Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೊಹರಂ ಆಚರಣೆ….ವೈಚಾರಿಕ ಮನೋಭಾವ ಇರಲಿ, ಹಿಂಸೆಯ ಪ್ರಚೋದನೆ ಬೇಡ…

✍️ವಿವೇಕಾನಂದ ಎಚ್.ಕೆ

ಭಾವೈಕ್ಯದ ಸಂಕೇತ ಮೊಹರಂ……..

ಮುಸ್ಲೀಮೇತರರು ಕೂಡ ಆಚರಿಸುವ ಹಬ್ಬ….

ಎಲ್ಲರಿಗೂ ತಡವಾಗಿ ಮೊಹರಮ್ ಶುಭಾಶಯಗಳನ್ನು ಹೇಳುತ್ತಾ……

ಮೂಢನಂಬಿಕೆಯ ವಿರುದ್ಧದ ನಮ್ಮ ಧ್ವನಿ ಕೂಡ ಜಾತಿ ಧರ್ಮ ಮೀರಿ ಪ್ರಕೃತಿಯ ಮೂಲದಿಂದ ಯೋಚಿಸುತ್ತಾ ಮನುಷ್ಯ ಜೀವಿಯ ನಾಗರಿಕತೆ ಮತ್ತು ಮಾನವೀಯತೆಯೆಡೆಗೆ ನಿರಂತರ…..

ಧರ್ಮದ ಉಳಿವಿಗಾಗಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಸೇನ್ – ಹುಸೇನ್ ಹೋರಾಡಿ ಯುದ್ದದಲ್ಲಿ ಹುತಾತ್ಮರಾದ ಸಂದರ್ಭದ ನೆನಪಿಗಾಗಿ ಶಿಯಾ ಮುಸ್ಲಿಮರು ಈ ಹಬ್ಬವನ್ನು ಆಚರಿಸುತ್ತಾರೆ. ಹಬ್ಬಗಳು ಸಾಂಸ್ಕೃತಿಕ ಉತ್ಸವಗಳಾದ ಕಾರಣ ಎಲ್ಲಾ ಧರ್ಮಗಳಲ್ಲಿಯೂ ಇದೆ. ಆಚರಣೆಗಳಲ್ಲಿನ ಮೂಢನಂಬಿಕೆಗಳನ್ನು ಪ್ರಶ್ನೆ ಮಾಡುತ್ತಾ ಅದನ್ನು ಪ್ರಗತಿಪರ ಚಿಂತನೆಗೆ ಒಳಪಡಿಸುತ್ತಾ ಬದಲಾವಣೆಯ ಜಾಗೃತಿ ಮೂಡಿಸುವುದು ಸಹ ಒಂದು ನೈತಿಕ ಮಾನವ ಧರ್ಮ…..

ಈ ಹಬ್ಬದ ನೆನಪಿನ ಉತ್ಸವ ಸ್ವೀಕಾರಾರ್ಹ. ಆದರೆ ಆಚರಣೆಯ ಒಂದು ಭಾಗವಾದ ” ಅಲಿ ದೂಲ ” ಎಂದು ಕೂಗುತ್ತಾ ಎದೆ ಮತ್ತು ಬೆನ್ನಿನ ಭಾಗಕ್ಕೆ ಉದ್ರೇಕಕಾರಿಯಾಗಿ ಮತ್ತು ಭಾವನಾತ್ಮಕವಾಗಿ ಕೈ ಮತ್ತು ಆಯುಧಗಳಿಂದ ಹೊಡೆದುಕೊಂಡು ರಕ್ತ ಸುರಿಸುವುದು ಖಂಡಿತ ಒಳ್ಳೆಯ ಸಂಪ್ರದಾಯವಲ್ಲ. ಅದು ಪರೋಕ್ಷವಾಗಿ ಹಿಂಸಾ ಮನೋಭಾವವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಅದೊಂದು ಮೂಡ ನಂಬಿಕೆ. ಅದಕ್ಕೆ ಏನೇ ಸಾಂಪ್ರದಾಯಿಕ ಹಿನ್ನೆಲೆ ಮತ್ತು ಅರ್ಥ ಇರಬಹುದು. ಆದರೆ ಅದನ್ನು ಖಂಡಿತ ಬದಲಾಯಿಸಿಕೊಳ್ಳುವ ಮತ್ತು ಪರ್ಯಾಯವಾಗಿ ಏನಾದರೂ ಸಾಂಕೇತಿಕ ಆಚರಣೆ ರೂಪಿಸಿಕೊಳ್ಳುವುದು ಒಳ್ಳೆಯದು…..

