Wednesday, May 15, 2024

ಪ್ರಾಯೋಗಿಕ ಆವೃತ್ತಿ

ಬೆಂ-ಮೈ ಹೆದ್ದಾರಿ ಸಮಸ್ಯೆಗಳ ಬಗ್ಗೆ ನಿತಿನ್ ಗಡ್ಕರಿ ಗಮನ ಸೆಳೆದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮಧು ಮಾದೇಗೌಡ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗಮನ ಸೆಳೆದರು.

ಬೆಂಗಳೂರಿನಲ್ಲಿಂದು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಹೆಲಿಕಾಪ್ಟರ್ ನಲ್ಲಿ ವೀಕ್ಷಣೆ ಮಾಡಿದ ಸಚಿವ ನಿತಿನ್ ಗಡ್ಕರಿ ಬೆಂಗಳೂರಿನಲ್ಲಿ ಸಭೆ ನಡೆಸಿ ಮಂಡ್ಯ ಭಾಗದ ಶಾಸಕರಿಂದ ಅಹವಾಲು ಸ್ವೀಕರಿಸಿದರು. ದಿನೇಶ್ ಗೂಳಿಗೌಡ ಹಾಗೂ ಮಧುಮಾದೇಗೌಡ ಸಚಿವ ಗಡ್ಕರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಪರಿಹರಿಸುವಂತೆ ಮನವಿ ಮಾಡಿದರು

ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಜನರು ಬಳಸಲು ಅನುಕೂಲವಾಗುವಂತೆ ಹೆದ್ದಾರಿಗೆ ಪ್ರವೇಶ ಹಾಗೂ ನಿರ್ಗಮನ ದ್ವಾರ ನಿರ್ಮಿಸಬೇಕು.ಹೆದ್ದಾರಿಯ ಎರಡೂ ಕಡೆಗಳಲ್ಲಿ ಹಾಕಿರುವ ಫೆನ್ಸಿಂಗ್‌ ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ ಇವುಗಳನ್ನು ಹೊಸತಾಗಿ ಹಾಕಬೇಕು, ರಸ್ತೆಗಳಲ್ಲಿರುವ ಉಬ್ಬು- ತಗ್ಗುಗಳನ್ನು ಸರಿಪಡಿಸಬೇಕು. ಮೇಲ್ಸೇತುವೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತುಕೊಳ್ಳುತ್ತಿದ್ದು, ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ವಿಶ್ರಾಂತಿ ತಂಗುದಾಣ ನಿರ್ಮಾಣ ಮಾಡಬೇಕು

ರಸ್ತೆಯ ಎರಡೂ ಕಡೆ ಒಳಚರಂಡಿ ವ್ಯವಸ್ಥೆ ಮಾಡಬೇಕು, ಮೈಸೂರು-ಬೆಂಗಳೂರು ಮಧ್ಯ ಭಾಗದಲ್ಲಿ ಸಾರ್ವಜನಿಕರಿಗೆ ಶೌಚಾಲಯ ಒಳಗೊಂಡಂತೆ ವಿಶ್ರಾಂತಿ ತಂಗುದಾಣ ನಿರ್ಮಾಣ ಮಾಡಬೇಕು. ವಿಐಪಿಗಳಿಗೆ ಮತ್ತು ಆಂಬುಲೆನ್ಸ್‌ಗಳಿಗೆ ಪ್ರತ್ಯೇಕ ವ್ಯವಸ್ಥೆ, ಭೂಸ್ವಾದೀನ ಪಡಿಸಿಕೊಂಡ ರೈತರಿಗೆ ಪರಿಹಾರ ಕೊಡಬೇಕು, ಆದಷ್ಟು ಶೀಘ್ರವಾಗಿ ಇವುಗಳನ್ನು ಮಾಡಬೇಕು ಎಂದು ಶಾಸಕರು ಕೇಂದ್ರ ಸಚಿವರಿಗೆ ಮನವಿ ಮಾಡಿದರು.

ಮದ್ದೂರು ನಗರವು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ರ ಮಧ್ಯದಲ್ಲಿ ಬರುವ ಪಟ್ಟಣವಾಗಿದೆ. ಅಲ್ಲದೆ, ಇದು ಇತರ ಪ್ರಮುಖ ರಾಜ್ಯ ಹೆದ್ದಾರಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಸ್ಥಳವಾಗಿದೆ. ಮದ್ದೂರು-ಮಳವಳ್ಳಿ, ಮದ್ದೂರು-ನಾಗಮಂಗಲ, ಮದ್ದೂರು-ತುಮಕೂರು ಮತ್ತು ಮದ್ದೂರು-ಹಲಗೂರು 4 ರಾಜ್ಯ ಹೆದ್ದಾರಿಗಳನ್ನು ಹೊಂದಿದ್ದು, ಮದ್ದೂರು ತಾಲೂಕಿನ ನಿಡಘಟ್ಟ ಮತ್ತು ಚನ್ನೇಗೌಡನದೊಡ್ಡಿ ಗ್ರಾಮಗಳಲ್ಲಿ ನಿರ್ಗಮನ ಮತ್ತು ಪ್ರವೇಶಕ್ಕೆ ಸಂಪರ್ಕ ರಸ್ತೆಯನ್ನು ಮಾಡಬೇಕಿದೆ ಎಂದು ಶಾಸಕರು ಕೇಂದ್ರ ಸಚಿವರ ಗಮನಕ್ಕೆ ತಂದರು.

