ಜೆಡಿಎಸ್ ವರಿಷ್ಠರ ಮೇಲೆ ಜಿಲ್ಲಾ ಕಾಂಗ್ರೆಸ್ ನಾಯಕರಿಗಿದ್ದ ಕೆಂಡಾಮಂಡಲ ಸಿಟ್ಟಿನ ಕಾರಣಕ್ಕೆ,ಅವರ ಕೃಪೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿದ್ದ ಸುಮಲತಾ ಅಂಬರೀಶ್ ಅವರಿಗೆ ಜಿಲ್ಲೆಯ ಮತದಾರರು ಮರುಳಾಗದಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.
ಕಳೆದ ವಿಧಾನಸಭಾ ಚುನಾವಣೆಗೆ ಒಂದೆರಡು ತಿಂಗಳ ಮುಂಚೆ ಬಿಜೆಪಿ ಪಕ್ಷಕ್ಕೆ ಅಧಿಕೃತ ಬೆಂಬಲ ಘೋಷಿಸಿದ್ದ ಸುಮಲತಾ ಅಂಬರೀಶ್, ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಮಾಡಿದ್ದರು.
ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೊತೆಗಿದ್ದ ಸುಮಲತಾ ಅಂಬರೀಶ್ ನಂತರ ಬಿರುಸಿನ ಪ್ರಚಾರ ನಡೆಸಿದ್ದರು. ಆದರೆ ಅವರ ಪ್ರಚಾರದಿಂದ ಅಷ್ಟೇನೂ ಪ್ರಯೋಜನವಾಗಿಲ್ಲ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಷಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಂದಾಗ ಅವರೊಟ್ಟಿಗೆ ಸುಮಲತಾ ಅಂಬರೀಶ್ ಪ್ರಚಾರ ಮಾಡಿದ್ದರು.ಆದರೆ ಜಿಲ್ಲೆಯ ಜನರು ಸುಮಲತಾ ಮಾತಿಗೆ ಮಣೆ ಹಾಕಿಲ್ಲದಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ,
ಸಚ್ಚಿದಾನಂದ ವೈಯಕ್ತಿಕ ಶ್ರಮ

ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ 42,306 ಮತಗಳನ್ನು ಪಡೆಯುವ ಮೂಲಕ ಅಚ್ಚರಿಯ ಸಾಧನೆ ಮಾಡಿದ್ದಾರೆ.
ಈ ಕ್ಷೇತ್ರದಲ್ಲಿ ಸಚ್ಚಿದಾನಂದ ಅವರ ವೈಯಕ್ತಿಕ ವರ್ಚಸ್ಸು,ಶ್ರಮ ಕೆಲಸ ಮಾಡಿದೆಯೇ ಹೊರತು ಸುಮಲತಾ ಅಂಬರೀಶ್ ಅಂತಹ ಮತಗಳನ್ನು ಸೆಳೆದಿಲ್ಲ ಎಂದು ಬಿಜೆಪಿ ಕಾರ್ಯಕರ್ತರೇ ಮಾತನಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ನೇರ ಹಣಾಹಣಿ ನಡೆಯುತ್ತದೆ 2019ರಲ್ಲಿ

ಜೆಡಿಎಸ್ ಪಕ್ಷಕ್ಕೆ ಕೈ ಕೊಟ್ಟು ನಾರಾಯಣಗೌಡ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿ ಖಾತೆ ತೆರೆದಿದ್ದರು. ಆದರೆ ಈ ಚುನಾವಣೆಯಲ್ಲಿ ಅವರು 38,151 ಮತ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ 30, 661 ಮತಗಳನ್ನು ಪಡೆದರೆ, ಮದ್ದೂರಿನಲ್ಲಿ ಎಸ್.ಪಿ. ಸ್ವಾಮಿ 28,996 ಮತಗಳನ್ನು ಗಳಿಸಿದ್ದಾರೆ.

ಮಳವಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರಾಜು 25,116 ಮತಗಳನ್ನು ಪಡೆದರೆ, ನಾಗಮಂಗಲದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮೇಗೌಡ ಕೇವಲ 7,769 ಮತಗಳನ್ನು, ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್ 6,470 ಮತಗಳನ್ನು ಗಳಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಲತಾ ಅಂಬರೀಶ್ ಅವರ ಮ್ಯಾಜಿಕ್ ಏನೂ ನಡೆದಿಲ್ಲ.ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿರುವುದು ಗಮನಿಸಬೇಕಾದ ಅಂಶ.