ಇರಾನ್ ನಂತ ಕಟ್ಟಾ ಇಸ್ಲಾಮಿಕ್ ರಾಷ್ಟ್ರದಲ್ಲಿ ಕೂಡ ಬದಲಾವಣೆಯ ಗಾಳಿ ಬೀಸುತ್ತಿದೆ. ಅಲ್ಲಿನ ಮಹಿಳಾ ಕಬಡ್ಡಿ ಆಟಗಾರರು ಎಲ್ಲರಂತೆ ಬಹುತೇಕ ಚಡ್ಡಿ ರೂಪದ ವಸ್ತ್ರ ತೊಟ್ಟು ವಿಶ್ವ ಚಾಂಪಿಯನ್ ಆದರು. ಅದಕ್ಕೆ ಇರಾನ್ ದೇಶ ಅನುಮತಿ ನೀಡಿದೆ. ಅರಬ್ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಚಾಲನಾ ಪರವಾನಗಿ ನೀಡಲಾಗುತ್ತಿದೆ. ಇರಾನ್ ನಲ್ಲಿ ಮಹಿಳೆಯರು ಹಿಜಾಬ್ ವಿರುದ್ಧ ಜೀವನ್ಮರಣದ ಹೋರಾಟ ಮಾಡುತ್ತಿದ್ದಾರೆ…..

ಈ ಎಲ್ಲಾ ಆಧುನಿಕ ಬದಲಾವಣೆಗಳ ಸಂದರ್ಭದಲ್ಲಿ ಭಾರತದ ಮೊಹರಮ್ ಆಚರಣೆಯ ಈ ಹಿಂಸಾತ್ಮಕ ದೇಹ ದಂಡನೆಯೂ ಬದಲಾದರೆ ಉತ್ತಮ ಎಂದು ಮುಸ್ಲಿಂ ಧರ್ಮದ ಪ್ರಗತಿಪರರು ಯೋಚಿಸಬೇಕು….

ಇತ್ತೀಚೆಗೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ 3 ಉಡಾವಣೆಯ ಸಮಯದಲ್ಲಿ ತಿರುಪತಿ ವೆಂಕಟೇಶ್ವರರ ಆಶೀರ್ವಾದ ಪಡೆದಾಗ ಕೆಲವು ಪ್ರಗತಿಪರರು ವಿರೋಧಿಸಿದ್ದು ಕೂಡ ಇದೇ ಆಧಾರದಲ್ಲಿ. ಗ್ರಹಣ ಕಾಲದ ಆಹಾರ ಸೇವನೆಯ ಹೋರಾಟ ಸಹ ಇದರ ಒಂದು ಭಾಗ. ಏಕೆಂದರೆ ಕೆಲವು ಆಚರಣೆಗಳಲ್ಲಿ ವೈಯಕ್ತಿಕವಾಗಿ ಯಾವುದೇ ನಷ್ಟವಿಲ್ಲದಿದ್ದರು ಮೂಢನಂಬಿಕೆ ಯಶಸ್ಸು ಪಡೆದರೆ ಅದನ್ನೇ ಮೂಲಭೂತವಾದಿಗಳು ಅಮಾಯಕ ಜನರನ್ನು ಶೋಷಿಸಲು ಉಪಯೋಗಿಸಿಕೊಳ್ಳುತ್ತಾರೆ……