ನಿರ್ಗಮನ ಮತ್ತು ಪ್ರವೇಶ ಮಾರ್ಗವನ್ನು ಹೊಂದಿಲ್ಲ

ಈ ಎಕ್ಸ್‌ಪ್ರೆಸ್‌ ಹೆದ್ದಾರಿಯು ಸಕ್ಕರೆ ನಗರಿ ಮಂಡ್ಯ, ಪಾರಂಪರಿಕ ನಗರಿ ಶ್ರೀರಂಗಪಟ್ಟಣ, ಆಟಿಕೆಗಳ ನಗರಿ ಚನ್ನಪಟ್ಟಣ ಮತ್ತು ರೇಷ್ಮೆ ನಗರಿ ರಾಮನಗರವನ್ನು ಸಂಪರ್ಕಿಸುತ್ತದೆ, ಈ ಜಿಲ್ಲಾ ಕೇಂದ್ರವು ಹೊಸ ಹೆದ್ದಾರಿಯಿಂದ ಸರಿಯಾದ ನಿರ್ಗಮನ ಮತ್ತು ಪ್ರವೇಶ ಮಾರ್ಗವನ್ನು ಹೊಂದಿಲ್ಲ, ಇದು ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಇತರ ವಾಣಿಜ್ಯ ಚಟುವಟಿಕೆಗಳಿಗೆ ಗಂಭೀರ ಸಮಸ್ಯೆಯನ್ನು ಉಂಟುಮಾಡುತ್ತದೆ. ಹೀಗಾಗಿ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಜನರಿಗೆ ಅನುಕೂಲವಾಗುವಂತೆ ನಿರ್ಗಮನ ಮತ್ತು ಪ್ರವೇಶ ಮಾರ್ಗವನ್ನು ಕಲ್ಪಿಸುವಂತೆ ಮನವಿ ಮಾಡಿದರು.

ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ

ಈ ಯೋಜನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನಕ್ಕಾಗಿ ಇಂದಿನವರೆಗೆ ಅನೇಕ ರೈತರು ಸೂಕ್ತ ಪರಿಹಾರವನ್ನು ಇನ್ನೂ ಪಡೆದಿಲ್ಲ. ಅಲ್ಲದೆ, ಈ ಎಕ್ಸ್‌ಪ್ರೆಸ್‌ ಹೆದ್ದಾರಿಯ ಎರಡೂ ಬದಿಗಳಲ್ಲಿ ಬೇಲಿಗಳಿಲ್ಲ, ಆದ್ದರಿಂದ ಸರಿಯಾದ ಗುಣಮಟ್ಟದ ಬೇಲಿ ಮತ್ತು ಎಕ್ಸ್‌ಪ್ರೆಸ್‌ ಹೆದ್ದಾರಿಯ ಎರಡೂ ಬದಿಗಳಲ್ಲಿನ ರಸ್ತೆಗಳನ್ನು ಸರಿಯಾಗಿ ಸಮತಟ್ಟುಗೊಳಿಸುವ ಅಗತ್ಯವಿದೆ ಎಂದೂ ಸಹ ಶಾಸಕರು ಗಮನಕ್ಕೆ ತಂದಿದ್ದಾರೆ. ಕೆಲವು ಸೇತುವೆಗಳು ಮತ್ತು ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುತ್ತಿದೆ. ಹೀಗಾಗಿ ಸಮರ್ಪಕ ಒಳಚರಂಡಿ ವ್ಯವಸ್ಥೆಯನ್ನು ಮಾಡಬೇಕು. ಹೆದ್ದಾರಿಯ ಎರಡೂ ಬದಿಗಳಲ್ಲಿ ವಿಶ್ರಾಂತಿ ಕೊಠಡಿಗಳ ಅವಶ್ಯಕತೆ ಇದೆ. ಜತೆಗೆ ಆಂಬ್ಯುಲೆನ್ಸ್ ಮತ್ತು ವಿವಿಐಪಿ ಬೆಂಗಾವಲು ವಾಹನಗಳ ಸುಗಮ ಸಂಚಾರಕ್ಕೆ ಪ್ರತ್ಯೇಕ ಟೋಲ್ ಲೈನ್‌ ಇರಬೇಕು ಎಂದೂ ಸಹ ಶಾಸಕರು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.

ನಾಲ್ವಡಿ ಹೆಸರು ನಾಮಕರಣಕ್ಕೆ ಮನವಿ

ಕುಡಿಯುವ ನೀರನ್ನು ಒದಗಿಸುವ ಮತ್ತು ರಾಜ್ಯದ ಜನರಿಗೆ ಕೃಷಿ ಚಟುವಟಿಕೆಯನ್ನು ಸುಗಮಗೊಳಿಸುವ ಕೆ.ಆರ್.ಎಸ್. ಅಣೆಕಟ್ಟನ್ನು ನಿರ್ಮಿಸುವ ವೆಚ್ಚವನ್ನು ಭರಿಸಲು ಅರಮನೆಯ ಒಡವೆಗಳನ್ನು ಅಡವಿಟ್ಟ ಮೈಸೂರು ರಾಜಮನೆತನದ ಮಹಾರಾಜ ದಿವಂಗತ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಔದಾರ್ಯವನ್ನು ಕರ್ನಾಟಕ ಮತ್ತು ದೇಶದ ಜನರು ಎಂದಿಗೂ ಮರೆಯುವುದಿಲ್ಲ. ಹೀಗಾಗಿ ಈ ಹೆದ್ದಾರಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಡಬೇಕು ಎಂದು ಶಾಸಕರು ಈ ವೇಳೆ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!