ಮಂಡ್ಯ ತಾಲ್ಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ಯುವತಿಯನ್ನು ಪ್ರೀತಿಸುವ ನಾಟಕವಾಡಿ ವಂಚಿಸಿದ ಪರಿಣಾಮ ಮಗಳು ವಿಜಯಲಕ್ಷ್ಮಿ (21) ಹಾಗೂ ಆಕೆಯ ತಾಯಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರ ವಿರುದ್ದ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೆಬ್ಬಕವಾಡಿ ಗ್ರಾಮದ ಮನೋಹರ್ ಬಿನ್ ನಂಜುಂಡೇಗೌಡ ನೀಡಿದ ದೂರಿನ ಅನ್ವಯ ಆತ್ಮಹತ್ಯೆಗೀಡಾದ ವಿಜಯಲಕ್ಷ್ಮಿಯ ಪ್ರಿಯಕರ ಹರಿಕೃಷ್ಣ (ಎ1), ಆತನ ಚಿಕ್ಕಪ್ಪ ಎಂ.ಟಿ ನಾಗರಾಜು, ಹೆಂಡತಿ ಗೋಮತಿ, ಮಾರಸಿಂಗನಹಳ್ಳಿ ಶ್ರೀಧರ ಬಿನ್ ಲೇಟ್ ತಿಮ್ಮೇಗೌಡ, ಮಾರಸಿಂಗನಹಳ್ಳಿ ಪುಟ್ಟೇಗೌಡ ಮತ್ತು ಶೋಭ(ಹೆಂಡತಿ), ಮಾರಸಿಂಗನಹಳ್ಳಿ ಚಿಕ್ಕತಿಮ್ಮೇಗೌಡ ಮತ್ತು ಪುಷ್ಪ(ಹೆಂಡತಿ), ಮಾರಸಿಂಗನಹಳ್ಳಿ ನಾಗಣ್ಣ ಮತ್ತು ಗೌರಮ್ಮ(ಹೆಂಡತಿ), ಹೆಬ್ಬಕವಾಡಿ ಸುಜೇಂದ್ರ ಮತ್ತು ಪವಿತ್ರ (ಹೆಂಡತಿ), ಹೆಬ್ಬಕವಾಡಿ ಪ್ರಕಾಶ ಹಾಗೂ ಸರಸ್ವತಿ (ಹೆಂಡತಿ), ಹೆಬ್ಬಕವಾಡಿ ಮಂಜು ಶಿವಶಂಕರ (ಅಣ್ಣ) ಮಾರಸಿಂಗನಹಳ್ಳಿ ಹಾಗೂ ನಾಗೇಂದ್ರ(ಜೋಗಿ) ಯಾಚೇನಹಳ್ಳಿ (ಅಕ್ಕನಮಗ) ಇವರ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ನಿನ್ನೆ ಆತ್ಮಹತ್ಯೆ ಮಾಡಿಕೊಂಡ ಮೃತ ಯುವತಿ ವಿಜಯಲಕ್ಷ್ಮಿ ಅವರ ಲಕ್ಷ್ಮಿಯು ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಮಾರಸಿಂಗನಳ್ಳಿ ಹರಿಕೃಷ್ಣ ಸೇರಿದಂತೆ ಆತನ ಬೆಂಬಲಕ್ಕೆ ನಿಂತವರೇ ಕಾರಣ, ನನ್ನ ಮಗಳ ಸಾವಿನಿಂದ ನೊಂದಿದ್ದೇನೆ, ನನಗೆ ನ್ಯಾಯ ಕೊಡಿಸಿ ಎಂದು ಆರೋಪಿಗಳ ಹೆಸರುಗಳನ್ನು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಯ ವಿವರ
ಕಳೆದ ಕೆಲವು ವರ್ಷಗಳಿಂದ ಮಾರಸಿಂಗನಹಳ್ಳಿಯ ಹರಿಕೃಷ್ಣ ಹಾಗೂ ಹೆಬ್ಬಕವಾಡಿಯ ವಿಜಯಲಕ್ಷ್ಮಿ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂದರ್ಭದಲ್ಲಿ ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿತ್ತು. ಆದರೆ ಇತ್ತೀಚಿಗೆ ಹರಿಕೃಷ್ಣ ಬೇರೆ ಹುಡುಗಿಯರ ಓಡಾಡುತ್ತಿದ್ದ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿದ್ದ ಯುವತಿ, ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದಿದ್ದಳು. ಆಗ ಮದುವೆಗೆ ನಿರಾಕರಿಸಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿದ್ದ ಎನ್ನಲಾಗಿದೆ.
ಇದರಿಂದ ಮನನೊಂದ ವಿಜಯಲಕ್ಷ್ಮಿ ಕಳೆದ 20 ದಿನಗಳ ಹಿಂದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ತಂದೆ ನಂಜುಂಡೇಗೌಡ ಮಂಡ್ಯ ಗ್ರಾಮಾಂತರ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಆತನ ಮೇಲೆಯೇ ಎಫ್ಐಆರ್ ದಾಖಲಿಸಿದ್ದರು ಎನ್ನಲಾಗಿದೆ. ಇದರಿಂದ ಕಂಗಾಲಾದ ತಾಯಿ ಲಕ್ಷ್ಮಿ ತನ್ನ ಮಗಳ ಸಾವಿಗೆ ನ್ಯಾಯ ಸಿಗಲಿಲ್ಲ. ನಮಗೆ ನೆಮ್ಮದಿಯೂ ಇಲ್ಲ ಎಂದು ನೊಂದು ನಿನ್ನೆ ಗುರುವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತದೇಹವನ್ನು ಸಾಗಿಸಲು ಬಿಡದೇ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದ್ದಾರೆ. ಆರೋಪಿಯನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ವಿಜಯಲಕ್ಷ್ಮೀ ಇತ್ತೀಚೆಗಷ್ಟೇ ಡಿಗ್ರಿ ಮುಗಿಸಿ ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ಓದುವಾಗಲೇ ತನ್ನೂರಿನ ಮೊಮ್ಮಗ, ಪಕ್ಕದ ಗ್ರಾಮ ಮಾರಸಿಂಗನಹಳ್ಳಿ ಗ್ರಾಮದ ಹರಿಕೃಷ್ಣ ಎಂಬಾತನ ಪ್ರೀತಿ ಬಲೆಗೆ ಬಿದ್ದಿದ್ದಳು. ಪರಸ್ಪರ ಇಬ್ಬರು ಒಂದೂವರೆ ವರ್ಷದಿಂದ ಪ್ರೀತಿಸಿದ್ದರು.