ಬದಲಾವಣೆ ಜಗದ ನಿಯಮ. ಆದರೆ ಬದಲಾವಣೆಯ ದಿಕ್ಕು ಮಾತ್ರ ಸದಾ ಜೀವಪರ, ನಾಗರಿಕತೆಯ ಪರ ಇರಬೇಕು. ಹಿಂಸೆಯ ವಿರುದ್ಧವಾಗಿ ಇರಬೇಕು. ಇಲ್ಲದಿದ್ದರೆ ಬದಲಾವಣೆಗಳು ಧರ್ಮ ವಿರೋಧಿ ಮತ್ತು ಮಾನವ ವಿರೋಧಿಯಾಗಿ ಜನರಿಗೆ ಮಾರಕವಾಗುವ ಸಾಧ್ಯತೆ ಇರುತ್ತದೆ…..

ಇಸ್ಲಾಂ ಕ್ರೈಸ್ತ ಹಿಂದೂ ಸಿಖ್ ಬಸವ ಬೌದ್ದ ಜೈನ ಪಾರ್ಸಿ ಮುಂತಾದ ಎಲ್ಲವೂ ಶಾಂತಿಯ ಪರವೇ. ಆದರೆ ಆಚರಣೆಗಳಲ್ಲಿ ಮೌಡ್ಯವಿದ್ದು ಅವು ಭಕ್ತಿ ಮತ್ತು ನಂಬಿಕೆಯ ಹೆಸರಿನಲ್ಲಿ ಅಮಾಯಕ ಜನರನ್ನು ಶೋಷಿಸುವ ಕಾರಣ ಅದರ ವಿರುದ್ಧ ಧ್ವನಿ ಎತ್ತಲೇ ಬೇಕು. ಆ ಧ್ವನಿ ‌ಸದಾ ನ್ಯಾಯದ ದಂಡದಂತೆ ನೇರ ಮತ್ತು ಸಮಾನಾಂತರವಾಗಿರಬೇಕು. ಪಕ್ಷಪಾತಿಯಾಗಿರಬಾರದು. ಆತ್ಮವಂಚಕ ಮನಸ್ಥಿತಿ ಹೊಂದಿರಬಾರದು. ಸಮಗ್ರ ಚಿಂತನೆಯನ್ನು ಒಳಗೊಂಡಿರಬೇಕು. ಮಾನವೀಯತೆ ಮತ್ತು ಅಭಿವೃದ್ಧಿಯ ಮುಖ ಹೊಂದಿರಬೇಕು……

ಧರ್ಮಗಳ ಮೂಲ ಆಶಯ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಹೊಂದುತ್ತಿರಬೇಕು. ಇಲ್ಲದಿದ್ದರೆ ನಿಂತ ನೀರಿನಂತೆ ಕೊಳೆಯಲಾರಂಭಿಸುತ್ತದೆ. ಹಬ್ಬಗಳ ಆಚರಣೆಯಲ್ಲಿ ಸಂಭ್ರಮವಿರಲಿ, ಉತ್ಸವವಿರಲಿ, ಪ್ರೀತಿಯಿರಲಿ, ಸೌಹಾರ್ಧತೆ ಇರಲಿ, ಎಲ್ಲರನ್ನೂ ಒಳಗೊಳ್ಳುವ ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಗುಣವಿರಲಿ, ಭಾವೈಕ್ಯತೆ ಇರಲಿ, ವೈಚಾರಿಕ ಮನೋಭಾವ ಇರಲಿ. ಆದರೆ ಹಿಂಸೆಯ ಪ್ರಚೋದನೆ, ಮೌಢ್ಯ ಇರಬಾರದು. ಇದು ಎಲ್ಲಾ ಧರ್ಮಗಳ ಎಲ್ಲಾ ಹಬ್ಬದ ಆಚರಣೆಗಳಿಗು ಸಮನಾಗಿ ಅನ್ವಯ…..

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!