Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಾಲ್ವಡಿ ಪ್ರತಿಮೆ ಸ್ಥಾಪನೆ, ಕಲಾಮಂದಿರ ನವೀಕರಣಕ್ಕೆ ಕ್ರಮ- ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಹಾಗೂ ಸ್ವಾತಂತ್ರ ಹೋರಾಟಕ್ಕೆ ಮುನ್ನುಡಿ ಬರೆದಿರುವ ಪಾರಂಪಾರಿಕ ಕಟ್ಟಡ ಹಾಗೂ ಕ್ಷೇತ್ರಗಳ ಅಭಿವೃದ್ದಿಗೆ ಅಗತ್ಯ ಕ್ರಮ ವಹಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜಿ.ಪಂ.ಕಾರ್ಯಾಲಯದ ಕಾವೇರಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ ಹೋರಾಟಕ್ಕೆ ಮುನ್ನುಡಿ ಬರೆದ ಶಿವಪುರ ಧ್ವಜ ಸತ್ಯಾಗ್ರಹದ ಅಭಿವೃದ್ದಿಗೆ ಅಗತ್ಯವಿರುವ ಪ್ರತಿಷ್ಟಾನ ರಚನೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ನಾಲ್ವಡಿ ಪ್ರತಿಮೆ ನಿರ್ಮಾಣಕ್ಕೆ ಕ್ರಮ

ಮಂಡ್ಯ ಜಿಲ್ಲೆಯ ರಚನೆ ಹಾಗೂ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ನಾಲ್ವಡಿ‌ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ನಿರ್ಮಾಣ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು, ನಾಲ್ವಡಿ ಪ್ರತಿಮೆ ನಿರ್ಮಾಣ ಮಾಡಬೇಕೆಂಬುದು ಬಹಳ ವರ್ಷದಿಂದ ನಡೆಯುತ್ತಿರುವ ಪ್ರಯತ್ನವಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ತಿಳಿಸಿದರು.

ಕೆ.ಆರ್.ಎಸ್. ಅಚ್ಚುಕಟ್ಟು ಪ್ರದೇಶದಲ್ಲಿ ಹಸಿರು ಕಾಣುತ್ತಿರುವುದು ಹಾಗೂ ಜಿಲ್ಲೆಯಲ್ಲಿ ರೈತ ಚಟುವಟಿಕೆ ಉಸಿರಾಗಿರುವರೆಗೂ ನಾಲ್ವಡಿ ಅವರ ನೆನಪು ಸದಾ ಜನತೆಯಲ್ಲಿ ಇರುತ್ತದೆ. ಈ ಹಿನ್ನಲೆಯಲ್ಲಿ ನಾಲ್ವಡಿ ಅವರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಅನುದಾನ, ಶಾಸಕರ ಅನುದಾನ ಹಾಗೂ ಸಾರ್ವಜನಿಕರಿಂದ ದೇಣಿಗೆ ಸಹ ಸಂಗ್ರಹಿಸುವುದು ಸೂಕ್ತ ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ಕೃಷ್ಣ ಶಿಲೆಯಲ್ಲಿ ಮಾಡಲು 35 ಲಕ್ಷ ರೂ, ಪಂಚಲೋಹದಲ್ಲಿ ನಿರ್ಮಾಣ ಮಾಡಿದರೆ 50 ಲಕ್ಷ ರೂ ವೆಚ್ಚವಾಗಲಿದೆ. ಇದಕ್ಕೆ ಯೋಜನೆ ಸಿದ್ಧಪಡಿಸಿದ್ದು, ಸ್ಥಳವನ್ನು ನಿಗದಿಪಡಿಸಬೇಕಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕನ್ನಂಬಾಡಿ ನಿರ್ಮಾಣ ಮಾಡಿ, ಮಂಡ್ಯ ಜಿಲ್ಲೆಯ ಜನತೆಗೆ ಅನ್ನದಾತರಾಗಿರುವ ನಾಲ್ವಡಿ ಅವರ ಪ್ರತಿಮೆಯನ್ನು‌ ಸಿಲ್ವರ್ ಜ್ಯೂಬಲಿ ಪಾಕ್೯ ನಲ್ಲಿ ನಿರ್ಮಾಣ ಮಾಡುವುದು ಸೂಕ್ತ ಎಂದು ಶಾಸಕ ರವಿಕುಮಾರ್ ಗಣಿಗ ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಲವು ಸಂಘಟನೆಯ ಮುಖ್ಯಸ್ಥರು ನಾಲ್ವಡಿ ಅವರ ಪ್ರತಿಮೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಿದರು‌. ಹಾಗೂ ಪ್ರತಿಮೆಯೊಂದಿಗೆ ಅವರ ಜೀವನ ಚರಿತ್ರೆ ಹಾಗೂ ಆಟ್೯ ಗ್ಯಾಲರಿ ಸಹ ನಿರ್ಮಾಣ ಮಾಡಿದರೆ. ಜನರು ಅವರ ಜೀವನ ಚಿತ್ರ ಬಗ್ಗೆ ಹೆಚ್ಚು ಅರಿಯಲು ಸಾಧ್ಯ ಎಂದರು.

