸ್ಥೆ ಮಾಡಲಾಗಿದೆ. ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“>

ಭೂಕಂಪದಲ್ಲಿ ಗಾಯಗೊಂಡವರನ್ನು ಮರಕೇಶ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭೂಕಂಪದ ಕೇಂದ್ರಬಿಂದು ಅಲ್-ಹೌಜ್ ಪಟ್ಟಣದಲ್ಲಿರುವ ಮನೆಗಳು ಕುಸಿದು, ಅವಶೇಷಗಳ ಅಡಿಯಲ್ಲಿ ಅನೇಕ ಜನರು ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆದಿದೆ. ಭೂಕಂಪನದ ತೀವ್ರತೆ ಹೆಚ್ಚಾದ ಕಾರಣ ಆ ಪ್ರದೇಶದಲ್ಲಿರುವ ಕಟ್ಟಡಗಳು ಸೇರಿದಂತೆ ಪುರಾತನ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಪೊಲೀಸ್​​​ ಅಧಿಕಾರಿಗಳು ತಿಳಿಸಿದ್ದಾರೆ.

ನೆರೆಯ ಅಲ್ಜೀರಿಯಾದಲ್ಲಿಯೂ ಭೂಕಂಪದ ಅನುಭವವಾಗಿದೆ. ಯಾವುದೇ ಹಾನಿ ಅಥವಾ ಸಾವುನೋವುಗಳನ್ನು ಉಂಟುಮಾಡಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೂಕಂಪನ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ. ಹಲವಾರು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಕರಾವಳಿ ನಗರಗಳಾದ ರಬತ್, ಕಾಸಾಬ್ಲಾಂಕಾ ಮತ್ತು ಎಸ್ಸೌಯಿರಾಗಳಲ್ಲೂ ಭೂಕಂಪನದ ಅನುಭವವಾಗಿದೆ. ಆದರೆ, ಯಾವುದೇ ಹೆಚ್ಚಿನ ಹಾನಿ ಉಂಟಾಗಿಲ್ಲ. ಆದರೆ ಇದರಿಂದ ಅಲ್ಲಿನ ಜನ ತುಂಬಾ ಭಯಭೀತರಾಗಿದ್ದಾರೆ ಎಂದು ಹೇಳಲಾಗಿದೆ.

2004ರಲ್ಲಿ ಭೂಕಂಪ 628 ಮಂದಿ ಸಾವು

ಮರ್ರಾಕೆಚ್‌ನ ನೈಋತ್ಯ ಭಾಗ ಭೂಕಂಪನಕ್ಕೆ ಗುರಿಯಾಗುವ ಪ್ರದೇಶವಾಗಿದೆ. 2004ರಲ್ಲಿ ಈಶಾನ್ಯ ಮೊರಾಕ್ಕೋದ ಅಲ್ ಹೋಸಿಮಾದಲ್ಲಿ ಭೂಕಂಪ ಸಂಭವಿಸಿದಾಗ ಕನಿಷ್ಠ 628 ಜನರು ಸಾವನ್ನಪ್ಪಿದ್ದರು. 926 ಜನರು ಗಾಯಗೊಂಡಿದ್ದರು. 1980ರಲ್ಲಿ ನೆರೆಯ ಅಲ್ಜೀರಿಯಾದಲ್ಲಿ 7.3 ತೀವ್ರತೆಯ ಭೂಕಂಪ ಉಂಟಾಗಿತ್ತು. ಈ ವೇಳೆ, 2,500 ಜನರ ಸಾವನ್ನಪ್ಪಿದ್ದರು. ಇದರಿಂದ ಕನಿಷ್ಠ 3,00,000 ಜನರು ನಿರಾಶ್ರಿತರಾಗಿದ್ದರು.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!