ಸಭೆಯಲ್ಲಿ ಶಾಸಕರಾದ ಉದಯ್ ಕೆ.ಎಂ, ವಿಧಾನ ಪರಿಷತ್ ಶಾಸಕರಾದ ಮಧು.ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

₹ 1.60 ಕೋಟಿ ವೆಚ್ಚದಲ್ಲಿ ಕಲಾಮಂದಿರ ನವೀಕರಣ

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರವನ್ನು 1.60 ಕೋಟಿ ರೂ ವೆಚ್ಚದಲ್ಲಿ ನವೀಕರಣ ಮಾಡಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.

ನವೀಕರಣ ಕಾಮಗಾರಿಯ ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಸೀಲಿಂಗ್, ವೈರಿಂಗ್ ಸೌಂಡ್ ಸಿಸ್ಟಮ್ ಗಳ ನವೀಕರಣಕ್ಕೆ ಥಿಯೇಟರ್ ಎಕ್ಸ್ ಪಟ್೯ಗಳ ಅಭಿಪ್ರಾಯ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕಲಾಮಂದಿರ ನವೀಕರಣಕ್ಕೆ ಸಂಬಂಧಿಸಿದಂತೆ 63 ಲಕ್ಷ ರೂ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಹಾಗೂ 97 ಲಕ್ಷ ರೂ ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಸಂಪನ್ಮೂಲ ಕ್ರೋಡೀಕರಣಕ್ಕೆ‌ ಕ್ರಮ

ರೈತ ಸಭಾಂಗಣ ನವೀಕರಣಕ್ಕೆ 61.50 ಲಕ್ಷ ರೂ ವೆಚ್ಚದಲ್ಲಿ ನವೀಕರಣ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. 17 ಲಕ್ಷ ರೂ ಅನುದಾನ ಲಭ್ಯವಿದ್ದು, ಉಳಿದ ಅನುದಾನವನ್ನು ಕ್ರೋಡಿಕರಣ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರಿಗೆ ಮಾಹಿತಿ ನೀಡಿದರು.

ಪ್ರಸಿದ್ದ ಧಾರ್ಮಿಕ ಕ್ಷೇತ್ರ ಚಲುವನಾರಾಯಣಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ದಿಗೆ ಅಗತ್ಯ ಕ್ರಮ ವಹಿಸಲಾಗುವುದು, ಈ ಸಂಬಂಧ ಸಕಾಲದಲ್ಲಿ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ದಿಪಡಿಸುವ ಚಿಂತನೆ ನಮ್ಮದಾಗಿದೆ ಎಂದರು.

ಅನುದಾನವನ್ನು ಕ್ರೋಡೀಕರಿಸಲು ಆರ್.ಎ.ಪಿ.ಸಿ.ಎಂ.ಎಸ್, ಡಿ.ಸಿ.ಸಿ ಬ್ಯಾಂಕ್ ಸೇರಿದಂತೆ ಇನ್ನಿತರ ಇಲಾಖೆಯ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು, ಎಸ್ಪಿ ಡಾ.ಯತೀಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!